ದುಬೈ, ಅಬು ಧಾಬಿ, ಮಸ್ಕತ್‌ ಕನ್ನಡಿಗರು ನೋಡಾಯ್ತು 'ಎಸ್.ಎಲ್.ವಿ'

SLV 4 - Final
Published on

ಬೆಂಗಳೂರು: ಕನ್ನಡದ ಸಿನಿಮಾಗಳು ಇಲ್ಲಿ ಬಿಡುಗಡೆಯಾಗುವುದಕ್ಕಿಂತ ಮೊದಲೇ ಬೇರೆ ದೇಶಗಳಲ್ಲಿ ಪ್ರೀಮಿಯರ್​ ಆಗುವುದು ಹೊಸ ವಿಷಯವಲ್ಲ. ಈಗ 'ಎಸ್​.ಎಲ್​.ವಿ' ಎಂಬ ಹೊಸಬರ ಚಿತ್ರವು ಈಗಾಗಲೇ ದುಬೈ, ಅಬು ಧಾಬಿ, ಮಸ್ಕತ್​ ಮುಂತಾದ ಕಡೆ ಪ್ರದರ್ಶನಗೊಂಡು, ಅಲ್ಲಿನ ಕನ್ನಡಿಗರಿಂದ ಮೆಚ್ಚುಗೆ ಪಡೆದಿದೆ.

ದಿವಂಗತ ನಿರೂಪಕ ಸಂಜೀವ ಕುಲಕರ್ಣಿ ಪುತ್ರ ಸೌರಭ ಕುಲಕರ್ಣಿ ನಿರ್ದೇಶಿಸಿರುವ ಚಿತ್ರ 'ಎಸ್.ಎಲ್.ವಿ'. ಕಳೆದ ವರ್ಷವೇ ಪ್ರಾರಂಭವಾಗಿದ್ದ ಚಿತ್ರ, ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮೊದಲ ಹಂತವಾಗಿ ವಿದೇಶಗಳಲ್ಲಿ ಚಿತ್ರದ ವಿಶೇಷ ಪ್ರದರ್ಶನ ಮಾಡಲಾಗಿದೆ.

'ಎಸ್​.ಎಲ್​.ವಿ' ಎಂದರೆ ಸಿರಿ ಲಂಬೋದರ ವಿವಾಹ ಎಂದರ್ಥ. ಈ ಚಿತ್ರದಲ್ಲಿ ನಾಯಕ ಹಾಗೂ ನಾಯಕಿ ವೆಡ್ಡಿಂಗ್‌ ಪ್ಲಾನರ್ಸ್‌ಗಳಾಗಿದ್ದು, ಸಿರಿ ಹಾಗೂ ಲಂಬೋದರ ಎನ್ನುವವರ ವಿವಾಹ ಮಾಡಿಸಲು ನಾಯಕ-ನಾಯಕಿ ಸಿದ್ಧರಾಗುತ್ತಾರೆ. ಅಲ್ಲಿ ನಡೆಯುವ ಒಂದಷ್ಟು ಹಾಸ್ಯಮಯ, ಭಾವನಾತ್ಮಕ ಹಾಗೂ ರೋಚಕ ಸನ್ನಿವೇಶಗಳ ಈ ಚಿತ್ರ ಎನ್ನುತ್ತಾರೆ ಸೌರಭ್​.

ಈ ಹಿಂದೆ 'ಪಾ ಪ ಪಾಂಡು' ಧಾರಾವಾಹಿಯಲ್ಲಿ ಪುಂಡನಾಗಿ ಕಾಣಿಸಿಕೊಂಡಿದ್ದ ಅಂಜನ್‌ ಎ ಭಾರದ್ವಾಜ್‌ ಮತ್ತು ಮಂಡ್ಯ ರಮೇಶ್‌ ಪುತ್ರಿ ದಿಶಾ ರಮೇಶ್‌ ಈ ಚಿತ್ರದ ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಜತೆಗೆ ರಾಜೇಶ್‌ ನಟರಂಗ, ಸುಂದರ್‌ ವೀಣಾ, ಬಲ ರಾಜವಾಡಿ, ರೋಹಿತ್‌ ನಾಗೇಶ್‌, ಪಿ ಡಿ ಸತೀಶ್‌ಚಂದ್ರ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಎಸ್​.ಎಲ್​.ವಿ' ಚಿತ್ರಕ್ಕೆ ಕಿಟ್ಟಿ ಕೌಶಿಕ್‌ ಛಾಯಾಗ್ರಹಣ, ಸಂಘರ್ಷ್‌ ಕುಮಾರ್‌ ಸಂಗೀತವಿದೆ. ವರ್ಸ್ಯಾಟೋ ವೆಂಚ್ಯೂರ್ಸ್‌, ಪವಮಾನ ಕ್ರಿಯೇಷನ್ಸ್‌, ಫೋರೆಸ್‌ ನೆಟ್‌ವರ್ಕ್‌ ಸಲ್ಯೂಷನ್ಸ್‌ ಹಾಗೂ ಧೂಪದ ದೃಶ್ಯ ಬ್ಯಾನರ್‌ ಸಂಸ್ಥೆಗಳಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net