ದೀರ್ಘಾವಧಿಯ ಆರ್ಥಿಕ ಬೆಳವಣಿಗಾಗಿ ಆಯ್ದುಕೊಳ್ಳಿ ಥೀಮ್ಯಾಟಿಕ್ ಫಂಡ್ ಆಫ್ ಫಂಡ್ಸ್! Smart Investing

Smart Investing
Published on

| ಪ್ರಮೋದ್​ ಆರ್. ಮ್ಯೂಚುವಲ್​ ಫಂಡ್​ ವಿತರಕರು​

Smart Investing : ಆರ್ಥಿಕವಾಗಿ ಬೆಳವಣಿಗೆ ಹೊಂದಲು ಕೇವಲ ದುಡಿದರೆ ಸಾಲದು. ಗಳಸಿದ ಹಣವನ್ನು ಸರಿಯಾಗಿ ಹೂಡಿಕೆ ಮಾಡುವುದು ತುಂಬಾನೇ ಮುಖ್ಯ. ಒಂದಿಷ್ಟು ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದರೆ, ಭವಿಷ್ಯದಲ್ಲಿ ಆ ಹಣ ಬದುಕಿಗೆ ಭರವಸೆಯಾಗುತ್ತದೆ. ಹೂಡಿಕೆಯಂತ ಬಂದಾಗ ಅನೇಕ ವಲಯಗಳಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕಿಂತ ಒಂದು ದೊಡ್ಡ ವಲಯ ಅಥವಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದು ಉತ್ತಮವೇ? ಎಂಬ ಪ್ರಶ್ನೆ ಕಾಡುತ್ತದೆ. ಇದಕ್ಕೆ ಮಾರುಕಟ್ಟೆ ತಜ್ಞರು ನೀಡುವ ಉತ್ತರ ಏನೆಂದರೆ, ಖಂಡಿತ ಉತ್ತಮವಲ್ಲ ಎಂಬುದು. ಬದಲಿಗೆ ಒಂದು ನಿರ್ದಿಷ್ಟ ಥೀಮ್​ನ ಅಡಿಯಲ್ಲಿ ವಿವಿಧ ಕ್ಷೇತ್ರಗಳ ಮೇಲೆ ಹೂಡಿಕೆ ಮಾಡುವುದರಿಂದ ಉತ್ತಮ ಆದಾಯ ಗಳಿಸಬಹುದು. ಇದಕ್ಕೆ ಒಂದು ಉತ್ತಮ ಆಯ್ಕೆಯೆಂದರೆ, ಥಿಮ್ಯಾಟಿಕ್​ ಫಂಡ್ ಆಫ್ ಫಂಡ್ಸ್ (FoF) ಸ್ಕೀಮ್​. ಇದು ಉತ್ತಮ ಆದಾಯವನ್ನು ಮಾತ್ರವಲ್ಲದೆ ಹೆಚ್ಚು ಸ್ಥಿರವಾದ ಆದಾಯವನ್ನೂ ನೀಡುತ್ತದೆ.

ಥೀಮ್ಯಾಟಿಕ್ ಫಂಡ್ ಆಫ್ ಫಂಡ್ಸ್ (FoFs) ಒಂದು ರೀತಿಯ ಮ್ಯೂಚುವಲ್ ಫಂಡ್ ಆಗಿದೆ. ಇದು ಕೇವಲ ಒಂದು ವಲಯವನ್ನು ಆಯ್ದುಕೊಳ್ಳದೆ, ನಿರ್ದಿಷ್ಟ ವಿಷಯ ಅಥವಾ ಥೀಮ್ (ಉದಾಹರಣೆ: ತಂತ್ರಜ್ಞಾನ, ಆರೋಗ್ಯ, ಇಂಧನ, ಬ್ಯಾಂಕಿಂಗ್​, ಟೆಕ್ನಾಲಜಿ, ಮೂಲಸೌಕರ್ಯ ಮತ್ತು ಗ್ರಾಹಕ ವಸ್ತುಗಳು ಇತ್ಯಾದಿ) ಆಧಾರಿತ ಷೇರುಗಳು ಅಥವಾ ಇತರ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಏನೆಂದರೆ, ಈ ಥೀಮ್​ನ ಅಡಿಯಲ್ಲಿ ಹೂಡಿಕೆಯನ್ನು ಸಮಾನವಾಗಿ ಹಂಚಿಕೆ ಮಾಡುವುದಿಲ್ಲ. ಬದಲಾಗಿ ಆರ್ಥಿಕತೆಯಲ್ಲಿ ಅಥವಾ ಷೇರು ಮಾರುಕಟ್ಟೆಯಲ್ಲಿ ಏನಾಗುತ್ತಿದೆ? ಎಂಬುದರ ಆಧಾರದ ಮೇಲೆ ನಿಧಿ ವ್ಯವಸ್ಥಾಪಕರು ಹೂಡಿಕೆಯನ್ನು ಸರಿಯಾಗಿ ಹಂಚಿಕೆ ಮಾಡುತ್ತಾರೆ.

ಉದಾಹರಣೆಗೆ, ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದ್ದರೆ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕಡೆಗೆ ಥೀಮ್ಯಾಟಿಕ್ ಫಂಡ್ ಆಫ್ ಫಂಡ್ಸ್ ಹೆಚ್ಚು ಒಲವು ತೋರಬಹುದು. ಒಂದು ವೇಳೆ ಆರ್ಥಿಕ ಬೆಳವಣಿಗೆ ನಿಧಾನಗತಿಯಲ್ಲಿದ್ದರೆ, ದೈನಂದಿನ ಸರಕುಗಳಂತಹ ಸ್ಥಿರ ವಲಯಗಳ ಕಡೆಗೆ ನಿಧಿಯ ಹಂಚಿಕೆ ಬದಲಾಗಬಹುದು. ಇಲ್ಲಿ ನಿಧಿಯ ಹಂಚಿಕೆ ದೇಶದ GDP ಬೆಳವಣಿಗೆ, ಸರ್ಕಾರಿ ಖರ್ಚು ಮತ್ತು ಮಾರುಕಟ್ಟೆ ಟ್ರೆಂಡ್​ಗಳ ಡೇಟಾವನ್ನು ಆಧರಿಸಿವೆ. ನಿಧಿಯ ವ್ಯವಸ್ಥಾಪಕರು ನಿಧಿ ಹಂಚಿಕೆಯ ಮುನ್ನ ವಲಯ ಅಥವಾ ಕ್ರೇತ್ರದ ಇತಿಹಾಸ ಮತ್ತು ಒಟ್ಟಾರೆ ಮಾರುಕಟ್ಟೆಗೆ ಹೋಲಿಸಿದರೆ ಎಷ್ಟು ದುಬಾರಿ ಅಥವಾ ಅಗ್ಗವಾಗಿದೆ ಎಂಬುದನ್ನು ಸಹ ನೋಡುತ್ತಾರೆ. ಹೀಗಾಗಿ ಇಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತವಾಗಿದೆ.

ಥೀಮ್ಯಾಟಿಕ್ ಫಂಡ್ ಆಫ್ ಫಂಡ್ಸ್ ಸ್ಕೀಮ್​ನಲ್ಲಿರುವ ಮತ್ತೊಂದು ಪ್ರಯೋಜನವೇನೆಂದರೆ, ಇದು ನಿರಂತರವಾಗಿ ನಿಧಿ ಹಂಚಿಕೆಯನ್ನು ಮರುಸಮತೋಲನ ಮಾಡುತ್ತದೆ. ನಿಧಿಯ ವ್ಯವಸ್ಥಾಪಕರು ನಿಮ್ಮ ಪೋರ್ಟ್​ಫೋಲಿಯೋವನ್ನು ಆಗಾಗ ಪರಿಶೀಲಿಸಿ ಮತ್ತು ಹೊಂದಿಸುವ ಮೂಲಕ ಎಲ್ಲಿಯೂ ಆರ್ಥಿಕವಾಗಿ ಹಳಿತಪ್ಪಲು ಬಿಡುವುದಿಲ್ಲ. ಅಲ್ಲದೆ, ತೆರಿಗೆ-ಪರಿಣಾಮಕಾರಿ ರೀತಿಯಲ್ಲಿ ಮಾಡುತ್ತಾರೆ, ಇದರಿಂದಾಗಿ ಹೂಡಿಕೆದಾರರಿಗೆ ಲಾಭದ ಮೇಲೆ ಆಗಾಗ್ಗೆ ತೆರಿಗೆಗಳನ್ನು ವಿಧಿಸುವುದಿಲ್ಲ. ಇಲ್ಲಿ ತೆರಿಗೆಗಳ ಬಗ್ಗೆ ಹೇಳುವುದಾದರೆ, ನೀವು ಈ ನಿಧಿಗಳನ್ನು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಹೊಂದಿದ್ದರೆ, ನೀವು ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆಯಲ್ಲಿ ಕೇವಲ 12.5% ​​ಅನ್ನು ಮಾತ್ರ ಪಾವತಿಸುತ್ತೀರಿ. ಇದು ನೇರ ಸ್ಟಾಕ್ ಹೂಡಿಕೆಗಳ ಮೇಲಿನ ಸಾಮಾನ್ಯ ತೆರಿಗೆ ದರಕ್ಕಿಂತ ತುಂಬಾ ಕಡಿಮೆಯಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಥೀಮ್ಯಾಟಿಕ್ ಫಂಡ್ ಆಫ್ ಫಂಡ್ಸ್ ನಿಮಗೆ ಸಾಕಷ್ಟು ಉದಯೋನ್ಮುಖ ಅವಕಾಶಗಳನ್ನು ನೀಡುತ್ತದೆ. ಇದು ವಿಶೇಷವಾಗಿ ಒಂದು ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು ಹೂಡಿಕೆ ಮಾಡಲು ಬಯಸುವವರಿಗೆ ಸೂಕ್ತವಾಗಿದೆ. ಆದರೆ, ಸ್ವತಃ ಷೇರುಗಳನ್ನು ಆಯ್ಕೆ ಮಾಡದೆ ಫಂಡ್ ಮ್ಯಾನೇಜರ್‌ಗಳ ವೃತ್ತಿಪರ ಜ್ಞಾನವನ್ನು ಇದು ಅವಲಂಬಿಸುತ್ತದೆ. ಭಾರತದ ಬೆಳವಣಿಗೆಯ ಹಾದಿಯಲ್ಲಿ ಸವಾರಿ ಮಾಡಲು ಬಯಸುವ ದೀರ್ಘಕಾಲೀನ ಹೂಡಿಕೆದಾರರಿಗೆ ಇದು ಒಂದು ಉತ್ತಮ ಆಯ್ಕೆಯಾಗಿದೆ.

ಹೂಡಿಕೆದಾರರು ಪರಿಗಣಿಸಬಹುದಾದ ಅಂತಹ ಒಂದು ನಿಧಿಯೆಂದರೆ ಐಸಿಐಸಿಐ ಪ್ರುಡೆನ್ಶಿಯಲ್ ಥೀಮ್ಯಾಟಿಕ್ ಅಡ್ವಾಂಟೇಜ್ ಫಂಡ್ (ಎಫ್‌ಒಎಫ್). ಈ ಸ್ಕೀಮ್​ ವಿವಿಧ ವಲಯಗಳು ಮತ್ತು ಥೀಮ್‌ಗಳಲ್ಲಿ ಹೂಡಿಕೆ ಮಾಡುವ ಗುರಿಯನ್ನು ಹೊಂದಿದೆ. ಈ ಎಫ್‌ಒಎಫ್ ಸ್ಕೀಮ್​, 2025, ಜುಲೈ 30ರ ಹೊತ್ತಿಗೆ ಒಂದು ವರ್ಷದಲ್ಲಿ 8.23% ಲಾಭವನ್ನು ತಂದುಕೊಟ್ಟಿದೆ. ದೀರ್ಘಾವಧಿಯಲ್ಲಿ ಅಂದರೆ, ಮೂರು ವರ್ಷಗಳಲ್ಲಿ ಶೇ. 20.68% ಮತ್ತು ಐದು ವರ್ಷಗಳಲ್ಲಿ 26.08 ರಷ್ಟು CAGR ನೊಂದಿಗೆ ಬಲವಾದ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net