ವಿಜ್ಞಾನ, ತಂತ್ರಜ್ಞಾನದಲ್ಲಿ ಆಕಾಶಮಟ್ಟದ ಸಾಧನೆ

blm
Published on

ಕಾರ್ಕಳ: ಸ್ವಾತಂತ್ರ್ಯ ಎಂಬುದು ಇಂದು ವಿಜ್ಞಾನ ಕ್ಷೇತ್ರದಲ್ಲಿ ಸ್ವಾಯತ್ತತೆ, ಪ್ರಗತಿ ಮತ್ತು ಜನಕೇಂದ್ರಿತ ಸೇವೆಯ ಸಂಕೇತವಾಗಿದೆ. ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಮೂಲಕ ಹೊಸ ಸಾಮರಸ್ಯವನ್ನು ರೂಪಿಸುತ್ತಿದ್ದೇವೆ. ಆಂತರಿಕ್ಷ ಕ್ಷೇತ್ರ, ಅಣುಶಕ್ತಿ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ಕೃಷಿ ಕ್ಷೇತ್ರ, ಮಾಹಿತಿ ತಂತ್ರಜ್ಞಾನ ಹೀಗೆ ಸ್ವತಂತ್ರ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಕಾಶ ಮಟ್ಟದ ಸಾಧನೆಗಳನ್ನು ಕಾಣುತ್ತಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್‌ಕುಮಾರ್ ಹೇಳಿದರು.

ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ 79ನೇ ಸಂಭ್ರಮದ ಸ್ವಾತಂತ್ರ್ಯೋತ್ಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

ವಿಜ್ಞಾನದ ಪಯಣವು ಬಾಹ್ಯಾಕಾಶ ಕೇಂದ್ರದಲ್ಲಿ ಅಲ್ಲ, ತರಗತಿ ಕೊಠಡಿಯಲ್ಲಿ ಆರಂಭವಾಗುತ್ತದೆ. ತರಗತಿಯಲ್ಲಿ ಕಲಿಯುವ ಪ್ರತಿಯೊಂದು ಪಾಠ, ಪ್ರಯೋಗಾಲಯದಲ್ಲಿ ಮಾಡುವ ಪ್ರತಿಯೊಂದು ಪ್ರಯೋಗ, ಕುತೂಹಲದಿಂದ ಕೇಳುವ ಪ್ರತಿಯೊಂದು ಪ್ರಶ್ನೆ - ಇವುಗಳೇ ರಾಷ್ಟ್ರ ನಿರ್ಮಾಣದ ಬೀಜಗಳು. ವಿಜ್ಞಾನ ಮತ್ತು ಯುವಜನತೆ ರಾಷ್ಟ್ರ ನಿರ್ಮಾಣದ ಇಂಜಿನ್‌ಗಳು ಇದ್ದಂತೆ ಎಂದರು.

ಕ್ರಿಯೇಟಿವ್ ಕಾಲೇಜಿನಲ್ಲಿ ಹೊಸದಾಗಿ ಆರಂಭಗೊಂಡ 6/8 ನೌಕಾ ಉಪವಿಭಾಗ -ಎನ್.ಸಿ.ಸಿ ಉಡುಪಿ ಘಟಕದ ಪ್ರಾಯೋಜಕರಾದ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಹಾಗೂ ಸಿಟಿಒ ಮಹೇಶ್ ಆರ್.ಶೆಣೈ ನೇತೃತ್ವದಲ್ಲಿ ಎನ್‌ಸಿಸಿ ಕೆಡೆಟ್‌ಗಳಿಂದ ಕವಾಯತು ನಡೆಯಿತು. ನೌಕಾಪಡೆ ವಿಭಾಗವನ್ನು ಕೆಡೆಟ್ ಕ್ಯಾಪ್ಟನ್ ಗುಂಡಾಲ ಶ್ರೀಗವಿ ನಿರ್ವಹಿಸಿದರು.

ಕ್ರಿಯೇಟಿವ್ ಸವಿಗಾನ: ಜೀ ಸರಿಗಮಪ ಮತ್ತು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಖ್ಯಾತಿಯ ಯಶವಂತ ಎಂ.ಜಿ. ಹಾಗೂ ತಂಡದವರಿಂದ ದೇಶಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಸಮಾರಂಭದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ, ಕಾಲೇಜಿನ 2,000ಕ್ಕಿಂತಲೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಬೋಧಕ - ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ರಾಜೇಶ್ ಶೆಟ್ಟಿ, ವಿನಾಯಕ ಜೋಗ್, ಸ್ಮಿತಾ ಕಾರ್ಯಕ್ರಮ ನಿರ್ವಹಣೆ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net