ಚರ್ಮಗಂಟು ರೋಗ ನಿಯಂತ್ರಣ, ಹೈನುಗಾರಿಕೆಯಲ್ಲಿ ಚೇತರಿಕೆ

vaccine
Published on

-ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕಾರ್ಕಳ, ಹೆಬ್ರಿ, ಕುಂದಾಪುರ ಸಹಿತ ಜಿಲ್ಲಾದ್ಯಂತ ಹೈನುಗಾರರು ಹೆಚ್ಚಿದ್ದು ಜಾನುವಾರುಗಳ ಸಾಕಣೆಯನ್ನೇ ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡು ಜೀವನ ಕಳೆಯುತ್ತಿದ್ದಾರೆ. ಕಳೆದ ವರ್ಷ ಜಾನುವಾರುಗಳಿಗೆ ಕಾಣಿಸಿದ ಚರ್ಮಗಂಟು ರೋಗದಿಂದ ರೈತಾಪಿ ವರ್ಗ ಕಂಗಾಲಾಗಿತ್ತು. ಹೀಗಾಗಿ ಈ ಬಾರಿ ಇಲಾಖೆ ಲಸಿಕೆ ಆರಂಭಿಸಿದ್ದು ರೈತರು ನೆಮ್ಮದಿಯ ಉಸಿರು ಬಿಡುವಂತಾಗಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಂಡು ಬಂದ ಚರ್ಮಗಂಟು ರೋಗ ಹೈನುಗಾರರನ್ನು ಆತಂಕಕ್ಕೆ ತಳ್ಳಿತ್ತು. ಇದೀಗ ಜಿಲ್ಲೆಯ 108 ಗ್ರಾಮಗಳಲ್ಲಿ ಪಶುಸಂಗೋಪನೆ ಇಲಾಖೆಯಿಂದ (ಬ್ಲ್ಯಾಂಕೆಟ್) ಲಸಿಕೆ ನೀಡುವುದರ ಮೂಲಕ ಚರ್ಮಗಂಟು ರೋಗ ಉಲ್ಬಣಿಸುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಮನೆ ಮಕ್ಕಳಂತೆ ಸಾಕುತ್ತಿದ್ದ ಜಾನುವಾರುಗಳು ರೋಗದಿಂದ ಬಳಲುತ್ತಿರುವ ದುಃಖ ಒಂದೆಡೆಯಾದರೆ, ಆರ್ಥಿಕ ಸಮಸ್ಯೆಯೂ ಹೈನುಗಾರರನ್ನು ಕಾಡಿತ್ತು. ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ ಜಾನುವಾರುಗಳು ಸಮಸ್ಯೆ ಎದುರಿಸುತ್ತಿದ್ದು ಮೊದಲ ಹಂತದಲ್ಲಿ 36 ಸಾವಿರ ಲಸಿಕೆ ನೀಡುವ ಗುರಿ ಇಲಾಖೆ ಹೊಂದಿದೆ. ಪ್ರಸ್ತುತ ಜಿಲ್ಲೆಯಲ್ಲಿ ರೋಗ ಶೂನ್ಯಕ್ಕೆ ತಲುಪಿದ್ದು ಹೈನುಗಾರರು ನಿಟ್ಟುಸಿರು ಬಿಡುವಂತಾಗಿದೆ.

ಲಸಿಕೆ ನೀಡಿಕೆ

ಎರಡನೇ ಹಂತದಲ್ಲಿ 16 ಸಾವಿರ ಲಸಿಕೆಯನ್ನು ಜಾನುವಾರುಗಳಿಗೆ ನೀಡಲಾಗಿದೆ. 20,300 ಲಸಿಕೆ ದಾಸ್ತಾನು ಇದ್ದು, ಹಂತಹಂತವಾಗಿ ಲಸಿಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಈ ವರ್ಷ ಚರ್ಮಗಂಟು ರೋಗದಿಂದ ಜಾನುವಾರುಗಳು ಸಾವನ್ನಪ್ಪಿಲ್ಲ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವೈದ್ಯರು, ಸಿಬ್ಬಂದಿ ಕೊರತೆ ನಡುವೆಯೂ ಜಿಲ್ಲೆಯಲ್ಲಿ 2.50 ಲಕ್ಷ ಜಾನುವಾರುಗಳಿಗೆ ಬೃಹತ್ ಲಸಿಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಕಳೆದ ಬಾರಿ ರೋಗ ಹೆಚ್ಚಾಗಿ ಕಾಣಿಸಿಕೊಂಡಿದ್ದ ಗ್ರಾಮಗಳಲ್ಲಿ ಮೊದಲ ಹಂತದಲ್ಲಿ ಲಸಿಕೆ ನೀಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ 91 ಹಸು ಹಾಗೂ ಕರುಗಳು ರೋಗದಿಂದ ಮೃತಪಟ್ಟಿದ್ದು, ಹೆಬ್ರಿ, ಕಾರ್ಕಳ, ಕುಂದಾಪುರ ಭಾಗದಲ್ಲಿ ಮೃತಪಟ್ಟ ಹಸುಗಳಿಗೆ ವಿಮೆ ಯೋಜನೆಯಡಿ ಹೈನುಗಾರರಿಗೆ ಪರಿಹಾರ ನೀಡಲಾಗಿದೆ.

ಕಳೆದ ಬಾರಿ ಜಾನುವಾರುಗಳಿಗೆ ಚರ್ಮಗಂಟು ರೋಗದಿಂದ ಹೈನುಗಾರರು ಸ್ವಲ್ಪ ತೊಂದರೆ ಅನುಭವಿಸುವಂತಾಗಿತ್ತು. ಆದರೆ ಈ ಬಾರಿ ರೋಗದ ಪ್ರಮಾಣ ಕಡಿಮೆಯಾಗಿದ್ದು ಹೈನುಗಾರಿಕೆ ಸ್ವಲ್ಪ ಚೇತರಿಕೆ ಕಂಡಿದೆ.-ಭಾಸ್ಕರ್ ಶೆಟ್ಟಿ, ಹೈನುಗಾರರು

ಕಳೆದ ವರ್ಷ ಚರ್ಮಗಂಟು ರೋಗ ಹೆಚ್ಚು ಬಾಧಿಸಿರುವ ಗ್ರಾಮಗಳಲ್ಲಿ ಮುಂಜಾಗ್ರತೆಯಾಗಿ ಜಾನುವಾರುಗಳಿಗೆ ಲಸಿಕೆ ನೀಡುತ್ತಿದ್ದೇವೆ. ಜಾನುವಾರುಗಳಲ್ಲಿ ಚರ್ಮಗಂಟು ರೋಗ ನಿಯಂತ್ರಣಕ್ಕೆ ಎರಡನೇ ಹಂತದಲ್ಲಿ ಲಸಿಕೆ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.-ಡಾ.ಶಂಕರ್ ಶೆಟ್ಟಿ, ಉಪ ನಿರ್ದೇಶಕರು, ಪಶುಸಂಗೋಪನ ಇಲಾಖೆ, ಉಡುಪಿ https://www.vijayavani.net/governament-schools-lacking-infrastructure-facility

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net