

ಉತ್ತರಕನ್ನಡ: ಬಿಜೆಪಿಯ ಭದ್ರಕೋಟೆಯಾಗಿರುವ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಭೀಮಣ್ಣ ನಾಯ್ಕ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆರು ಬಾರಿ ಗೆದ್ದು ಬೀಗಿದ್ದ ಕಾಗೇರಿಗೆ ಸೋಲುಣಿಸಿ ಭೀಮಣ್ಣ ನಾಯ್ಕ ಗೆದ್ದು ಬೀಗಿದ್ದಾರೆ.
ಸತತ ಸೋಲನನುಭವಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅಂತೂ ಗೆಲುವು ಕಂಡಿದ್ದು, ಆರು ಬಾರಿ ಗೆದ್ದು ಬೀಗಿದ್ದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ ಸೋಲನನುಭವಿಸಿದ್ದಾರೆ. ಕಾಂಗ್ರೆಸ್ನ ಭೀಮಣ್ಣ ನಾಯ್ಕ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹಾಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ಹಾಗೂ ಸ್ಪೀಕರ್ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಹೀನಾಯ ಸೋಲು ಕಂಡಿದ್ದಾರೆ.
ವಿಧಾನಸಭಾ ಅಧ್ಯಕ್ಷರಾಗಿದ್ದ, ಆರು ಬಾರಿ ಶಾಕರಾಗಿ ಅಧಿಕಾರ ಅನುಭವಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿ 66639 ಮತಗಳನ್ನ ಪಡೆದಿದ್ದು, ಇವರ ವಿರುದ್ಧ 9017 ಮತಗಳ ಅಂತರದಲ್ಲಿ ಭೀಮಣ್ಣ ನಾಯ್ಕ (75656) ಐತಿಹಾಸಿಕ ಗೆಲುವು ಕಂಡಿದ್ದಾರೆ. ಈ ಬಾರಿ ಶಿರಸಿ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನೇರಾನೇರ ಸ್ಪರ್ಧೆ ಏರ್ಪಟಿತ್ತು. ಈ ಬಾರಿ ತುಂಬಾ ವರ್ಷದ ಬಳಿಕ ಶಿರಸಿಯಲ್ಲಿ ಕಾಂಗ್ರೆಸ್ನ ಭೀಮಣ್ಣ ನಾಯ್ಕ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
13 ವರ್ಷ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶಿರಸಿಯ ಭೀಮಣ್ಣ ನಾಯ್ಕ, 2018ರ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ- ಸಿದ್ದಾಪುರ ಕ್ಷೇತ್ರದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ, 2019ರ ಉಪಚುನಾವಣೆಯಲ್ಲಿ ಯಲ್ಲಾಪುರ- ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ್ ವಿರುದ್ಧ, 2020ರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಗಣಪತಿ ಉಳ್ವೇಕರ್ ವಿರುದ್ಧ ಸೋಲನನುಭವಿಸಿದ್ದರು. ಜಿಲ್ಲಾ ಪಂಚಾಯತಿ ಸದಸ್ಯರಾಗಿ ಒಮ್ಮೆ ಸ್ಪರ್ಧಿಸಿ ಗೆಲುವು ಕಂಡಿದ್ದ ಭೀಮಣ್ಣ, ತದನಂತರ ಚುನಾವಣೆಗಳಲ್ಲಿ ಕಂಡಿದ್ದೆಲ್ಲವೂ ಸೋಲೆ. ರಾಜಕೀಯ ನೆಲೆ ಗಟ್ಟಿಗೊಳಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಭೀಮಣ್ಣ, ಸೋತರೂ ಸುಮ್ಮನೆ ಕೂರದೇ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದರು.