ವಿಶ್ವಸಾಹಿತಿ ಭೈರಪ್ಪ @90: ವಿಜಯವಾಣಿ-ದಿಗ್ವಿಜಯ ಕ್ಲಬ್​ಹೌಸ್​ ಸಂವಾದ

‘ಪರ್ವ’ ಕಾದಂಬರಿ ಬರೆಯುವಾಗಿನ ವಿಶಿಷ್ಟ ಅನುಭವಗಳು... ಭೈರಪ್ಪ ಅವರ ಮಾತಿನಲ್ಲೇ ಕೇಳಿ... S L Bhyrappa | Vijayavani - youtube
Published on

ಹಿರಿಯ ಸಾಹಿತಿ, ಕಾದಂಬರಿಕಾರ ಎಸ್.ಎಲ್.ಭೈರಪ್ಪ ಶುಕ್ರವಾರ ನಡೆದ ವಿಜಯವಾಣಿ-ದಿಗ್ವಿಜಯ ಕ್ಲಬ್ ಹೌಸ್ ಸಂವಾದದಲ್ಲಿ ತೊಂಬತ್ತು ವರ್ಷದ ಜೀವನಾನುಭವವನ್ನು, ಸಾಹಿತ್ಯ ಪಯಣದ ರೋಚಕ ಕ್ಷಣಗಳನ್ನು ತೆರೆದಿಟ್ಟರು. ಜೀವನವನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದರಿಂದಲೇ ಸಾಹಿತಿಯಾಗಿ ಬೆಳೆಯಲು ಸಾಧ್ಯವಾಗಿದೆ. ಸಾಹಿತಿಯಾದವನು ವ್ಯಾಪಕ ಅನುಭವ ದಕ್ಕಿಸಿಕೊಳ್ಳಬೇಕು. ಇದಕ್ಕಾಗಿ ಸಂಚಾರ ಮತ್ತು ಗಂಭೀರ ಅಧ್ಯಯನ ಮಾಡಬೇಕು. ಈಗಿಲ ಕಾಲದ ಓದುಗರು ಹೆಚ್ಚು ಸುಶಿಕ್ಷಿತರು. ವೈಜ್ಞಾನಿಕ ಮನೋಭಾವವನ್ನು ಅವರು ಇಷ್ಟಪಡುತ್ತಾರೆ ಎಂದು ಹೇಳುತ್ತ ಕಾದಂಬರಿಗಳ ತಯಾರಿ, ಅವುಗಳ ಯಶಸ್ಸಿನ ಸ್ಫೂರ್ತಿದಾಯಕ ಸಂಗತಿಗಳನ್ನೂ ಹಂಚಿಕೊಂಡರು.

ಚಂದ್ರರ ನಂತರ ಭೈರಪ್ಪನವರೇ!

ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಎಸ್.ಎಲ್.ಭೈರಪ್ಪನವರ ಆತ್ಮೀಯರೂ ಆದ ಡಾ. ಪ್ರಧಾನ್ ಗುರುದತ್ತ ಅವರು ಭೈರಪ್ಪನವರನ್ನು ಆಪ್ತವಾಗಿ ಪರಿಚಯಿಸಿದ ರೀತಿ ಇದು. ಭೈರಪ್ಪನವರನ್ನು ರಾಷ್ಟ್ರದ ಹೆಮ್ಮೆಯ ಸಾಹಿತಿ, ವಿಶ್ವ ಸಾಹಿತಿ ಎಂದು ಕರೆದರೂ ತಪ್ಪಿಲ್ಲ. ಭೈರಪ್ಪನವರ ಕೃತಿಗಳು ಭಾರತದ ಎಲ್ಲ ಭಾಷೆಗಳಿಗೆ, 10-12 ಕೃತಿಗಳು ವಿದೇಶಿ ಭಾಷೆಗಳಿಗೆ ಅನುವಾದವಾಗಿವೆ. ಶರತ್​ಚಂದ್ರ, ಪ್ರೇಮ್ಂದ್, ಬಂಕಿಮಚಂದ್ರರನ್ನು ಬಿಟ್ಟರೆ ಅಖಿಲ ಭಾರತ ಮಟ್ಟದಲ್ಲಿ ಈ ಪ್ರಮಾಣದ ಜನಪ್ರಿಯತೆ ಗಳಿಸಿದ ಸಾಹಿತಿ ಎಂದರೆ ಭೈರಪ್ಪ ಎನ್ನಬಹುದು. ಅನೇಕ ಸಂದರ್ಭದಲ್ಲಿ ಸನ್ಮಾನದ ಹಣವನ್ನು ಅಲ್ಲಿನ ಸ್ಥಳೀಯ ಗಿರಿಜನರಿಗೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಬಳಕೆಗೆಂದು ಹಿಂದಿರುಗಿಸಿದ್ದಾರೆ. ಸಾಹಿತ್ಯಪ್ರಿಯರಷ್ಟೆ ಅಲ್ಲ, ವಿದ್ವತ್​ವಲಯದಿಂದಲೂ ಗೌರವಕ್ಕೆ ಪಾತ್ರರಾಗಿದ್ದಾರೆ.

ಹುಟ್ಟಿದ ತಾರೀಖು ನಿಗದಿಯಾಯಿತು

ವಿಜಯವಾಣಿ ಕ್ಲಬ್​ಹೌಸ್ ಸಂವಾದದ ಮೂಲಕ ಭೈರಪ್ಪನವರ ಜನ್ಮದಿನಾಂಕ ಸ್ಪಷ್ಟವಾಯಿತು! ಚಿಕ್ಕ ವಯಸ್ಸಿನಲ್ಲಿ ತಾಯಿ ತೀರಿಹೋದರು, ಜಾತಕ ಎಲ್ಲಿತ್ತು ಗೊತ್ತಾಗಲಿಲ್ಲ. ಪ್ರಾಥಮಿಕ ಶಾಲೆಗೆ ಸೇರಿಸುವಾಗ 20-08-1931 ಎಂದು ಜನ್ಮದಿನಾಂಕ ಇತ್ತು. ಬಾಗೂರಿನಲ್ಲಿ ಮಾವನ ಮನೆಗೆ ಬಂದಾಗ, ಶಾಲೆಗೆ ಸೇರಿಸಲು ಅನುಕೂಲ ಎಂದು ಅದನ್ನು ಬದಲಾಯಿಸಿದ್ದರು. ಗುಜರಾತ್​ನಲ್ಲಿದ್ದಾಗ ಒಬ್ಬ ಜ್ಯೋತಿಷಿ, 20-06-1931 ಎಂದು ಹೇಳಿದರು. ನನ್ ಸ್ನೇಹಿತ ರಾಜ ಎಂಬುವವನು ಅನೇಕ ವರ್ಷದ ನಂತರ ಸಿಕ್ಕ. ಅವನು ಹುಟ್ಟಿದ್ದು ಅಮಾವಾಸ್ಯೆ, 15 ದಿನದ ನಂತರ ಹುಣ್ಣಿಮೆಯಂದು ನಾನು ಜನಿಸಿದ್ದು ಎಂಬುದು ತಿಳಿದಿತ್ತು. ಈ ಎಲ್ಲ ಸಂದರ್ಭವನ್ನೂ ಅವಲೋಕಿಸಿದ ನಂತರ, 1931ರ ಆಗಸ್ಟ್ 20 (ವ್ಯಾಸಪೂರ್ಣಿಮೆ) ನನ್ನ ಜನ್ಮದಿನಾಂಕ ಎಂದು ಖಾತ್ರಿಮಾಡಿಕೊಂಡಿದ್ದೇನೆ ಎಂದು ಭೈರಪ್ಪ ಸ್ಪಷ್ಟಪಡಿಸಿದರು.

  • ಘನ ವಿದ್ವಾಂಸರ ನಿರ್ವಾತ ಇದೆ
  • ಸಕಾರಾತ್ಮಕ ಚಿಂತನೆಯೇ ಸಾಹಿತಿಯ ಜೀವಾಳ
  • ಮಾಹಿತಿಯನ್ನು ಜೀರ್ಣಿಸಿಕೊಂಡರೆ ಜ್ಞಾನ
  • ಸಮಾಜವನ್ನು ದ್ವೇಷಿಸುವುದು ಸಿನಿಕತನ

ಮನತಟ್ಟುವ ಘಟನೆಗಳು

ಭೈರಪ್ಪನವರ ಕುರಿತು ಲೇಖಕಿ ಸಹನಾ ವಿಜಯಕುಮಾರ್ ಎರಡು ಘಟನೆಗಳನ್ನು ಆತ್ಮೀಯವಾಗಿ ವಿವರಿಸಿದರು.

  1. ಮೊದಲ ವರ್ಷದ ಮಂಗಳೂರು ಸಾಹಿತ್ಯ ಉತ್ಸವದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಲು ತೆರಳುವ ಮಾರ್ಗ ಮಧ್ಯೆ ಕಲ್ಲಡ್ಕದಲ್ಲಿ ಶ್ರೀರಾಮ ವಿದ್ಯಾಲಯಕ್ಕೆ ಭೈರಪ್ಪ ಭೇಟಿ ನೀಡಿದ್ದರು. ‘ಪ್ರಭಾಕರ ಭಟ್ಟರು ಅತ್ಯುತ್ತಮ ರಿತಿಯಲ್ಲಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ, ಆ ಸಮಯದಲ್ಲಿ ನನ್ನ ಬಳಿ ಚೆಕ್ ಪುಸ್ತಕ ಇರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದರು. ಸಾಹಿತ್ಯ ಉತ್ಸವದಲ್ಲಿ ದೊರೆತ 1 ಲಕ್ಷ ರೂ. ಬಹುಮಾನದ ಮೊತ್ತವನ್ನು ಶ್ರೀರಾಮ ವಿದ್ಯಾಲಯಕ್ಕೆ ದೇಣಿಗೆ ನೀಡಿದರು.
  2. ಡಾ. ಕಾನ್ರಾಡ್ ಎಲ್ಸ್ ್ಟ ಬೆಲ್ಜಿಯಂನವರಾದರೂ ಭಾರತದ ಸಂಸ್ಕೃತಿ, ಸನಾತನ ಧರ್ಮಕ್ಕೆ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರ ಜೀವನ ನಿರ್ವಹಣೆ ಕಷ್ಟವಾಗಿರುವುದನ್ನು ಭೈರಪ್ಪನವರ ಗಮನಕ್ಕೆ ಒಮ್ಮೆ ತಂದಿದ್ದೆ. ನಾನೊಂದಿಷ್ಟು ಹಣ ಕೊಡುತ್ತೇನೆ ಹೇಗಾದರೂ ಮಾಡಿ ತಲುಪಿಸಿ ಎಂದು ಹಣ ನೀಡಿದರು. ಕೆಲವು ದಿನಗಳಲ್ಲಿ ಕಾನ್ರಾಡ್ ಅವರು ಭೈರಪ್ಪನವರನ್ನು ಭೇಟಿಯಾಗಿ, ಧನ್ಯವಾದ ಸಲ್ಲಿಸಲು ಮುಂದಾದ ಕೂಡಲೇ, ಇದರಲ್ಲಿ ದೊಡ್ಡತನ ಏನೂ ಇಲ್ಲ, ಇದನ್ನು ‘ವಿದ್ವತ್ ದಕ್ಷಿಣೆ’ ಎಂದು ಕರೆಯುತ್ತಾರೆ ಎನ್ನುವ ಮೂಲಕ ನಮ್ರತಾಭಾವ ಪ್ರದರ್ಶಿಸಿದರು.

ಸಂಬಳದಲ್ಲಿ ಸಂಸಾರ, ರಾಯಲ್ಟಿಯಲ್ಲಿ ವಿಶ್ವಸಂಚಾರ

ಪರ್ವ ಬರೆಯಬೇಕೆಂದು ಬೇಸಿಗೆ ರಜೆಯಲ್ಲಿ ಶುರು ಮಾಡಿದೆ. ಮೂರು ತಿಂಗಳಲ್ಲಿ ಕಾದಂಬರಿ ಬರೆಯಬಹುದು ಎಂದುಕೊಂಡೆ. ಈ ಮೂರು ತಿಂಗಳಲ್ಲಿ ಎರಡು ಅಧ್ಯಾಯ ಬರೆಯಲು ಮಾತ್ರ ಸಾಧ್ಯವಾಯಿತು. ನಾಳೆ ಬರೆಯಬೇಕೆಂದುಕೊಂಡಿದ್ದು ರಾತ್ರಿ ಕನಸಿನಲ್ಲಿಯೂ ಬರಲು ಆರಂಭವಾಯಿತು. ಇದರ ಪರಿಣಾಮ ತಲೆಸುತ್ತು ಬರಲು ಶುರವಾಯಿತು. ವೈದ್ಯರನ್ನು ಸಂರ್ಪಸಿದೆ, ನೀವು 8-10 ದಿನ ಬರವಣಿಗೆ ನಿಲ್ಲಿಸಿ ಹೊರಗೆ ಸುತ್ತಾಡಿಕೊಂಡು ಬನ್ನಿ ಎಂದರು. ಹುಬ್ಬಳ್ಳಿಗೆ ಹೋದಾಗ ಸಾಹಿತ್ಯ ಪ್ರಕಾಶನದ ಗೋವಿಂದರಾಯರು ಬಂದು ವಿಚಾರಿಸಿದರು. ಇದು ಮನಸ್ಸಿಗೆ ಸಂಬಂಧಿಸಿದ ವಿಚಾರ, ಮಾನಸಿಕ ಆಸ್ಪತ್ರೆಗೆ ತೋರಿಸೋಣ ಎಂದು ಬಲವಂತ ಮಾಡಿ ಕರೆದೊಯ್ದರು. ಮೂರು ತಿಂಗಳಲ್ಲಿ ಕಾದಂಬರಿ ಮುಗಿಸಬೇಕು ಎಂಬ ಉದ್ವೇಗದಲ್ಲಿ ಈ ರೀತಿ ಆಗುತ್ತಿದೆ, ಒಂದು ವರ್ಷ ರಜೆ ತೆಗೆದುಕೊಂಡುಬಿಡಿ ಎಂದು ವೈದ್ಯರು ಸಲಹೆ ನೀಡಿದರು. ‘ತಿಂಗಳಿಗೆ ಎರಡು ಸಾವಿರ ರೂ.ನಂತೆ ನಾನು ಹಣ ನೀಡುತ್ತೇನೆ’ ಎಂದು ಗೋವಿಂದರಾಯರು ಹೇಳಿದರು. ಇದು ಸರಿಯೆನ್ನಿಸಿ, ಒಂದು ವರ್ಷ ವೇತನರಹಿತ ರಜೆ ಪಡೆದೆ. ಪರ್ವ ಕಾದಂಬರಿ ನಂತರದಲ್ಲಿ ಓದುಗರನ್ನು ತಲುಪಿದ್ದು, ಪ್ರಭಾವಿಸಿದ್ದು ನಿಮಗೆ ಗೊತ್ತೇ ಇದೆ. ನಂತರದಲ್ಲೂ ಅನೇಕ ಬಾರಿ ಕ್ಷೇತ್ರಕಾರ್ಯಕ್ಕೆ ವೇತನ ರಹಿತ ರಜೆ ಪಡೆಯುತ್ತಿದೆ. ವೇತನದಲ್ಲಿ ಸಂಸಾರ ನಡೆಸಿ, ರಾಯಲ್ಟಿಯಲ್ಲಿ ವಿಶ್ವಸಂಚಾರ ಮಾಡುತ್ತಿದ್ದೆ. ವಿಶ್ವದ ಎಲ್ಲ ದೇಶಗಳನ್ನೂ ಈ ರೀತಿ ಸುತ್ತಿ ಅಲ್ಲಿನ ಜನಜೀವನವನ್ನು ಅಧ್ಯಯನ ನಡೆಸಿದೆ, ಆ ಮೂಲಕ ನನ್ನ ದೇಶವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಈಗಲೂ ನನ್ನ ಬಳಿ ಹೆಚ್ಚು ಹಣ ಇಲ್ಲ, ಊಟ, ತಿಂಡಿ, ಕಾಯಿಲೆ ಬಂದರೆ ಚಿಕಿತ್ಸೆಗೆ ಆಗುವಷ್ಟು ಇದೆ ಅಷ್ಟೆ.

ಕರೊನಾ ಮನುಷ್ಯನ ಸೃಷ್ಟಿ: ಹಿಂದೆ ಬರುತ್ತಿದ್ದ ಪ್ಲೇಗ್ ರೀತಿ ಕಾಯಿಲೆಗಳು ನೈಸರ್ಗಿಕವಾಗಿ ಬರುತ್ತಿದ್ದವು, ಈಗ ಮನುಷ್ಯನಿಂದ ಆಗಿರುವ ಕರೊನಾ ಕಾಯಿಲೆ ಹೆಚ್ಚು ಸಂಕಷ್ಟ ತಂದೊಡ್ಡಿದೆ. ಕರೊನಾ ಚೀನಾದಿಂದ ಬಂದಿರುವುದು ಎನ್ನುತ್ತಾರೆ. ಮನುಷ್ಯನನ್ನು ಮನುಷ್ಯನೇ ನಾಶ ಮಾಡಲು ಮುಂದಾಗಿರುವಾಗ ಏನಾಗುತ್ತದೆ ಎಂದು ಹೇಳಲಾಗದು.

ಸೃಜನಶೀಲತೆಗೆ ಭೇದವಿಲ್ಲ: ಸೃಜನಶೀಲತೆಗೆ ಹೆಣ್ಣು-ಗಂಡು ಎನ್ನುವ ಭೇದ ಇಲ್ಲ. ಪ್ರಯತ್ನ ಪಟ್ಟು ತಿಳಿದುಕೊಳ್ಳಲು ಅವಕಾಶಗಳಿರುತ್ತವೆ, ನಮ್ಮ ಸುತ್ತಲಿನ ಪರಿಸರವನ್ನು ಅವಲೋಕಿಸುವುದರ ಮೂಲಕ ತಿಳಿಯಬಹುದು. ಇದು ಅರ್ಥವಾಗಬೇಕೆಂದರೆ ತಾದಾತ್ಮ್ಯ ಇರಬೇಕು. ಇದೇ ರೀತಿ ಹೆಂಗಸರೂ ಗಂಡಸನ್ನು ಅರ್ಥ ಮಾಡಿಕೊಳ್ಳಬಹುದು. ಹೆಂಗಸು ಒಳ್ಳೆಯ ಕೃತಿ ಬರೆದರೆ, ‘ಸ್ತ್ರೀ ಸಂವೇದನೆ’ ಇದೆ ಎಂದು ಬರೆದುಬಿಡುತ್ತಾರೆ. ಗಂಡಸು ಬರೆದರೆ ಅದನ್ನು ಹೇಳುವುದಿಲ್ಲ.

ಭೂಮಿಯಲ್ಲೇ ಮಾನವಕುಲವನ್ನು ಉಳಿಸಬೇಕು

ಈ ಭೂಮಿಯಲ್ಲಿ ಜೀವಿಗಳು ಇನ್ನು ಎಷ್ಟು ಎಷ್ಟು ವರ್ಷ ಬದುಕುತ್ತವೆ? ಎಂದು 2005ರ ಸುಮಾರಿಗೆ ಒಬ್ಬ ವಿಜ್ಞಾನಿಯನ್ನು ಪ್ರಶ್ನಿಸಿದೆ. ಬೇರೆ ಬೇರೆ ರೋಗಗಳು ಬಂದಾಗ ಅನೇಕರು ಸಾಯುತ್ತಿರುತ್ತಾರೆ. ಎಲ್ಲ ಶಕ್ತಿಶಾಲಿ ದೇಶಗಳ ಬಳಿಯೂ ಅಣುಬಾಂಬ್ ಇವೆ. ಯಾವುದೋ ಒಂದು ಸಿಡಿದು ಸರಪಳಿ ಪರಿಣಾಮಕಾರಿ ಆದರೆ ಪ್ರಪಂಚ ನಾಶವಾಗಬಹುದು. ಜಾಗತಿಕ ತಾಪಮಾನದಿಂದ ಕೋಟ್ಯಂತರ ಜನರು ಪ್ರಾಣ ಕಳೆದುಕೊಳ್ಳಬಹುದು. ಓಜೋನ್ ಕಡಿಮೆಯಾಗಿ ಸೂರ್ಯನ ಕಿರಣ ನೇರವಾಗಿ ಬಂದು ಕ್ಯಾನ್ಸರ್​ನಿಂದ ಸಾವುಗಳು ಸಂಭವಿಸಬಹುದು. ಹಾಗಾಗಿ ಬೇರೆ ಗ್ರಹಗಳಿಗೆ ವಲಸೆ ಹೋಗೋಣ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅದು ಕಲ್ಪನೆಯಲ್ಲಿ ಮಾತ್ರ ಚೆಂದ. ಹಾಗಾಗಿ, ಈ ಭೂಮಿಯಲ್ಲೇ ಮಾನವಕುಲ ಉಳಿಸಬೇಕು.

ಪುನರ್ಜನ್ಮ ಹಾಗೂ ದೇವರು

ಭಾರತದಲ್ಲಿ ಹುಟ್ಟಿದ ಎಲ್ಲ ಧರ್ಮ, ಪಂಥಗಳೂ ಪುನರ್ಜನ್ಮವನ್ನು ನಂಬುತ್ತವೆ. ವೇದೋಪನಿಷತ್ತಿನ ಕಾಲದಿಂದ ಜೈನರು, ಬೌದ್ಧರೂ ನಂಬುತ್ತಾರೆ. ಕೆಟ್ಟವರು ಸುಖವಾಗಿದ್ದಾರೆ, ಒಳ್ಳೆಯವರು ಕಷ್ಟಪಡುತ್ತಿದ್ದಾರೆ ಎಂದು ಹೇಳುತ್ತಾರೆ. ಈಗ ಕೆಟ್ಟ ದಾರಿಯಲ್ಲಿ ಸುಖ ಅನುಭವಿಸಿದರೂ ಮುಂದಿನ ಜನ್ಮದಲ್ಲಿ ಕರ್ಮಫಲ ಅನುಭವಿಸುತ್ತಾರೆ ಎಂದು ಹೇಳುತ್ತಾರೆ. ಎರಡನೇ ನಂಬಿಕೆ, ಜೀವ ಎನ್ನುವುದು ಮನುಷ್ಯನಲ್ಲಿ ಮಾತ್ರವಲ್ಲ ಎಲ್ಲ ಪ್ರಾಣಿಗಳಲ್ಲೂ ಇದೆ. ಮುಂದಿನ ಜನ್ಮದಲ್ಲಿ ಯಾವುದೇ ಪ್ರಾಣಿ ಆಗಬಹುದು ಎಂಬುದು. ದೇವರ ಕುರಿತು ಹೇಳುವುದು ಕಷ್ಟ. ದೇವರು ಎನ್ನುವ ಕಲ್ಪನೆ ಇಲ್ಲದಿದ್ದರೆ ಎಷ್ಟೋ ಜನರು ಮಾನಸಿಕ ರೋಗಿಗಳಾಗುತ್ತಿದ್ದರು. ಒಂದೊಂದು ದೇವರೂ ಒಂದೊಂದು ಮೌಲ್ಯವನ್ನು ಪ್ರತಿನಿಧಿಸುತ್ತಾರೆ.

ಪ್ರಜಾಪ್ರಭುತ್ವವೇ ಸರಿ: ಭಾರತಕ್ಕೆ ಪ್ರಜಾಪ್ರಭುತ್ವ ಬಿಟ್ಟರೆ ಬೇರೆ ಉತ್ತಮ ಸ್ಥಿತಿ ಇಲ್ಲ. ಡಿಕ್ಟೇಟರ್, ಸೇನೆ ಆಡಳಿತಗಳಿಂದ ಏನು ನಿರೀಕ್ಷಿಸುವುದು? ಕೈಗಾರಿಕೀಕರಣ ಸರಿಯಾಗಿ ನಡೆದು ಉದ್ಯೋಗಾವಕಾಶಗಳು ಸೃಷ್ಟಿಯಾದರೆ ಅವರೆಲ್ಲರೂ ಆರ್ಥಿಕವಾಗಿ ಆಲೋಚಿಸುತ್ತಾರೆ. ಆಗ ಪ್ರಗತಿಪರ ಚಿಂತನೆ ಮೂಡುತ್ತದೆ. ಹಾಗಾಗಿ ಮುಖ್ಯವಾಗಿ ಆರ್ಥಿಕ ಅಭಿವೃದ್ಧಿ ಆಗಬೇಕು.

ಹಿಂದಿನ, ಈಗಿನ ಓದುಗರಲ್ಲಿ ವ್ಯತ್ಯಾಸ

ನವೋದಯ ಕಾಲದ ಓದುಗರಿಗಿದ್ದ ಶೈಕ್ಷಣಿಕ ಮಟ್ಟಕ್ಕಿಂತ ಈಗ ಚೆನ್ನಾಗಿದೆ. ವೈಜ್ಞಾನಿಕ ಮನೋಭಾವ ಬೆಳೆದಿದೆ. ಚಿಕ್ಕ ವಯಸ್ಸಿನಲ್ಲೇ ವಿದೇಶಕ್ಕೆ ಹೋಗಿಬಂದ ಅನುಭವವೂ ಇರುತ್ತದೆ. ಹಾಗಾಗಿ ನನ್ನ ಕಾದಂಬರಿಗಳಲ್ಲಿ ಬರುವ ಮೌಲ್ಯಗಳ ಚರ್ಚೆ ಆಧುನಿಕರಿಗೆ ಹಿಡಿಸುತ್ತದೆ. ನನ್ನ ಕಾದಂಬರಿಗಳಲ್ಲಿ ವೈಜ್ಞಾನಿಕ ಮನೋಭಾವದ ಜತೆಗೆ ಧನಾತ್ಮಕತೆ ಇರುತ್ತದೆ, ಇದೂ ಓದುಗರಿಗೆ ಇಷ್ಟವಾಗುತ್ತದೆ. ನನ್ನ ಕಾದಂಬರಿಗಳು ಬೆಳೆದಂತೆ ಓದುಗರೂ ಬೆಳೆದಿದ್ದಾರೆ. ಓದುಗರನ್ನು ಬೆಳೆಸುವುದೂ ಸಾಹಿತಿಯ ಕರ್ತವ್ಯ. ಕೆಲವರು ಓದುಗರಿಗೆ ಉತ್ತಮ ಮಟ್ಟ ಇಲ್ಲ ಎನ್ನುತ್ತಾರೆ, ಇದು ಸರಿಯಲ್ಲ. ಓದುಗರನ್ನು ಅಪಮೌಲ್ಯೀಕರಣ ಮಾಡಬಾರದು. ಓದಿದಾಗ ಹೊಸ ದರ್ಶನ, ಮೌಲ್ಯದ ಗ್ರಹಿಕೆ ಆಗುವಂತಿರಬೇಕು.

ಆಸಕ್ತಿಗಳೇ ಕಾದಂಬರಿಗಳಾದವು

ನಾನಾ ವಿಷಯಗಳಲ್ಲಿ ನನಗೆ ಆಸಕ್ತಿ ಇದೆ. ನನ್ನ ಮೊದಲ ಪ್ರೀತಿ ಸಂಗೀತಕ್ಕೆ. ಹಾಗಾಗಿ ಸಾಕಷ್ಟು ಸಂಗೀತವನ್ನು ಕೇಳಿದ್ದೇನೆ. ಹುಬ್ಬಳ್ಳಿ, ಗುಜರಾತ್​ನಲ್ಲಿದ್ದಾಗಲೂ ಸಂಗೀತ ಕಲಿಯುತ್ತಿದ್ದೆ. ಸಂಗೀತದ ಬಗ್ಗೆ ಅರಿಯಲು ಪುಣೆ, ಮುಂಬೈ, ಗ್ವಾಲಿಯರ್, ದೆಹಲಿಯಲ್ಲಿ ಪ್ರವಾಸ ಮಾಡಿದ್ದೇನೆ. ಇದರಿಂದಾಗಿಯೇ ಸಂಗೀತ ಕುರಿತು ಕಾದಂಬರಿ ಬರೆಯಲು ಮುಂದಾದೆ. ಖಗೋಳಶಾಸ್ತ್ರದಲ್ಲೂ ಆಸಕ್ತಿ ಇದೆ. ಅದರ ಆಧಾರದಲ್ಲಿ ಯಾನ ಕಾದಂಬರಿ ಬರೆದೆ. ಸಾರ್ಥ, ಅಂಚು ಕಾದಂಬರಿಗಳೂ ಇದೇ ರೀತಿ ಹೊರಬಂದವು. ಶಾಲೆಯಲ್ಲಿದ್ದಾಗಲೇ ನ. ಕೃಷ್ಣಪ್ಪನವರ ಮೂಲಕ ಇತಿಹಾಸದಲ್ಲಿ ಆಸಕ್ತಿ ಮೂಡಿತು. ಅದರ ಪರಿಣಾಮವಾಗಿ ‘ಆವರಣ’ ಬರೆಯಲು ಪ್ರೇರಣೆಯಾಯಿತು. ನನಗೆ ಹಲವು ವಿಷಯಗಳಲ್ಲಿ ಆಸಕ್ತಿ ಇದ್ದು, ವಿವಿಧೆಡೆ ಸಂಚರಿಸುವ ಕಾರಣಕ್ಕೆ ವಿಭಿನ್ನ ಕಾದಂಬರಿಗಳನ್ನು ಸಾಧ್ಯವಾಯಿತು.

ಪ್ರವಾಸ ಕಥನಗಳನ್ನೇಕೆ ಬರೆಯಲಿಲ್ಲ?

ನಾನು ಸೃಜನಶೀಲ ಬರಹಗಾರ. ಪ್ರವಾಸ ಕಥನವನ್ನು ಅನೇಕರು ನನಗಿಂತಲೂ ಚೆನ್ನಾಗಿ ಬರೆಯುತ್ತಾರೆ. ವಿದೇಶದಲ್ಲಿ ಒಂದು ಸಮಾವೇಶಕ್ಕೆ ಹೋದಾಗ ಅಲ್ಲಿನ ಒಂದು ಸರೋವರ, ಗುಡ್ಡಗಳನ್ನು ಕಂಡು ಸಂತಸಗೊಂಡೆ. ಅಲ್ಲೆಲ್ಲ ನೋಡಿ ಕ್ಯಾಮರಾ ಮೂಲಕ ಚಿತ್ರಗಳನ್ನು ಸೆರೆ ಹಿಡಿದೆ. ರೂಮಿಗೆ ಬಂದು ನೋಡಿದರೆ, ಕ್ಯಾಮರಾ ಕಣ್ಣಲ್ಲಿ ಮಾತ್ರ ನೋಡಿದೆ. ನಾನೇನೂ ಅನುಭವಿಸಲೇ ಇಲ್ಲ ಎನ್ನಿಸಿ, ಕ್ಯಾಮರಾವನ್ನು ತ್ಯಜಿಸಿದೆ. ಪ್ರವಾಸಿ ಸ್ಥಳಗಳಲ್ಲಿ ಫೋಟೋ ತೆಗೆದುಕೊಳ್ಳುವುದರಲ್ಲಿ ಏನೂ ಸಾರ್ಥಕತೆ ಇಲ್ಲ. ಅಲ್ಲಿ ನೋಡುತ್ತ ಧ್ಯಾನಸ್ಥನಾಗದಿದ್ದರೆ ಏನೂ ಅರ್ಥವಾಗುವುದಿಲ್ಲ. ಹಾಗಾಗಿ ನಾನು ಪ್ರವಾಸ ಕಥನದ ತಂಟೆಗೆ ಹೋಗಲಿಲ್ಲ.

ಜೀವನವನ್ನು ಸಕಾರಾತ್ಮಕವಾಗಿ ಕಂಡೆ

ನೀವೇಕೆ ವಾಮಪಂಥೀಯ, ಮಾರ್ಕ್ಸ್​ವಾದಿ ಆಗಲಿಲ್ಲ ಎಂದು ಅನೇಕರು ಕೇಳಿದ್ದಾರೆ. ಚಿಕ್ಕವಯಸ್ಸಿನಲ್ಲಿ ಬಡತನದ ನಂತರ, ವಿದ್ಯಾರ್ಥಿ ಜೀವನದಲ್ಲೂ ಕಷ್ಟ ಅನುಭವಿಸಿದ್ದೇನೆ. ಅಜ್ಜನ ಕಾಲದಲ್ಲಿ ನಾವು ಕೊಂಚ ಸ್ಥಿತಿವಂತರಾಗಿದ್ದೆವು. ತಂದೆ ಹಾಗೂ ಅಜ್ಜಿಯ ಅವಿವೇಕತನದಿಂದ ಬಡತನ ಬಂತು. ಆದರೆ ಇದೇ ಸಮಯದಲ್ಲಿ ಅದೆಷ್ಟೋ ಮನೆಗಳವರು ನನಗೆ ವಾರಾನ್ನ, ಭಿಕ್ಷಾನ್ನ ನೀಡಿದ್ದಾರೆ, ಹಲವು ಉಪಾಧ್ಯಾಯರು ವಿಶೇಷ ಆಸಕ್ತಿ ವಹಿಸಿ ಪಾಠ ಮಾಡಿದ್ದಾರೆ. ಇವರಿಂದೆಲ್ಲ ಉಪಕಾರವಾಗಿದೆ. ವಾಸ್ತವದಲ್ಲಿ, ನನ್ನ ಹಾಗೆ ನಮ್ಮ ದೇಶದಲ್ಲಿ ಬಹಳಷ್ಟು ಜನರಿಗೆ ಅನ್ಯಾಯವಾಗಿದೆ, ಅದಕ್ಕೆ ಸಮಾಜವನ್ನು ದ್ವೇಷಿಸುವುದು ಸರಿಯಲ್ಲ. ಜೀವನವನ್ನು ಧನಾತ್ಮಕವಾಗಿ ನೋಡಬೇಕು.

ಟೀಕೆಗೆ ಹೆದರುವುದಿಲ್ಲ

ಸಂಗೀತವೇ ಪಾತ್ರವಾಗುವ ‘ಮಂದ್ರದಂತಹ ಕಾದಂಬರಿ ಇನ್ನೆಲ್ಲೂ ಬಂದಿಲ್ಲ ಎನ್ನುವ ಅಭಿಪ್ರಾಯವಿದೆ. ‘ಆವರಣ’ ಕೃತಿಯ ಪ್ರಯತ್ನದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. 54 ಬಾರಿ ಕನ್ನಡದಲ್ಲಿ ಮರು ಮುದ್ರಣಗೊಂಡಿದೆ. ಇಂಗ್ಲಿಷ್​ನಲ್ಲಿ 12 ಹಾಗೂ ಮರಾಠಿಯಲ್ಲಿ 16 ಬಾರಿ ಮರು ಮುದ್ರಣಗೊಂಡಿರುವುದು ಅದರ ಶ್ರೇಷ್ಠತೆಗೆ ಸಾಕ್ಷಿ. ಕೆಲ ಐತಿಹಾಸಿಕ ಘಟನೆಗಳ ಬಗ್ಗೆ ಸತ್ಯ ಬರೆಯಲು ಹೆದರರುತ್ತಿದ್ದವರಿಗೆ ‘ಆವರಣ’ ಕಾದಂಬರಿ ಧೈರ್ಯ ತಂದುಕೊಟ್ಟಿದೆ. ‘ಆವರಣದ ಮೇಲೆ 4 ಪುಸ್ತಕಗಳು ವಿರೋಧವಾಗಿ ಬಂದಿವೆ. ಆವರಣವನ್ನು ಮೆಚ್ಚಿಕೊಂಡು 10-12 ಪುಸ್ತಕಗಳು ಬಂದಿವೆ. ಟೀಕೆ ಮಾಡಿದಾಗಲೆಲ್ಲ ಮರುಮುದ್ರಣಗೊಂಡಿದೆ. ಐತಿಹಾಸಿಕವಾಗಿ ನಮ್ಮ ಸಂಸ್ಕೃತಿಯನ್ನು ನಾಶ ಮಾಡಿದ ವರ್ಣನೆ ಕಟ್ಟಿಕೊಟ್ಟಿದ್ದೇನೆ. ಭಾರತೀಯ ಅಸ್ಮಿತೆಯನ್ನೇ ಟೀಕೆ ಮಾಡುವ ಪಾತ್ರಗಳನ್ನು ಕೊಟ್ಟಿದ್ದೇನೆ. ಸಾಮಾನ್ಯವಾಗಿ ನಾನು ಚಳವಳಿಗಳಲ್ಲಿ ಭಾಗವಹಿಸುವುದಿಲ್ಲ. ನನ್ನ ಆಲೋಚನೆಗಳನ್ನು ಕೃತಿಗಳಲ್ಲಿ ದಾಖಲು ಮಾಡುತ್ತೇನೆ. ಅದು ಓದುಗರಲ್ಲಿ ಪರಿವರ್ತನೆಗೆ ಕಾರಣವಾಗುತ್ತದೆ ಎಂಬುದು ನನ್ನ ನಂಬಿಕೆ.

ಸತ್ಯಾನ್ವೇಷಣೆ...: ಸತ್ಯ ಎನ್ನುವುದಕ್ಕೆ ಒಂದೊಂದು ವಿಜ್ಞಾನದಲ್ಲಿ ಒಂದೊಂದು ರೀತಿ ಹೇಳುತ್ತಾರೆ. ಇತಿಹಾಸದಲ್ಲಿ ಹಾಗೂ ಭೌತಶಾಸ್ತ್ರದಲ್ಲಿ ವಿಭಿನ್ನತೆ ಇದೆ. ಸಂಗೀತದಲ್ಲಿ ರಾಗಗಳ ಮೂಲಕ ಸತ್ಯವನ್ನು ಕಂಡುಕೊಳ್ಳಲಾಗುತ್ತದೆ. ರಸಾಸ್ವಾದನೆ ಮೂಲಕ ಓದುಗರಿಗೆ ಅನುಭವ ನೀಡುವುದು ಸಾಹಿತ್ಯದಲ್ಲಿ ಸತ್ಯಾನ್ವೇಷಣೆ.

ಜಗಳದ ಬುದ್ಧಿ ಹೋಗಬೇಕು

ಮಾನವರು ಮಂಗಳ ಗ್ರಹಕ್ಕೆ ಹೋದರೂ. ಅಲ್ಲಿ ‘ನಾನು ಹೆಚ್ಚು’ ಎಂದು ಜಗಳ ಕಾಯುತ್ತಾರೆ. ಅಮೆರಿಕ ಮೊದಲು ಮಂಗಳನ ಮೇಲೆ ಹೋದರೆ ಹೆಚ್ಚು ಜಾಗ ತನಗೆ ಸೇರಿದ್ದು ಎನ್ನುತ್ತದೆ. ಹೀಗೇ ಅಲ್ಲಿಯೂ ಮನುಷ್ಯ ಬುದ್ಧಿ ಬಿಡುವುದಿಲ್ಲ. ‘ನಾನು ಹೆಚ್ಚು’ ಎಂಬುದೇ ಅಪಾಯಕಾರಿ ಮನೋಭಾವ. ಭೂಮಿಯನ್ನು ಬಿಟ್ಟು ಹೋಗಿ ಮಾನವಕುಲವನ್ನು ಉಳಿಸಿಕೊಳ್ಳುತ್ತೇವೆ ಎಂಬುದು ಸುಳ್ಳು. ಜನರು ಜಾತಿ, ವಂಶದ ಆಧಾರದಲ್ಲಿ ಮತ ಹಾಕುತ್ತಾರೆ. ಯಾವುದೇ ವಿಷಯ ತೆಗೆದುಕೊಂಡರೂ ಚುನಾವಣೆವರೆಗೆ ಇರಿಸಿಕೊಳ್ಳುತ್ತಾರೆಯೇ ಹೊರತು ವಸ್ತುನಿಷ್ಠವಾಗಿ ಆಲೋಚಿಸುವುದಿಲ್ಲ. ಇದು ಬದಲಾಗದೆ ಬದಲಾವಣೆ ಕಷ್ಟ.

ಈಗ ವಿದ್ವಾಂಸರ ನಿರ್ವಾತಕ್ಕೆ ಕಾರಣ ಏನು?

| ಸಹನಾ ವಿಜಯಕುಮಾರ್

ಎಸ್​.ಎಲ್​.ಭೈರಪ್ಪ: ಈ ಹಿಂದೆ ಬಾಂಬೆ ಪ್ರೆಸಿಡೆನ್ಸಿ, ಗುಜರಾತ್​ವರೆಗೂ ಇಂಟರ್​ವಿುೕಡಿಯೆಟ್​ತನಕ ಸಂಸ್ಕೃತ ಕಡ್ಡಾಯ ವಿಷಯವಾಗಿತ್ತು. ಅಮರಕೋಶ, ಕಾರಕಗಳು ಚಿಕ್ಕವಯಸ್ಸಿನಲ್ಲೇ ಬಾಯಿಪಾಠವಾಗುತ್ತಿತ್ತು. ಇಂಟರ್​ವಿುೕಡಿಯೆಟ್​ಗೆ ಬರುವ ವೇಳೆಗೆ ಸಂಸ್ಕೃತದ ಸಾಕಷ್ಟು ಜ್ಞಾನ ಇರುತ್ತಿತ್ತು. ಅಂಥವರು ಮುಂದೆ ಯಾವುದೇ ಜ್ಞಾನ ಸಂಪಾದಿಸಲು ಹೆಚ್ಚು ಕಷ್ಟವಾಗುತ್ತಿರಲಿಲ್ಲ. ಈಗ ಸಂಸ್ಕೃತವನ್ನು ಕಿತ್ತುಹಾಕಿದ್ದಾರೆ. ಸಂಸ್ಕೃತದ ಫೌಂಡೇಷನ್ನೇ ಇಲ್ಲ. ಈಗಿನ ಪ್ರೊಫೆಸರ್​ಗಳು ಇಂಗ್ಲಿಷ್ ಅನುವಾದವನ್ನು ಓದಿಕೊಂಡು, ಪಾಠ ಮಾಡುತ್ತಿದ್ದಾರೆ. ಸಂಸ್ಕೃತ, ಪಾಲಿಯನ್ನು ಮೂಲದಲ್ಲೇ ಓದಿದರೆ ಮಾತ್ರ ಆ ಜ್ಞಾನ ಲಭಿಸುತ್ತದೆ. ಹಿರಿಯಣ್ಣ, ನೀಲಕಂಠ ಶಾಸ್ತ್ರಿ, ಬಲದೇವ ಉಪಾಧ್ಯಾಯ, ಆರ್​ಸಿ ಮಜುಂದಾರ್ ಮುಂತಾದವರು ಮೂಲದಲ್ಲೆ ಓದಿದ್ದರಿಂದ ವಿದ್ವಾಂಸರಾದರು. ನನಗೆ ಅನುಮಾನ ಬಂದರೆ ಯಾರನ್ನು ಕೇಳುವುದು ತಿಳಿಯುವುದಿಲ್ಲ. ಎನ್. ಬಾಲಸುಬ್ರಹ್ಮಣ್ಯ ತೀರಿಹೋದರು. ಈಗೇನಿದ್ದರೂ ಶತಾವಧಾನಿ ಗಣೇಶರನ್ನು ಕೇಳಬೇಕು. ಅಷ್ಟು ಅಪರೂಪವಾಗಿದ್ದಾರೆ ವಿದ್ವಾಂಸರು. ಇದು ಸಾಹಿತ್ಯ ಬರೆಯುವವರಿಗೆ, ಇತಿಹಾಸ ಓದುವವರಿಗೆಲ್ಲರಿಗೂ ಆಗಿರುವ ಅಂಗವೈಕಲ್ಯ.

ದೆಹಲಿಯಲ್ಲಿದ್ದು ರಾಜಕೀಯ ಸೌಲಭ್ಯಗಳನ್ನು ಬಳಸಿಕೊಂಡು ಬೆಳೆಯಬಹುದಾಗಿದ್ದ ನೀವು ಅಲ್ಲಿಂದ ಮೈಸೂರಿಗೆ ಬಂದಿದ್ದೇಕೆ?

| ಡಾ.ಪ್ರಧಾನ್ ಗುರುದತ್ತ

ಎಸ್​.ಎಲ್​.ಭೈರಪ್ಪ: ದೆಹಲಿಯಲ್ಲಿದ್ದಾಗ, ಕರ್ನಾಟಕ ಬಿಟ್ಟು ಹೊರಗೆ ಹೋಗಿ 12 ವರ್ಷ ಆಗಿತ್ತು. ಹಿಂದಿ ಮಾತಾಡುವ ಪ್ರದೇಶದಲ್ಲಿದ್ದು, ಕನ್ನಡವನ್ನು ಸಲೀಸಾಗಿ ಮಾತಾಡಲು, ಬರೆಯಲೂ ಕಷ್ಟವಾಗುತ್ತಿತ್ತು. ಕನ್ನಡದ ಮೇಲಿನ ಹಿಡಿತವೇ ಕಡಿಮೆಯಾಗುತ್ತಿದೆ ಎನ್ನಿಸುತ್ತಿತ್ತು. ರಜೆಗೆ ಊರಿಗೆ ಬಂದಾಗ ಮನೆಗೆ ಬಂದು ಯಾರಾದರೂ ಬಾಗಿಲು ತಟ್ಟಿದರೆ, ‘ಕೌನ್ ಹೈ’ ಎನ್ನುತ್ತಿದ್ದೆ. ಕನ್ನಡದ ಲೇಖಕನಾಗಿ ಕನ್ನಡದ ನೆಲದಲ್ಲಿ ಇರದೇ ಹೋದರೆ ಭಾಷೆ ಮೇಲಿನ ಹಿಡಿತ ಹೋಗುತ್ತದೆ ಎಂದು ಅರ್ಥವಾಯಿತು. ಹಾಗಾಗಿ, ಮೈಸೂರಿಗೆ ವರ್ಗಾವಣೆ ಪಡೆದೆ. ಕೆಂಗಲ್, ಹಾಸನದ ಜಾತ್ರೆಗೆ ಹೋಗಿ ಅಲ್ಲಿ ಕುಳಿತು ಗ್ರಾಮೀಣ ಕನ್ನಡವನ್ನು ಕೇಳಿಸಿಕೊಳ್ಳುತ್ತಿದ್ದೆ. ಮೈಸೂರಿಗೆ ಬಂದದ್ದು ನನಗೆ ಸಾಕಷ್ಟು ಅನುಕೂಲವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net