9 ವರ್ಷಗಳ ಹಿಂದೆ ಪೊಲೀಸ್​ಗೆ ಕಪಾಳಮೋಕ್ಷ: ಆರೋಪಿಗೆ 1 ದಿನ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​!

Untitled design - 2025-08-09T114602.728
Published on

ಮಹಾರಾಷ್ಟ್ರ: 9 ವರ್ಷಗಳಿಂದೆ ಸಂಚಾರಿ ಪೊಲೀಸ್​ ಕಾನ್​​ಸ್ಟೆಬಲ್​ಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಗೆ ಇಲ್ಲಿನ ಥಾಣೆಯ ಸೆಷನ್ಸ್ ನ್ಯಾಯಾಲಯವು 1 ದಿನ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದೆ. ಈ ಘಟನೆ ಜು.31ರಂದು ನಡೆದಿದ್ದು, ಆದೇಶದ ಪ್ರತಿ ಗುರುವಾರ(ಆ.07) ಲಭ್ಯವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ 52 ವರ್ಷದ ವ್ಯಕ್ತಿಯನ್ನು ದೋಷಿ ಎಂದು ತೀರ್ಪು ನೀಡಿ, ಅವರ ದುರ್ಬಲ ಆರೋಗ್ಯ ಮತ್ತು ಕುಟುಂಬದ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಒಂದು ದಿನದ ಸಾಂಕೇತಿಕ ಸರಳ ಜೈಲು ಶಿಕ್ಷೆಯನ್ನು ವಿಧಿಸಿದೆ ಎಂದು ನ್ಯಾಯಾಧೀಶ ಜಿ.ಟಿ.ಪವಾರ್ ಅವರಿದ್ದ ಪೀಠ ಆದೇಶಿಸಿದೆ.

ಘಟನೆ ಏನು?

2016 ನವೆಂಬರ್ 18 ರಂದು ಥಾಣೆಯ ಕ್ಯಾಡ್ಬರಿ ಸಿಗ್ನಲ್‌ನಲ್ಲಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ದಿಲೀಪ್ ಪವಾರ್ ಅವರ ಮೇಲೆ ರಮೇಶ್ ಶಿತ್ಕರ್(ಆರೋಪಿ) ಹಲ್ಲೆ ನಡೆಸಿದ್ದಾರೆ. ಶಿತ್ಕರ್ ವೇಗವಾಗಿ ಚಲಾಯಿಸುತ್ತಿದ್ದ ಕಾರನ್ನು ಪವಾರ್ ನಿಲ್ಲಿಸಲು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ಶಿತ್ಕರ್ ಕಾರನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ಪವಾರ್ ಅವರನ್ನು ನಿಂದಿಸಿ, ಪದೇ ಪದೇ ಕಪಾಳಮೋಕ್ಷ ಮಾಡಿದ್ದರು.

ರಮೇಶ್ ಶಿತ್ಕರ್ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353 ಮತ್ತು 332 ರ ಅಡಿಯಲ್ಲಿ ಅಪರಾಧ ಬಲಪ್ರಯೋಗ ಮತ್ತು ಸಾರ್ವಜನಿಕ ಸೇವಕನಿಗೆ ಸ್ವಯಂಪ್ರೇರಣೆಯಿಂದ ಗಾಯಗೊಳಿಸಿದ್ದಕ್ಕಾಗಿ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net