ವಿಮುಕ್ತ ದೇವದಾಸಿಯರ ಮಕ್ಕಳನ್ನು ದತ್ತು ಪಡೆಯಲಿ

Untitled design (13)
Published on

ಸಿರಗುಪ್ಪ: ವಿಮುಕ್ತ ದೇವದಾಸಿಯರಿಗೆ ಪಿಂಚಣಿ ಸೌಲಭ್ಯ ಸಮರ್ಪಕವಾಗಿ ಒದಗಿಸಲು ಒತ್ತಾಯಿಸಿ ಕರ್ನಾಟಕ ದೇವದಾಸಿ ಮಹಿಳೆಯರ ಕ್ಷೇಮಾಭಿವೃಧ್ಧಿ ಒಕ್ಕೂಟ ತಾಲೂಕು ಸಮಿತಿ ತಹಸಿಲ್ ಕಚೇರಿ ಶಿರಸ್ತೇದಾರ್ ಸಿದ್ಧಾರ್ಥ ಕಾರಂಜಿಗೆ ಮನವಿ ಸಲ್ಲಿಸಿತು.

ಕರ್ನಾಟಕದಲ್ಲಿ ಸುಮಾರು ಒಂದು ಲಕ್ಷ ವಿಮುಕ್ತ ದೇವದಾಸಿ ಕುಟುಂಬಗಳಿವೆ. ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಲ್ಲಿ 15 ಸಾವಿರಕ್ಕಿಂತ ಹೆಚ್ಚಿನ ಕುಟುಂಬಗಳಿವೆ. ಆದರೆ ತಾಲೂಕಿನಲ್ಲಿ ಸುಮಾರು 1,073 ಕುಟುಂಬದ ವಿಮುಕ್ತ ದೇವದಾಸಿಯರನ್ನು ಸರ್ವೇ ಪಟ್ಟಿಗೆ ಒಳಪಡಿಸಲಾಗಿದೆ. ಇನ್ನೂ ಹಲವಾರು ಹಳ್ಳಿಗಳನ್ನು ಪಟ್ಟಿಯೊಳಗೆ ಸೇರ್ಪಡೆ ಮಾಡಿಲ್ಲ. ಸೇರ್ಪಡೆಯಾದವರಿಗೆ ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು, ಅದು ಆಮೆಗತಿಯಲ್ಲಿ ಸಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2016ರಿಂದ ಪಿಂಚಣಿಯು ಸರಿಯಾಗಿ ತಲಪುತ್ತಿಲ್ಲ. 2021ರಲ್ಲಿ ಎನ್‌ಪಿಎಸ್ ಮಾಡಿದಾಗಿನಿಂದಲೂ ತಾಲೂಕಿನಲ್ಲಿ 200ಕ್ಕಿಂತ ಹೆಚ್ಚು ಜನರಿಗೆ ಪಿಂಚಣಿ ದೊರೆಯುತ್ತಿಲ್ಲ. ವಿಮುಕ್ತ ದೇವದಾಸಿಯರ ದಾಖಲೆಗಳಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಸಿಪಿಐ ತಾಲೂಕು ಸಂಚಾಲಕ ಬಿ.ಅಡಿವೆಪ್ಪ ಒತ್ತಾಯಿಸಿದರು.

ಸಂಘದ ತಾಲೂಕು ಅಧ್ಯಕ್ಷೆ ಹುಲಿಗೆಮ್ಮ ಮಾತನಾಡಿ, ಕಳೆದ ಮೂರು ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ವಿಮುಕ್ತ ದೇವದಾಸಿಯರ ಮಾಸಿಕ ಪಿಂಚಣಿಯನ್ನು ಐದು ಸಾವಿರ ರೂ.ಗೆ ಹೆಚ್ಚಿಸಬೇಕು. ವಿಮುಕ್ತ ದೇವದಾಸಿಯರ ಮಕ್ಕಳನ್ನು ಸರ್ಕಾರವೇ ದತ್ತು ಪಡೆದು ವಿದ್ಯಾಭ್ಯಾಸ ನೀಡುವ ಜತೆಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಈರಮ್ಮ, ಲಕ್ಷ್ಮೀ, ಯಂಕಮ್ಮ, ತಾಯಮ್ಮ, ಯಲ್ಲಮ್ಮ, ಎಚ್.ಲಕ್ಷ್ಮಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net