

ಸಿಡ್ನಿ: ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದ ಆರಂಭದಲ್ಲೇ ಮುಖಭಂಗ ಎದುರಿಸಿದೆ. ಆತಿಥೇಯ ಆಸ್ಟ್ರೇಲಿಯಾ ತಂಡದ ಮತ್ತೊಂದು ಪ್ರಚಂಡ ಬ್ಯಾಟಿಂಗ್ ನಿರ್ವಹಣೆ ಎದುರು ಮಂಕಾದ ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ 51 ರನ್ಗಳಿಂದ ಸೋಲು ಕಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 0-2ರಿಂದ ಸೋಲು ಅನುಭವಿಸಿದೆ. ಸರಣಿಯ ಅಂತಿಮ ಪಂದ್ಯ ಬುಧವಾರ ಕ್ಯಾನ್ಬೆರಾದಲ್ಲಿ ನಡೆಯಲಿದೆ.
ಸತತ 2ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ತಂಡ ಕಳೆದ ಪಂದ್ಯಕ್ಕಿಂತಲೂ ಸದೃಢ ಬ್ಯಾಟಿಂಗ್ ನಿರ್ವಹಣೆ ತೋರಿ 4 ವಿಕೆಟ್ಗೆ 389 ರನ್ ಪೇರಿಸಿತು. ಸ್ಟೀವನ್ ಸ್ಮಿತ್ (104 ರನ್, 64 ಎಸೆತ, 14 ಬೌಂಡರಿ, 2 ಸಿಕ್ಸರ್) ಮತ್ತೊಂದು ಸ್ಫೋಟಕ ಶತಕ ಸಿಡಿಸಿದರೆ, ಡೇವಿಡ್ ವಾರ್ನರ್ (83 ರನ್, 77 ಎಸೆತ, 7 ಬೌಂಡರಿ, 3 ಸಿಕ್ಸರ್), ನಾಯಕ ಆರನ್ ಫಿಂಚ್ (60 ರನ್, 69 ಎಸೆತ, 6 ಬೌಂಡರಿ, 1 ಸಿಕ್ಸರ್), ಮಾರ್ನಸ್ ಲಬುಶೇನ್ (70 ರನ್, 61 ಎಸೆತ, 5 ಬೌಂಡರಿ) ಮತ್ತು ಗ್ಲೆನ್ ಮ್ಯಾಕ್ಸ್ವೆಲ್ (63*ರನ್, 29 ಎಸೆತ, 4 ಬೌಂಡರಿ, 4 ಸಿಕ್ಸರ್) ಸಮರ್ಥ ಬೆಂಬಲ ಒದಗಿಸಿದರು. ಪ್ರತಿಯಾಗಿ ಭಾರತ ತಂಡ ದಿಟ್ಟ ಚೇಸಿಂಗ್ ನಡೆಸುವ ಪ್ರಯತ್ನ ನಡೆಸಿದರೂ, ಆಸೀಸ್ ಸಂಘಟಿತ ಬೌಲಿಂಗ್ ದಾಳಿ ಎದುರು ಮುಗ್ಗರಿಸಿತು. ನಾಯಕ ವಿರಾಟ್ ಕೊಹ್ಲಿ (89 ರನ್, 87 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ಕನ್ನಡಿಗ ಕೆಎಲ್ ರಾಹುಲ್ (76 ರನ್, 66 ಎಸೆತ, 4 ಬೌಂಡರಿ, 5 ಸಿಕ್ಸರ್) ಪ್ರತಿಹೋರಾಟದ ನಡುವೆಯೂ ಭಾರತ ತಂಡ 9 ವಿಕೆಟ್ಗೆ 338 ರನ್ ಗಳಿಸಲಷ್ಟೇ ಶಕ್ತವಾಯಿತು.
ಆಸ್ಟ್ರೇಲಿಯಾ: 4 ವಿಕೆಟ್ಗೆ 389 (ವಾರ್ನರ್ 83, ಫಿಂಚ್ 60, ಸ್ಟೀವನ್ ಸ್ಮಿತ್ 104, ಲಬುಶೇನ್ 70, ಗ್ಲೆನ್ ಮ್ಯಾಕ್ಸ್ವೆಲ್ 63*, ಶಮಿ 73ಕ್ಕೆ 1, ಬುಮ್ರಾ 79ಕ್ಕೆ 1, ಪಾಂಡ್ಯ 24ಕ್ಕೆ 1), ಭಾರತ: 9 ವಿಕೆಟ್ಗೆ 338 (ಮಯಾಂಕ್ 28, ಧವನ್ 30, ಕೊಹ್ಲಿ 89, ಶ್ರೇಯಸ್ ಅಯ್ಯರ್ 38, ಕೆಎಲ್ ರಾಹುಲ್ 76, ಹಾರ್ದಿಕ್ ಪಾಂಡ್ಯ 28, ಜಡೇಜಾ 24, ಕಮ್ಮಿನ್ಸ್ 67ಕ್ಕೆ 3, ಹ್ಯಾಸಲ್ವುಡ್ 59ಕ್ಕೆ 2, ಆಡಂ ಜಂಪಾ 62ಕ್ಕೆ 2, ಹೆನ್ರಿಕ್ಸ್ 34ಕ್ಕೆ 1, ಮ್ಯಾಕ್ಸ್ವೆಲ್ 34ಕ್ಕೆ 1).