

ಶಿರಸಿ: ಮನೆ ಮನೆಗೂ ಯಕ್ಷಗಾನ ಆಡಿಸುವ ಚಿಕ್ಕಮೇಳ ಈವರೆಗೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತವಿದೆ. ಈಗ ಆ ಕಲಾ ತಂಡ ಘಟ್ಟ ಏರಿ ಶಿರಸಿಗೂ ಬಂದಿದೆ. ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನ ಹಲವೆಡೆ ಮನೆ ಮನೆಗೂ ತೆರಳಿ ಯಕ್ಷಗಾನ ಪ್ರದರ್ಶನ ನೀಡುತ್ತಿದೆ.
ಬೇಸಿಗೆಯಲ್ಲಿ ವಿವಿಧ ವೃತ್ತಿಪರ ತಿರುಗಾಟದಲ್ಲಿರುವ ಕಲಾ ತಂಡಗಳು ಮಳೆಗಾಲದಲ್ಲಿ ಚಿಕ್ಕ ಮೇಳದ ಮೂಲಕ ಮನೆಮನೆಗೆ ತೆರಳಿ ಯಕ್ಷಗಾನ ಪ್ರದರ್ಶನ ನೀಡುತ್ತಿವೆ. ಒಂದು ಕಥಾನಕವನ್ನು ಆಯ್ದುಕೊಂಡು 15-20 ಮನೆಗಳಲ್ಲಿ ಆಡಿ ತೋರಿಸುತ್ತಿದ್ದಾರೆ. ಇದು 15-20 ನಿಮಿಷ, ಅರ್ಧ ಗಂಟೆ, ತಾಸುಗಳ ಕಾಲವೂ ಪ್ರದರ್ಶನ ನೀಡುತ್ತಿದೆ. ಪ್ರತಿ ಮನೆಯಲ್ಲೂ ಗಣಪತಿ ಪೂಜೆ ಮಾಡಿ ಆ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವ ಚಿಕ್ಕಮೇಳದ ಕಲಾವಿದರು, ಅಕ್ಕಿ, ಕಾಯಿ, ದೇವರ ಪೂಜೆಗೆ ವಸ್ತುಗಳು ಮತ್ತು ಅವರು ನೀಡಿದಷ್ಟು ಕಾಣಿಕೆ ಪಡೆಯುತ್ತಾರೆ. ದೇವರ ಸೇವಾ ರೂಪವಾಗಿ ಯಕ್ಷಗಾನ ಪ್ರದರ್ಶನ ನೀಡುವ ತಂಡವಾಗಿ ಪರಿವರ್ತನೆಗೊಂಡ ಈ ಚಿಕ್ಕಮೇಳದಲ್ಲಿ ಐದಾರು ಕಲಾವಿದರಿದ್ದಾರೆ. ಭಾಗವತರಾಗಿ ರತ್ನಾಕರ ಗೌಡ ಕಾಲ್ತೋಡು, ಚಂಡೆಯಲ್ಲಿ ದಿನೇಶ ಮರಾಠಿ ಕುಮಟಾ, ಗಣೇಶ ದೇವಾಡಿಗ ಮಹಾಬಲೇಶ್ವರ, ಪ್ರವೀಣ ಶೆಟ್ಟಿ ಮೋರ್ಟು, ಸಂಚಾಲಕರಾಗಿ
ಅಣ್ಣಪ್ಪ ಗಾಣಿಗ ಬೀಜಮಕ್ಕಿ, ರಾಘವೇಂದ್ರ ಗಾಣಿಗ ಬೀಜಮಕ್ಕಿ ಇದ್ದಾರೆ.
ಸಂಕಷ್ಟ ದೂರ: ಮನೆಗಳಲ್ಲಿ ಯಕ್ಷಗಾನದ ಝೇಂಕಾರ ಕೇಳಿದರೆ ವಾಸ್ತು ದೋಷ, ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಪ್ರಾಚೀನ ಕಾಲದಿಂದ ಇದೆ. ಅದೇ ಆಧಾರದಲ್ಲಿ ದಕ್ಷಿಣ ಕನ್ನಡದಲ್ಲಿ ಇದೊಂದು ಸಂಪ್ರದಾಯವಾಗಿ ಬೆಳೆದಿದೆ ಎಂಬುದು ವಿಶೇಷ.