ಹೊಸ ಲುಕ್‌ನಲ್ಲಿ ಸ್ಲಂ ಮಕ್ಕಳು : ಬೋಳಾರ ಶಾಲೆ ಮುಖ್ಯಶಿಕ್ಷಕಿಯ ಮುಖದಲ್ಲಿ ಮಂದಹಾಸ

children
Published on

ಅನ್ಸಾರ್ ಇನೋಳಿ ಉಳ್ಳಾಲ

ಬೋಳಾರ ಶಾಲೆಯ ಮುಖ್ಯಶಿಕ್ಷಕಿಯ ಶ್ರಮದ ಫಲವಾಗಿ ಶಾಲೆಗೆ ಕಾಲಿಟ್ಟಿದ್ದ ಹೊರರಾಜ್ಯದ ಮಕ್ಕಳು ಈಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಕನ್ನಡ ಅಕ್ಷರಗಳನ್ನು ಗುರುತು ಹಿಡಿಯುತ್ತಿದ್ದು, ನಾಡಗೀತೆಯ ಸಾಲು ಹಾಡ ತೊಡಗಿದ್ದಾರೆ. ಕ್ಷಿಪ್ರವಾಗಿ ನಡೆದ ಬೆಳವಣಿಗೆ ಮುಖ್ಯಶಿಕ್ಷಕಿಯ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

1913ರಲ್ಲಿ ಸ್ಥಾಪನೆಗೊಂಡು 111 ವರ್ಷಗಳ ಸುದೀರ್ಘ ಇತಿಹಾಸವಿರುವ ಬೋಳಾರ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ವೆಸ್ಟ್ (ಉರ್ದು) ಶಾಲೆಯಲ್ಲಿ ಆಗಸ್ಟ್ ಅಂತ್ಯದವರೆಗೆ ಇದ್ದ ಮಕ್ಕಳ ಸಂಖ್ಯೆ 6. ಆದರೆ ಸೆಪ್ಟೆಂಬರ್ 5 ಆಗುವಾಗ ಮಕ್ಕಳ ಸಂಖ್ಯೆ 50 ದಾಟಿತ್ತು. ಇದಕ್ಕೆ ಕಾರಣವಾಗಿದ್ದು ಮುಖ್ಯಶಿಕ್ಷಕಿ ಗೀತಾ ಜುಡಿತ್ ಸಲ್ದಾನ. ಕ್ಲಸ್ಟರ್ ಸಿಆರ್‌ಪಿ ಆಗಿದ್ದ ಅವರು ಸೆ.1ರಂದು ಮುಖ್ಯಶಿಕ್ಷಕಿಯಾಗಿ ಶಾಲೆಗೆ ಬಂದು ಮಕ್ಕಳ ಸಂಖ್ಯೆ ಹೆಚ್ಚಿಸಲು ಬೋಳಾರ ಸ್ಲಂ ಪರಿಸರ ತಿರುಗಾಡಿ ಬಿಹಾರ ಮೂಲದ ಮೀನಿನ ಕಾರ್ಖಾನೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಸೇರಿಸಿದ ಪರಿಣಾಮ ಪ್ರಸ್ತುತ 52 ಮಕ್ಕಳಿದ್ದಾರೆ.

ವಿಜಯವಾಣಿ ವರದಿ ಅಂತಾರಾಷ್ಟ್ರೀಯ ಸುದ್ದಿ!

ಈ ಶಾಲೆ ಬಗ್ಗೆ ‘ವಿಜಯವಾಣಿ’ ಸೆ.13ರ ಸಂಚಿಕೆಯಲ್ಲಿ ಪ್ರಥಮ ಬಾರಿಗೆ ವರದಿ ಪ್ರಕಟಿಸಿತ್ತು. ಇದರ ಬಳಿಕ ಶಾಲೆಯತ್ತ ಮಾಧ್ಯಮಗಳು ಲಗ್ಗೆಯಿಟ್ಟಿವೆ. ಪ್ರಸ್ತುತ ಈ ಶಾಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಮುಖ್ಯಶಿಕ್ಷಕಿ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಶಾಲೆಗೆ ಸವಲತ್ತು ಒದಗಿಸಲು ಶಿಕ್ಷಣ ಪ್ರೇಮಿಗಳು ಮುಂದಾಗಿದ್ದಾರೆ.

ಶಾಲೆಗೆ ಕಾಲಿಡುವ ಸಂದರ್ಭ ಕೊಳಕು ವಸ್ತ್ರ ಧರಿಸಿ ಬಂದಿದ್ದ ಮಕ್ಕಳು ಈಗ ಸ್ವಚ್ಛತೆ ಕಂಡುಕೊಂಡಿದ್ದಾರೆ. ಸರ್ಕಾರಿ ಶಾಲೆಯ ಸಮವಸ್ತ್ರ ಅಲ್ಲದಿದ್ದರೂ ಬೇರೆ ಶಾಲೆಯ ಸಮವಸ್ತ್ರ ಧರಿಸಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೌರಾಷ್ಟ್ರ ಸಂಸ್ಥೆಯಿಂದ ಎರಡು ಜೊತೆ ವಸ್ತ್ರ ಮತ್ತು ಚಪ್ಪಲಿ ಕೊಡುಗೆಯಾಗಿ ನೀಡಿ ಶಿಕ್ಷಣ ಪ್ರೇಮ ಮೆರೆದಿದ್ದಾರೆ. ಮಕ್ಕಳು ಬೆಳಗ್ಗೆ ಸ್ನಾನ ಮಾಡಿ ಸಮಯಕ್ಕಿಂತ ಮೊದಲೇ ಶಾಲೆ ತಲುಪುತ್ತಿದ್ದಾರೆ. ಅಕ್ಷರದ ಗಂಧಗಾಳಿಯೂ ಗೊತ್ತಿಲ್ಲದೆ ಪೆನ್ನು, ಪೆನ್ಸಿಲ್ ಹಿಡಿಯದ ಕೈಗಳೀಗ ಕನ್ನಡ ಅಕ್ಷರ ಬರೆಯ ತೊಡಗಿದೆ. ಅಕ್ಷರದ ಗುರುತು ಹಿಡಿಯುತ್ತಿದ್ದಾರೆ. ನಾಡಗೀತೆಯ ಆರಂಭದ ಕೆಲವು ಸಾಲು ಹಾಡಲು ಕಲಿತಿದ್ದಾರೆ. ಪಾಲಕರ ಸಭೆ ನಡೆಸಲಾಗಿದ್ದು, ಎಲ್ಲ ಮಕ್ಕಳ ಪಾಲಕರು ಭಾಗವಹಿಸಿ ಶಿಕ್ಷಣದ ಮಹತ್ವ ಅರಿತುಕೊಂಡಿದ್ದಾರೆ.

ಮೀನು ಕಾರ್ಖಾನೆಯ ಮಾಲೀಕರೇ ಬಟ್ಟಲು ಮತ್ತು ಲೋಟ, ಕಲಿಕೆಗೆ ಬೇಕಾದ ಪುಸ್ತಕಗಳನ್ನು ನೀಡಿದ್ದಾರೆ. ಅಕ್ಷರ ದಾಸೋಹದಡಿ ಮಧ್ಯಾಹ್ನದ ಊಟ ಮತ್ತು ಕ್ಷೀರಭಾಗ್ಯ ಯೋಜನೆಯಡಿ ಹಾಲು ನೀಡಲಾಗುತ್ತಿದೆ.

ಶಾಲೆಗೆ ಬೇಕು ಅಗತ್ಯ ವ್ಯವಸ್ಥೆ

ಶಾಲೆಗೆ ಕೊಠಡಿ, ಶೌಚಗೃಹ, ಅಕ್ಷದ ದಾಸೋಹ ಕೊಠಡಿ ವ್ಯವಸ್ಥೆ ಸದ್ಯದ ಅಗತ್ಯತೆ. ಶಾಲೆಯ ಹಿಂಭಾಗದಲ್ಲಿ ಜಾಗವೂ ಇದೆ. ಈ ಶಾಲೆ ಇರುವುದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತಾಗಿಕೊಂಡು ಎನ್ನುವುದು ಇನ್ನೊಂದು ವಿಶೇಷ. ಇಲ್ಲಿ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳೂ ಇದ್ದು ಈ ಶಾಲೆ ಖಾಲಿಯಿದ್ದದ್ದು, ಬೆರಳೆಣಿಕೆಯ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವುದು ಹತ್ತಿರದಿಂದ ಕಂಡಿದ್ದಾರೆ. ಹೀಗಿರುವಾಗ ಶಾಲೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವುದು ಸವಾಲು ಅಲ್ಲ.

ಇನ್ನಷ್ಟು ಕಲಿಕಾ ವಸ್ತುಗಳನ್ನು ಶಿಕ್ಷಣ ಪ್ರೇಮಿಗಳು ನೀಡಿದ್ದಾರೆ. ಬೆಂಚು, ಡೆಸ್ಕ್ ತಯಾರಿಸುವ ಕಾರ್ಯ ನಡೆಯುತ್ತಿದ್ದು ಮುಖ್ಯಶಿಕ್ಷಕಿಯೇ 20 ಸಾವಿರ ರೂ. ಮುಂಗಡ ಹಣ ಪಾವತಿಸಿದ್ದಾರೆ. ಒಂದೆರಡು ದಿನಗಳಲ್ಲಿ ಶಾಲೆಗೆ ಹೊಂದುವ ಸಮವಸ್ತ್ರವೂ ರೆಡಿಯಾಗಲಿದೆ. ಗೀತಾ ಜುಡಿತ್ ಸಲ್ದಾನ, ಶಾಲಾ ಮುಖ್ಯಶಿಕ್ಷಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net