

ವಿಜಯವಾಣಿ ಸುದ್ದಿಜಾಲ ಉಡುಪಿ
ಇತ್ತೀಚೆಗೆ ಯುವ ಪ್ರತಿಭೆ ಸಾಧ್ವಿನಿ ಕೊಪ್ಪ ಅವರ ವಿವಿಧ ಭಕ್ತಿಗೀತೆಗಳು ನನ್ನನ್ನೂ ಸೇರಿದಂತೆ ನಾಡಿನ ಅನೇಕರ ಮನ ಸೆಳೆದಿದೆ. ಅವರನ್ನು ಕಂಡಾಗ ದೇವತೆಯೆಂಬ ಭಾವನೆ ಮೂಡುವುದಲ್ಲದೆ, ಅವರ ಕಂಠದಿಂದ ಹೊರಹೊಮ್ಮುವ ಭಕ್ತೀಗಿತೆಗಳು ಮನಸ್ಸಿಗೆ ನೆಮ್ಮದಿ, ಆಹ್ಲಾದತೆ ನೀಡುತ್ತವೆ ಎಂದು ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಇಂದ್ರಾಳಿ ಆಂಗ್ಲ ಮಾಧ್ಯಮ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಶರನ್ನವರಾತ್ರಿ ನಿಮಿತ್ತ ಶನಿವಾರ (ಸೆ.27) ಸಂಜೆ ಆಯೋಜಿಸಿದ್ದ ಗಾನ ಕೋಗಿಲೆ ಖ್ಯಾತಿಯ ಗಾಯಕಿ ವಿದುಷಿ ಸಾಧ್ವಿನಿ ಕೊಪ್ಪ ಅವರ ಸಂಗೀತ ಸುಧಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸುಧಾ ಅಣ್ಣಪ್ಪ ಶೆಣೈ, ಅಕಾಡೆಮಿಕ್ ಕಾರ್ಯದರ್ಶಿ ಪ್ರೊ. ಶ್ರೀಧರ ಪೈ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ ನಾಯಕ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಆತ್ರಾಡಿ ದಿನೇಶ ಹೆಗ್ಡೆ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಟರಾಜ ಪ್ರಭು ಉಪಸ್ಥಿತರಿದ್ದರು.
ಇಂದ್ರಾಳಿ ಪ್ರೌಢಶಾಲೆಯ ಮುಖ್ಯೋಧ್ಯಾಪಕ ಕೆ. ವಿನಾಯಕ ಕಿಣಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಪಕಿ ರೇಷ್ಮಾ ಪ್ರಭು ವಂದಿಸಿದರು. ಶಿಕ್ಷಕಿ ಸಾಧನಾ ಶ್ರೀಶಾಂತ ಕಾರ್ಯಕ್ರಮ ನಿರೂಪಿಸಿದರು.