8-9 ಎಕರೆ ಜಮೀನಿದ್ರೂ ಹೆಣ್ಣು ಕೊಡ್ತಿಲ್ಲ! ವಧು ಹುಡುಕಿ ಕೊಡಿ ಎಂದು ಕರೆ ಮಾಡಿದ ಯುವಕನಿಗೆ MLA ಉತ್ತರ ಹೀಗಿತ್ತು…

Audio Clip
Published on

ಮುಂಬೈ: ಮದುವೆ ಆಗಲು ಯಾರು ಹೆಣ್ಣು ಕೊಡುತ್ತಿಲ್ಲ ಅಂತಾ ಯುವಕನೊಬ್ಬ ಶಾಸಕರಿಗೆ ಕರೆ ಮಾಡಿ ಅವಲತ್ತುಕೊಂಡಿರುವ ಘಟನೆ ಮಹಾರಾಷ್ಟ್ರದ ಔರಂಗಬಾದ್​ನಲ್ಲಿ ನಡೆದಿದೆ. ಹೆಣ್ಣು ಹುಡುಕಿಕೊಡಿ ಎಂಬ ಯುವಕನ ಮನವಿಗೆ ಶಾಸಕರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಔರಂಗಬಾದ್​ನ ರತನ್​ಪುರ್​ ಮೂಲದ ಯುವಕ ತಮ್ಮ ಕ್ಷೇತ್ರದ ಶಾಸಕರಿಗೆ ಕರೆ ಮಾಡಿ, ಹೇಗಾದರೂ ಸರಿಯೇ ನನಗೊಂದು ಮದುವೆ ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾನೆ. ಶಾಸಕ ಮತ್ತು ಯುವಕ ಮಾತನಾಡಿರುವ ಆಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ನನ್ನ ಮನೆ ಸುಸ್ಥಿತಿಯಲ್ಲಿದೆ. ನಾನು 8 ರಿಂದ 9 ಎಕರೆ ಜಮೀನು ಹೊಂದಿದ್ದೇನೆ. ಆದರೆ, ಈವರೆಗೂ ನನಗೆ ಯಾರೂ ಕೂಡ ಹೆಣ್ಣು ಕೊಡುತ್ತಿಲ್ಲ. ನಾನು ಮದುವೆ ಆಗಲೇಬೇಕಿದೆ. ನಿಮ್ಮ ಜಿಲ್ಲೆಯಲ್ಲಿ ಯಾರಾದರೂ ಒಳ್ಳೆಯ ಹುಡುಗಿ ಇದ್ದರೆ ನೋಡಿ ಸರ್​ ಎಂದು ಶಿವಸೇನಾ ಶಾಸಕ ಉದಯ್​ ಸಿಂಗ್​ ರಜಪೂತ್​ ಅವರಿಗೆ ಮನವಿ ಮಾಡಿದ್ದಾನೆ. ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿರುವ ಶಾಸಕರು, ರೆಸ್ಯೂಮ್​ ಕಳುಹಿಸಿಕೊಡುವಂತೆ ಯುವಕನ ಬಳಿ ಕೇಳಿದ್ದಾರೆ.

ಸದ್ಯ ಆಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಹುಡುಗನಿಗೆ ಜಮೀನು ಇದ್ದರೂ ಹುಡುಗಿ ಸಿಗದೇ ಇರುವ ವಿಚಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪತ್ನಿಯನ್ನು ನೋಡಿಕೊಳ್ಳಲು ಸಮರ್ಥವಾಗಿದ್ದರೂ ಹುಡುಗಿಯನ್ನು ನೀಡಲು ಜನರು ಏಕೆ ಸಿದ್ಧವಾಗಿಲ್ಲ? ಎಂಬ ಪ್ರಶ್ನೆ ಉದ್ಧವವಾಗಿದ್ದು, ಈ ಬಗ್ಗೆ ಜನರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.

ಇಂದಿಗೂ ಒಬ್ಬ ರೈತ ತನ್ನ ಮಗಳನ್ನು ರೈತನ ಮಗನಿಗೆ ಮದುವೆ ಮಾಡಲು ಬಯಸುವುದಿಲ್ಲ. ಬದಲಾಗಿ ರೈತನಿಗೂ ತನ್ನ ಮಗಳಿಗೆ ನಗರದಲ್ಲಿ ಕೆಲಸ ಮಾಡುವ ಯುವಕನ ಜೊತೆ ಮದುವೆ ಮಾಡಿಸುವ ಆಸೆ ಇದೆ ಎಂದು ನೆಟ್ಟಿಗರು ಕಾಮೆಂಟ್​ ಮೂಲಕ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net