

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ವಲಯದ ಕಳ್ಳಿಗೆ ಒಕ್ಕೂಟದ ಆಟಿದ ನೆಂಪು ಕಾರ್ಯಕ್ರಮ ಬ್ರಹ್ಮರಕೂಟ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಎಂ.ಆಟಿ ಕಳೆಂಜನಿಗೆ ದವಸ-ಧಾನ್ಯ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಮೂಲ ಸಂಸ್ಕೃತಿಗೆ ಧಕ್ಕೆ ಬಾರದ ರೀತಿಯಲ್ಲಿ ಸಂಸ್ಕೃತಿಯನ್ನು ಆಚರಿಸಬೇಕು. ಪ್ರತಿ ಒಕ್ಕೂಟದಲ್ಲಿಯೂ ಇಂತಹ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದಲ್ಲಿ ಒಕ್ಕೂಟವು ಸಕ್ರಿಯವಾಗಿರಲು ಸಾಧ್ಯವಿದೆ ಎಂದರು.
ಕಳ್ಳಿಗೆ ಒಕ್ಕೂಟದ ಅಧ್ಯಕ್ಷ ಜಯಂತ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಜ್ಯೋತಿಷಿ ಅನಿಲ್ ಪಂಡಿತ್ ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಕಳ್ಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಬ್ರಹ್ಮರಕೊಟ್ಲು ಎಸ್.ಡಿ.ಎಂ.ಸಿ ಅಧ್ಯಕ್ಷ ಉದಯ ಜ್ಯೋತಿಗುಡ್ಡೆ, ಮೂಕಾಂಬಿಕಾ ಕೃಪಾ ಭಜನಾ ಮಂಡಳಿ ಅಧ್ಯಕ್ಷ ನವೀನ್ ಬಂಗೇರ ಪಲ್ಲ ಉಪಸ್ಥಿತರಿದ್ದರು.
ಸೂರ್ಯ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯ ಮಹೇಶ್ ಸ್ವಾಗತಿಸಿ, ಒಕ್ಕೂಟ ಸೇವಾ ಪ್ರತಿನಿಧಿ ಬಬಿತಾ ವಂದಿಸಿ, ತುಂಬೆ ವಲಯದ ಮೇಲ್ವಿಚಾರಕಿ ಮಮತಾ ನಿರೂಪಿಸಿದರು.