ತಂಡಕ್ಕೆ ಆಯ್ಕೆ ಕುರಿತು ಯುವಿಗೆ ಧೋನಿ ಹೇಳಿದ್ದ ಮಾತೇನು..?

yuv and ms dhoni for
Published on

ಬೆಂಗಳೂರು: ಯುವರಾಜ್​ ಸಿಂಗ್​ ಭಾರತ ತಂಡ ಕಂಡ ಸರ್ವ ಶ್ರೇಷ್ಠ ಆಲ್ರೌಂಡರ್​ಗಳಲ್ಲಿ ಒಬ್ಬರು. ಭಾರತ ತಂಡ 2007ರ ಚೊಚ್ಚಲ ಟಿ20 ವಿಶ್ವಕಪ್​ ಹಾಗೂ 2011ರ ಏಕದಿನ ವಿಶ್ವಕಪ್​ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಯುವರಾಜ್​ ಸಿಂಗ್​. ದಿಗ್ಗಜ ಆಲ್ರೌಂಡರ್​ ಯುವರಾಜ್​ ಸಿಂಗ್​ ಕಳೆದ ವರ್ಷವಷ್ಟೇ ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ತಾನು ನಿರೀಕ್ಷಿಸಿದಂತೆ ವಿದಾಯ ಸಿಗಲಿಲ್ಲವೆಂಬ ಬೇಸರ ಯುವಿಗೆ ಕಾಡುತ್ತಿದೆ. ಇದನ್ನೂ ಅದೆಷ್ಟೋ ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಕೂಡ. ಆಯ್ಕೆ ಸಮಿತಿ 2019ರ ವಿಶ್ವಕಪ್​ ಟೂರ್ನಿಗೆ ತಂಡ ಕಟ್ಟುವ ದೃಷ್ಟಿಯಿಂದ ನಿನ್ನ ಆಯ್ಕೆ ಪರಿಗಣಿಸುವುದು ಕಷ್ಟ ಎಂದು ಧೋನಿ 2017ರಲ್ಲೇ ಯುವಿಗೆ ಹೇಳಿದ್ದರಂತೆ. ಇದೀಗ ಸ್ವತಃ ಯುವರಾಜ್​ ಸಿಂಗ್​ ಅವರೇ ಬಹಿರಂಗಪಡಿಸಿದ್ದಾರೆ.

ಕ್ಯಾನ್ಸರ್​ನಿಂದ ಚೇತರಿಸಿಕೊಂಡ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪುನರಾಗಮನಕ್ಕೆ ಸಾಕಷ್ಟು ಬೆವರು ಹರಿಸಿದ ಯುವಿ, 2019ರ ಏಕದಿನ ವಿಶ್ವಕಪ್​ ಬಳಿಕ ನಿವೃತ್ತಿ ಹೇಳುವ ಲೆಕ್ಕಾಚಾರದಲ್ಲಿದ್ದರು. ಇದಕ್ಕೆ ನಾಯಕ ವಿರಾಟ್​ ಕೊಹ್ಲಿ ಬೆಂಬಲವೂ ಯುವರಾಜ್​ಗಿತ್ತು. ಆದರೆ, ಆಯ್ಕೆ ಸಮಿತಿ ಮಾತ್ರ ಯುವಿ ಕನಸಿಗೆ ಅವಕಾಶ ನೀಡಲಿಲ್ಲ. 2017ರಲ್ಲಿ ವೆಸ್ಟ್​ ಇಂಡೀಸ್​ ಪ್ರವಾಸವೇ ಯುವಿ ಪಾಲಿಗೆ ಕಡೇ ಅಂತಾರಾಷ್ಟ್ರೀಯ ಸರಣಿಯಾಯಿತು. ಆ ಬಳಿಕ ಒಮ್ಮೆ ಧೋನಿ, ವಿಶ್ವಕಪ್​ಗೆ ತಂಡಕಟ್ಟಲು ಆಯ್ಕೆ ಸಮಿತಿ ಯೋಚಿಸಿದಂತಿದೆ. ಹೀಗಾಗಿ ನಿನ್ನ ಆಯ್ಕೆ ಕಷ್ಟ ಎಂದು ಧೋನಿ, ಯವಿಗೆ ಹೇಳಿದ್ದರಂತೆ. ನನ್ನ ವೃತ್ತಿ ಜೀವನದ ಬಗ್ಗೆ ಸರಿಯಾಗಿ ಉತ್ತರನೀಡಿದವರೇ ಧೋನಿ ಎಂದು ಯುವಿ ಹೇಳಿಕೊಂಡಿದ್ದಾರೆ.

2011ರ ಏಕದಿನ ವಿಶ್ವಕಪ್​ನಲ್ಲಿ ಯುವರಾಜ್​ ಸಿಂಗ್​ 9 ಪಂದ್ಯಗಳಿಂದ 362 ರನ್​ ಸಿಡಿಸಿ, 15 ವಿಕೆಟ್​ ಕಬಳಿಸಿದ್ದರು. ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟ ಹೀರೋ ಎನಿಸಿಕೊಂಡಿದ್ದರು ಪಂಜಾಬ್​ನ ಯುವರಾಜ್​. ಬಳಿಕ ಹಲವು ಬಾರಿಗೆ ಧೋನಿ ಕೂಡ ನನ್ನ ಬಳಿಕ ವಿಶ್ವಕಪ್​ ಗೆಲುವಿನಲ್ಲಿ ನೀನೆ ಪ್ರಮುಖ ಎಂದು ಹೇಳಿದ್ದುಂಟು. ಕ್ಯಾನ್ಸರ್​ನಿಂದ ಚೇತರಿಸಿಕೊಂಡು ವಾಪಸ್​ ಆದ ಬಳಿಕ ಎಲ್ಲವೂ ಬದಲಾಗಿತ್ತು ಎಂದು ಯುವರಾಜ್​ ಹೇಳಿದ್ದಾರೆ. ಭವಿಷ್ಯದಲ್ಲಿ ಯುವ ಆಟಗಾರರಿಗೆ ತರಬೇತಿ ನೀಡುವುದಾಗಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net