

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಆಕ್ಷೇಪಾರ್ಹ ಸಂದೇಶ ಹಾಕಿದವರ ವಿರುದ್ಧ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 21 ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣದ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಟಾಗ್ರಾಮ್, ಟ್ವಿಟರ್ ಹಾಗೂ ಇನ್ನಿತರ ಆಪ್ಲಿಕೇಶನ್ಗಳಲ್ಲಿ ಧರ್ಮದ ವಿಚಾರ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಅಂಶಗಳನ್ನು ಒಳಗೊಂಡ ಸಂದೇಶಗಳು ಹೆಚ್ಚಾಗಿ ಹರಿದಾಡುತ್ತಿರುವುದು ಕಂಡು ಬರುತ್ತಿದೆ. ಇಂತಹ ಸಂದೇಶಗಳಿಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈಗಾಗಲೇ ಪ್ರಕರಣಗಳು ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.
ನಗರದ ಎಲ್ಲ ಪೊಲೀಸ್ ಠಾಣೆಗಳ ಹಾಗೂ ಸೋಷಿಯಲ್ ಮೀಡಿಯಾ ಸೆಲ್ಗಳಲ್ಲಿ ಧರ್ಮದ ವಿಚಾರವಾಗಿ ಪರ ಮತ್ತು ವಿರೋಧ ಸಂದೇಶಗಳನ್ನು ಪೋಸ್ಟ್, ಶೇರ್ ಮತ್ತು ಕಾಮೆಂಟ್ ಮಾಡುವ ವ್ಯಕ್ತಿಗಳ ಮೇಲೆ ಸೂಕ್ತ ನಿಗಾ ವಹಿಸಲಾಗುತ್ತಿದೆ. ಕಾನೂನು ಉಲ್ಲಂಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇದೇ ರೀತಿಯಲ್ಲಿ ಅಪರಾಧಗಳನ್ನು ಪುನರಾವರ್ತನೆ ಮಾಡಿದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.