ಸ್ವಚ್ಛ ಪರಿಸರದ ಸಿಂಗಾಪುರವೆಂಬ ಸ್ವರ್ಗ

Untitled design (1)
Published on
‘ವಿದೇಶ ಪ್ರವಾಸ ಮಾಡಬೇಕೆಂದಿದೆ. ಎಲ್ಲಿಗೆ ಹೋದರೆ ಚೆನ್ನ?’ ಎಂದು ಆತ್ಮೀಯರಲ್ಲಿ ಅಥವಾ ಟ್ರಾವೆಲ್ಸ್ ಏಜೆನ್ಸಿಯವರಲ್ಲಿ ವಿಚಾರಿಸಿದಾಗ ಹೆಚ್ಚಿನವರು ಸೂಚಿಸುವ ರಾಷ್ಟ್ರವೆಂದರೆ ಸಿಂಗಾಪುರ. ಪ್ರವಾಸ ಹೋಗುವವರಲ್ಲೂ ಬೇರೆಲ್ಲ ರಾಷ್ಟ್ರಗಳಿಗಿಂತ ಹೆಚ್ಚು ಸಿಂಗಾಪುರಕ್ಕೆ ಹೋಗಲು ಹಾತೊರೆಯುವವರ ಸಂಖ್ಯೆಯೂ ಬಹಳಷ್ಟಿದೆ. ಜೀವನದಲ್ಲಿ ಸಿಂಗಾಪುರಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು ಎಂದು ಅನೇಕರು ಕನಸು ಕಾಣುತ್ತಾರೆ. ಭೂ ಲೋಕದ ಸ್ವರ್ಗವೆಂದೇ ಕರೆಯುವ ಸಿಂಗಾಪುರವೆಂದರೆ ಪ್ರವಾಸಿಗರಿಗೆ ಅಷ್ಟೊಂದು ಆಕರ್ಷಣೆ.

ಸಿಂಗಾಪುರ ಗಣರಾಜ್ಯ ದೇಶ. ಇದು 63 ಸಣ್ಣ ದ್ವೀಪಗಳನ್ನು ಮತ್ತು ಒಂದು ಮುಖ್ಯ ದ್ವೀಪವನ್ನು ಹೊಂದಿದೆ. ವಿಶ್ವದ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರ ಪ್ರಸ್ತುತ ಪ್ರಥಮ ಸ್ಥಾನ ಪಡೆದಿದೆ. ಇಲ್ಲಿ ಚೀನಾ, ಮಲಾಯ್ ಮತ್ತು ಭಾರತೀಯ ಮೂಲದವರು ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಸಿಂಗಾಪುರ ಹಚ್ಚ ಹಸಿರಿನಿಂದ ಕೂಡಿದ ದೇಶ. ಎತ್ತ ನೋಡಿದರೂ ಹಸಿರು. ಈ ಹಸಿರು ಪ್ರಕೃತಿಯೇ ಪ್ರವಾಸಿಗರನ್ನು ತನ್ನತ್ತ ಕೈಚಾಚಿ ಸೆಳೆಯುತ್ತದೆ. ಅಲ್ಲಿನ ಸಂಸ್ಕೃತಿ, ಐತಿಹಾಸಿಕ, ಪಾರಂಪರಿಕ ಹಾಗೂ ಪ್ರೇಕ್ಷಣೀಯ ತಾಣಗಳು ಮಾತ್ರ ಪ್ರವಾಸಿಗರ ಕಣ್ಮನ ಸೆಳೆಯದೆ ಸಂಪೂರ್ಣ ಪ್ರಕೃತಿಯೇ ಸ್ವರ್ಗಸದೃಶವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಇತ್ತೀಚೆಗೆ ಕುಟುಂಬ ಸಮೇತ ಸಿಂಗಾಪುರಕ್ಕೆ ಪ್ರವಾಸ ಹೋದಾಗ ಈ ವಿಚಾರ ಅನುಭವಕ್ಕೂ ಬಂತು. ತನ್ನ ಸ್ವಚ್ಛತೆ, ಶಿಸ್ತು, ಆಧುನಿಕತೆ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ವೈವಿಧ್ಯ ಮೂಲಕ ಜಗತ್ತಿಗೆ ಸಿಂಗಾಪುರ ಮಾದರಿಯಾಗಿ ನಿಲ್ಲುತ್ತದೆ.

ಸಿಂಗಾಪುರ ಸ್ವಚ್ಛ ಹಾಗೂ ರಮಣೀಯ ನಗರ. ಹುಡುಕಿದರೂ ಎಲ್ಲಿಯೂ ಕಸ ಕಣ್ಣಿಗೆ ಕಾಣದು ಎಂಬ ರೀತಿಯಲ್ಲಿ ನಗರ-ಹಳ್ಳಿ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡಿದ್ದಾರೆ. ಅಲ್ಲಿನ ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆ ಮಾತ್ರವಲ್ಲದೆ ಸಾರ್ವಜನಿಕ ಪ್ರದೇಶಗಳ ಸ್ವಚ್ಛತೆ ಕಾಪಾಡುವಲ್ಲಿ ಕಾಳಜಿ ವಹಿಸುತ್ತಾರೆ ಮತ್ತು ಅದನ್ನು ತಮ್ಮ ಜವಾಬ್ದಾರಿ ಎಂದು ಭಾವಿಸುತ್ತಾರೆ. ಸಿಂಗಾಪುರ ‘ಸ್ವಚ್ಛ ನಗರ’ ಎಂದು ಗುರುತಿಸಿಕೊಳ್ಳುವುದಕ್ಕೊಂದು ಕಾರಣವಿದೆ. ಕಸವನ್ನು ವಿಲೇವಾರಿ ಮಾಡಲು ಮತ್ತು ಮರುಬಳಕೆ ಮಾಡಲು ವ್ಯವಸ್ಥಿತ ಯೋಜನೆಗಳನ್ನು ಅಲ್ಲಿನ ಸರ್ಕಾರವು ಜಾರಿಗೊಳಿಸಿದ್ದು, ಎಲ್ಲ ನಾಗರಿಕರು ತಪ್ಪದೆ ಅಲ್ಲಿನ ಕಾನೂನುಗಳನ್ನು ಪಾಲನೆ ಮಾಡುತ್ತಾರೆ. ಇಲ್ಲಿ ರಸ್ತೆಗಳಲ್ಲಿ ತ್ಯಾಜ್ಯ ಎಸೆದರೆ ಭಾರಿ ದಂಡ ವಿಧಿಸಲಾಗುತ್ತದೆ. ಈ ಶಿಸ್ತು ಮತ್ತು ಕಾನೂನು ಪಾಲನೆಯಿಂದಲೇ ಸಿಂಗಾಪುರವನ್ನು ವಿಶ್ವದ ಅತಿ ಶುದ್ಧ ನಗರಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಸ್ವಚ್ಛತೆ ವಿಷಯಕ್ಕೆ ಬಂದರೆ, ಸಿಂಗಾಪುರದಲ್ಲಿ ಇರುವಷ್ಟು ಶಿಸ್ತು ಬೇರೆಡೆ ನೋಡಲು ಸಾಧ್ಯವಿಲ್ಲವೇನೋ. ಅಲ್ಲಿನ ನಗರದ ಸ್ವಚ್ಛತೆ ನೋಡಿ ಪ್ರವಾಸಿಗರೇ ಬೆರಗಾಗುತ್ತಾರೆ. ಅಲ್ಲಿಗೆ ತೆರಳುವ ಮೊದಲು ಅಲ್ಲಿನ ವಿಚಾರಗಳ ಬಗ್ಗೆ ಜೀವನಶೈಲಿಯ ಬಗ್ಗೆ ಹೆಚ್ಚಿನ ಅರಿವು ಹೊಂದುವ ಸಲುವಾಗಿ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಜಾಲಾಡಿದಾಗ ಸ್ವಾರಸ್ಯ ವಿಚಾರಗಳು ಅರಿವಿಗೆ ಬಂದವು. ಅಲ್ಲಿ ಚೂಯಿಂಗ್​ಗಮ್ ಜಗಿಯುವುದು ಕಾನೂನುಬಾಹಿರವಾಗಿದೆ. ಒಂದು ವೇಳೆ ಚ್ಯೂಯಿಂಗ್​ಗಮ್ ಜಗಿದು ಬೀದಿಗಳಲ್ಲಿ ಉಗುಳಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಎಲ್ಲೆಂದರಲ್ಲಿ ಕಸ ಎಸೆದರೂ ಅದು ಅಲ್ಲಿ ದೊಡ್ಡ ಅಪರಾಧ. ಸಾರ್ವಜನಿಕವಾಗಿ ಧೂಮಪಾನಕ್ಕೆ ಅವಕಾಶವಿಲ್ಲ.

ಸ್ವಚ್ಛತೆ ಜೊತೆಗೆ ಅಲ್ಲಿನ ಜನರ ಪರಿಸರ ಪ್ರೀತಿಯನ್ನು ಮೆಚ್ಚಲೇಬೇಕು. ಪರಿಸರ ಸಂರಕ್ಷಣೆಗೆ ಸಿಂಗಾಪುರ ಖಂಡಿತ ಮಾದರಿ ಹಾಗೂ ಪ್ರೇರಣೆಯಾಗುವಂಥದ್ದು. ಅಲ್ಲಿ ನಾಲ್ಕು ಮಹಡಿ ಕಟ್ಟಡಗಳಲ್ಲಿ ಮಾತ್ರವಲ್ಲದೆ 30-40 ಮಹಡಿ ಕಟ್ಟಡಗಳಲ್ಲೂ ವಿಭಿನ್ನ ಜಾತಿಯ ಮರಗಿಡಗಳನ್ನು ನೆಟ್ಟು ಪೋಷಿಸುತ್ತಾರೆ. ಸಣ್ಣ-ಸಣ್ಣ ಗಿಡಗಳಿಂದ ಹಿಡಿದು ಕೆಲವು ಅಡಿಗಳವರೆಗೆ ಬೆಳೆಯುವ ಮರಗಳನ್ನು ದೊಡ್ಡ ಕಟ್ಟಡಗಳ ಮೇಲೆ ಬೆಳೆಸಿ ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದಾರೆ. ತಮ್ಮ ಮನೆಯ ಎದುರುಗಡೆ ಒಂದಿಷ್ಟು ಜಾಗವಿದ್ದರೆ ಕೃಷಿ ಮಾಡುತ್ತಾರೆ. ಕೈ ತೋಟದ ಮೂಲಕ ಹಣ್ಣು, ತರಕಾರಿಗಳನ್ನು ಬೆಳೆಯುತ್ತಾರೆ. ಕೃಷಿಯಲ್ಲಿ ಆಧುನಿಕತೆ ಮತ್ತು ತಂತ್ರಜ್ಞಾನ ಮಿಳಿತವಾಗಿದೆ. ಎಲ್ಲೆಡೆ ಹಸಿರು ಮರಗಳು, ಸುಂದರ ಉದ್ಯಾನಗಳು ನೋಡುವುದೇ ಕಣ್ಣಿಗೆ ಹಬ್ಬ. ಪಟ್ಟಣ, ನಗರದಲ್ಲಿ ಸಸ್ಯ ಸಂಪತ್ತನ್ನು ಹೆಚ್ಚಿಸಲು, ಉದ್ಯಾನ ಅಭಿವೃದ್ಧಿಪಡಿಸಲು ಸರ್ಕಾರ ಹಾಗೂ ಜನರೂ ತಮ್ಮ ಕೊಡುಗೆ ನೀಡುತ್ತಾರೆ ಮತ್ತು ಪ್ರವಾಸಿಗರಿಗೆ ‘ಸುಂದರ ಸಿಂಗಾಪುರ’ದ ಕಲ್ಪನೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಾರೆ. ಅದು ಅವರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಅಲ್ಲಿನ ಸ್ಥಳೀಯರು ತಿಳಿಸುತ್ತಾರೆ.

ಆಧುನಿಕತೆ ಮತ್ತು ತಂತ್ರಜ್ಞಾನ ಸಿಂಗಾಪುರದ ವೈಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಲ್ಲಿನ ವಿಮಾನ ನಿಲ್ದಾಣವೇ ತಂತ್ರಜ್ಞಾನ ಮತ್ತು ಸೌಂದರ್ಯದ ಸಮನ್ವಯಕ್ಕೆ ಸಾಕ್ಷಿಯಾಗಿದೆ. ಸಿಂಗಾಪುರದ ಚಂಗಿ ವಿಮಾನ ನಿಲ್ದಾಣವನ್ನು ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಅನೇಕ ಬಾರಿ ಪ್ರಶಂಸಿಸಲಾಗಿದೆ. ಗಗನಚುಂಬಿ ಕಟ್ಟಡಗಳು ಅವುಗಳ ವಿನ್ಯಾಸದ ವೈಭವ ಒಂದು ಸೋಜಿಗದಂತೆ ಅನಿಸುತ್ತದೆ. ತಂತ್ರಜ್ಞಾನ ಎನ್ನುವುದು ಪ್ರತಿಯೊಂದು ವಿಚಾರದಲ್ಲೂ ಹಾಸುಹೊಕ್ಕಿದ್ದು ಬದುಕು-ಆಧುನಿಕತೆ-ಕೃಷಿ-ಸ್ವಚ್ಛ ಪರಿಸರದ ಸಮತೋಲನವನ್ನು ಅನುಭವಿಸುವ ತಾಣ ಸಿಂಗಾಪುರ.

ಸಂಸ್ಕೃತಿಯ ವೈವಿಧ್ಯಕ್ಕೆ ಸಿಂಗಾಪುರ ಪ್ರತಿಬಿಂಬವಾಗಿ ನಿಲ್ಲುತ್ತದೆ. ಚೀನಿ, ಮಲಾಯಿ, ಭಾರತೀಯ, ಮತ್ತು ಪಾಶ್ಚಾತ್ಯ ಸಂಸ್ಕೃತಿ ಇಲ್ಲಿ ಕಾಣಬಹುದು. ಅಪೂರ್ವ ತಾಣಗಳ ಜೊತೆಗೆ ಸಾಕಷ್ಟು ಐತಿಹಾಸಿಕ ಪ್ರದೇಶಗಳೂ ಇಲ್ಲಿವೆ. ವಿಶೇಷವೆಂದರೆ ಇಲ್ಲಿ ಆಯಾ ಸಂಸ್ಕೃತಿ ಕಾಣಸಿಗುವ ತಾಣಗಳಿವೆ. ಇಲ್ಲಿ ಸುಂದರವಾದಂತಹ ಅನೇಕ ಮ್ಯೂಸಿಯಂಗಳಿವೆ. ಅವುಗಳಲ್ಲಿ ಒಂದಾದ ಪೆರಾನಕನ್ ಮ್ಯೂಸಿಯಂನಲ್ಲಿ ಎಲ್ಲ ಧರ್ಮಗಳಿಗೂ ಸಂಬಂಧಪಟ್ಟ ವಸ್ತು, ವಿಚಾರ ಇತ್ಯಾದಿಗಳನ್ನು ಕಾಣಬಹುದಾಗಿದೆ. ಸಿಂಗಾಪುರದಲ್ಲಿ ಇಂಥದ್ದೇ ಪ್ರಧಾನ ಧರ್ಮ ಎಂಬುದು ಇಲ್ಲ. ಎಲ್ಲ ಧರ್ಮಗಳ ಜನರು ಇಲ್ಲಿದ್ದಾರೆ. ಅದಕ್ಕನುಗುಣವಾಗಿ ಎಲ್ಲ ಧರ್ವಚರಣೆಗಳನ್ನೂ ಕೈಗೊಳ್ಳುತ್ತಾರೆ. ಬೌದ್ಧ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಉಳಿದಂತೆ ಕ್ರೖೆಸ್ತರು, ಇಸ್ಲಾಂ, ಹಿಂದೂ ಹೀಗೆ ಅನೇಕ ಧರ್ಮದವರಿದ್ದಾರೆ. ಈ ಮ್ಯೂಸಿಯಂನ ವಿಶೇಷವೇನೆಂದರೆ ವಿವಿಧ ಧರ್ಮಗಳಿಗೆ ಸಂಬಂಧಪಟ್ಟ, ಕಲೆ, ಸಂಸ್ಕೃತಿ ಆಚಾರ-ವಿಚಾರ ಇತ್ಯಾದಿ ಸಂಗತಿಗಳೆಲ್ಲ ವಿವಿಧ ಕಾಲಘಟ್ಟದಲ್ಲಿ ಹೇಗೆ ಇತ್ತು, ಈಗ ಹೇಗಿದೆ ಎಂಬುದನ್ನು ಅನಾರವಣಗೊಳಿಸುತ್ತದೆ. ಮುಖ್ಯವಾಗಿ ಆಧುನಿಕ ಉಡುಗೆ-ತೊಡುಗೆ, ಜೀವನಶೈಲಿಯ ಕುರಿತಾಗಿಯೂ ವಿಶೇಷ ಪ್ರದರ್ಶನವಿದೆ.

ಸಿಂಗಾಪುರ ಸುಮಾರು 600 ಕಿ.ಮೀ ನ ಪುಟ್ಟದ್ವೀಪ. ಹಾಗಾಗಿ ಅಭಿವೃದ್ಧಿ ಹಾಗೂ ಸಸ್ಯಸಂಪತ್ತಿನ ಸಂರಕ್ಷಣೆಗೆ ಜಾಗ ಕಮ್ಮಿ. ಕಳೆದ ನೂರು ವರ್ಷಗಳಲ್ಲಿ ಸುಮಾರು 150 ಕಿಲೋಮೀಟರ್​ನಷ್ಟು ಸಮುದ್ರವನ್ನು ಮಣ್ಣು ತುಂಬಿಸಿ ಗಟ್ಟಿ ಭೂಮಿಯನ್ನಾಗಿ ಪರಿವರ್ತಿಸಿ ತಮ್ಮ ನಗರವನ್ನು ವಿಸ್ತರಿಸಿದ್ದಾರೆ. ಇಲ್ಲಿ ಇತ್ತೀಚಿನ ನಿರ್ಮಾಣ ಮರಿನಾ ಬೇ (Marina Bay) ಪ್ರದೇಶದ ಸುಮಾರು ನಲವತ್ತು ಎಕರೆ ಜಾಗದಲ್ಲಿ ವಿಶ್ವವಿಖ್ಯಾತ ಮರಿನಾ ಬೇ ಸ್ಯಾಂಡ್ಸ್ ಹೋಟೆಲ್, ಪಾರ್ಕ್, ಹಾಗೆ ‘ಗಾರ್ಡನ್ಸ್ ಬೈ ದಿ ಬೇ’ ಎನ್ನುವ ವೈವಿಧ್ಯಮಯ ಸಸ್ಯಗಳ ಎರಡು ಬೃಹತ್ ಗಾಜಿನ ಮನೆಗಳನ್ನು ನಿರ್ವಿುಸಿದ್ದಾರೆ.

ಈ ಬೃಹತ್ ಗಾಜಿನ ಗುಮ್ಮಟದೊಳಗೆ ನಾನಾ ವಿಧದ ಸಸ್ಯ, ಮರ-ಗಿಡಗಳನ್ನು ಬೆಳೆಸಿದ್ದಾರೆ. ಹೆಚ್ಚಾಗಿ ಮೆಡಿಟರೇನಿಯನ್ ಪ್ರದೇಶಗಳ ಸಸ್ಯಗಳ ಸಂಗ್ರಹ ಇಲ್ಲಿದ್ದು, ಇವುಗಳ ಜೊತೆಗೆ ಲ್ಯಾವೆಂಡರ್ ಗಿಡಗಳು, ಆಲಿವ್ ತೋಪುಗಳು ಮತ್ತು ದೈತ್ಯ ಮರಗಳೂ ಇಲ್ಲಿವೆ. ಸಿಂಗಾಪುರದ ಈ ಹೂವಿನ ಗುಮ್ಮಟವು 2015ರ ಗಿನ್ನೆಸ್ ಬುಕ್ ಆಫ್ ವಲ್ಡ್ ರ್ ರೆಕಾರ್ಡ್ಸ್​ನಲ್ಲಿ ದಾಖಲಿಸಲ್ಪಟ್ಟಿದೆ.

ಮೂರು ಎಕರೆ ಪ್ರದೇಶದಲ್ಲಿ ವಿವಿಧ ದೇಶಗಳಿಗೆ ಸಂಬಂಧಪಟ್ಟ ಸಸ್ಯ ಸಂಪತ್ತುಗಳನ್ನು ಇಲ್ಲಿ ಕಾಣಬಹುದು. ಅವುಗಳನ್ನು ಎಂಟು ಥೀಮ್ ಪಾರ್ಕ್ ಆಗಿ ಮಾಡಿದ್ದು, ಬಾವೊಬಾಬ್ಸ್, ಸಕ್ಯುಲೆಂಟ್ ಗಾರ್ಡನ್, ಆಸ್ಟ್ರೇಲಿಯನ್ ಗಾರ್ಡನ್, ಸೌತ್ ಆಫ್ರಿಕನ್ ಗಾರ್ಡನ್, ಸೌತ್ ಅಮೆರಿಕನ್ ಗಾರ್ಡನ್, ಆಲಿವ್ ಗ್ರೋವ್, ಕ್ಯಾಲಿಫೋರ್ನಿಯಾ ಗಾರ್ಡನ್ ಮತ್ತು ಮೆಡಿಟರೇನಿಯನ್ ಗಾರ್ಡನ್ ಎಂದು ಹೆಸರಿಸಲಾಗಿದೆ. ಹೂವಿನ ಗುಮ್ಮಟದ ವಿನ್ಯಾಸದ ಜೊತೆಗೆ ಗಿಡಗಳಿಗೆ ಮಾಡಿರುವ ನೀರು, ಬೆಳಕಿನ ವ್ಯವಸ್ಥೆ, ಆಧುನಿಕ ತಂತ್ರಜ್ಞಾನದ ಬಳಕೆ ಇತ್ಯಾದಿಗಳನ್ನೆಲ್ಲವನ್ನು ಗಮನಿಸಬಹುದಾಗಿದೆ. ಇಡೀ ಪ್ರದೇಶ ಗಾಜಿನಿಂದ ಆವೃತವಾಗಿದ್ದರೂ ಅಲ್ಲಿನ ತಾಪಮಾನ 23-25 ಡಿಗ್ರಿ ಸೆಲ್ರಿಯಸ್​ಯುಷ್ಟಿರುವುದು ವಿಶೇಷವೇ ಸರಿ.

ಇನ್ನು ಭಾರತೀಯ ಸಂಸ್ಕೃತಿ ಕಾಣಸಿಗುವ ಸಿಂಗಾಪುರದ ಲಿಟಲ್ ಇಂಡಿಯಾ ಪ್ರದೇಶದ ಬಗ್ಗೆ ಹೇಳಲೇಬೇಕು. ಈ ಪ್ರದೇಶಕ್ಕೆ ಭೇಟಿ ನೀಡಿದಾಗ ಭಾರತದಲ್ಲೇ ಇದ್ದೇವೆ ಎಂಬಂತೆ ಭಾಸವಾಗುತ್ತದೆ. ಇಲ್ಲಿ ನೆಲೆಸಿರುವ ಬಹುಪಾಲು ಜನರು ಭಾರತೀಯ ಮೂಲದವರಾಗಿದ್ದು ಭಾರತದ ಸಂಸ್ಕೃತಿ-ಸಂಪ್ರದಾಯ, ಆಚಾರ-ವಿಚಾರಗಳನ್ನು ಹಾಗೂ ಧಾರ್ವಿುಕ ನಂಬಿಕೆ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಇಲ್ಲಿ ಸಾಕಷ್ಟು ಅಪೂರ್ವ ದೇವಸ್ಥಾನಗಳಿದ್ದು ಈ ಪ್ರದೇಶ ‘ಲಿಟಲ್ ಇಂಡಿಯಾ’ ಎಂದೇ ಪ್ರಖ್ಯಾತಿ ಪಡೆದಿದೆ. ಚೀನೀ ಸಂಸ್ಕೃತಿಯನ್ನು ಹೋಲುವ ಪ್ರದೇಶವಿದ್ದು ‘ಚೀನಾ ಟೌನ್’ ಎಂದೇ ಪ್ರಖ್ಯಾತಿ ಪಡೆದಿದೆ. ಚೀನಾದ ಸಂಸ್ಕೃತಿಯನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ‘ಚೀನಾ ಟೌನ್’ ಚೀನಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಉಳಿಸಿಕೊಂಡಿದೆ. ಕಂಪಾಂಗ್ ಗ್ಲಾಮ್ ಎಂಬ ಪ್ರದೇಶವಿದ್ದು ಮುಸ್ಲಿಂ ಸಮುದಾಯವರು ಮತ್ತು ಅರಬ್​ನ ಜನರು ಇಲ್ಲಿ ವಾಸಿಸುತ್ತಿದ್ದು ಮಧ್ಯಪ್ರಾಚ್ಯದ ಸಂಸ್ಕೃತಿಯನ್ನು ಪರಿಚಯಿಸುತ್ತದೆ. ಹೀಗೆ ವಿವಿಧ ಸಂಸ್ಕೃತಿಗಳನ್ನು ಪರಿಚಯಿಸುವ ಪ್ರದೇಶಗಳನ್ನು ನಾವು ಸಿಂಗಾಪುರದಲ್ಲಿ ಕಾಣಬಹುದಾಗಿದೆ.

ಇನ್ನು ಮುಖ್ಯವಾಗಿ ಭದ್ರತೆ ಹಾಗೂ ಸುರಕ್ಷತೆಯ ವಿಚಾರದ ದೃಷ್ಟಿಯಿಂದ ಜನರು ಇಲ್ಲಿಗೆ ಪ್ರವಾಸ ಹೋಗಲು ಇಷ್ಟಪಡುತ್ತಾರೆ. ಪ್ರವಾಸಿಗರಿಗೆ ಇದು ಸುರಕ್ಷಿತ ತಾಣ ಎಂಬ ಭಾವನೆ ಇದೆ. ಸಿಂಗಾಪುರವು ವಿಶ್ವದ ಅತ್ಯಂತ ಸುರಕ್ಷಿತ ನಗರಗಳಲ್ಲಿ ಒಂದು. ಇಲ್ಲಿ ರಾತ್ರಿ ವೇಳೆ ಕೂಡ ಮಹಿಳೆಯರು ಒಂಟಿಯಾಗಿ ಸುರಕ್ಷಿತವಾಗಿ ಓಡಾಡಬಹುದಾದ ಪರಿಸರವಿದೆ. ಏನನ್ನಾದರೂ ವಸ್ತುವನ್ನು ಮರೆತು ಎಲ್ಲೋ ಸಾರ್ವಜನಿಕ ಪ್ರದೇಶದಲ್ಲಿ ಬಿಟ್ಟು ಮನೆಗೆ ಹೋದರೂ ಕಳವಾಗುತ್ತದೆ ಎಂಬ ಭಯ ಅಲ್ಲಿನ ಜನರಿಗೆ ಕಾಡದಷ್ಟು ಸುರಕ್ಷಿತವಾಗಿದೆ. ಅಲ್ಲಿನ ಪತ್ರಿಕೆಗಳಲ್ಲಿ ಅಪರಾಧ ಸುದ್ದಿಗಳು ಕಾಣಸಿಗುವುದೇ ಅಪರೂಪವಂತೆ.

ಸಿಂಗಾಪುರದ ಸಿವಿಕ್ ಡಿಸ್ಟ್ರಿಕ್ಟ್ ಎಂಬ ನಗರದಲ್ಲಿ ಹಳೆಯ ಬ್ರಿಟಿಷ್ ಕಟ್ಟಡಗಳನ್ನು ನೋಡಬಹುದಾಗಿದೆ. ಪ್ರಾಚೀನ ವಾಸ್ತುಶೈಲಿ ಹಾಗೂ ವಿನ್ಯಾಸ ಆಕರ್ಷಕವಾಗಿದ್ದು ಬೆರಗು ಮೂಡಿಸುತ್ತದೆ. ಇನ್ನು ಐತಿಹಾಸಿಕ ಕಟ್ಟಡಗಳೊಂದಿಗೆ ವಸ್ತುಸಂಗ್ರಹಾಲಯಗಳಾದ ದಿ ಆಟ್ಸ್ ಹೌಸ್, ನ್ಯಾಷನಲ್ ಗ್ಯಾಲರಿ ಸಿಂಗಾಪುರ, ನ್ಯಾಷನಲ್ ಮ್ಯೂಸಿಯಂ ಆಫ್ ಸಿಂಗಾಪುರ ಅಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಬಣ್ಣಿಸಿ ಪ್ರವಾಸಿಗರನ್ನು ಮನಸೂರೆಗೊಳಿಸುತ್ತದೆ. ಪ್ರತಿಯೊಬ್ಬರ ಪಾಲಿಗೂ ಸಿಂಗಾಪುರ ಒಂದು ಕನಸಿನ ನಗರಿ. ಅದು ಕೇವಲ ಮನರಂಜನೆಯ ತಾಣವಲ್ಲ. ಬದಲಾಗಿ ಶಿಸ್ತು, ಪ್ರಗತಿ, ಸಂಸ್ಕೃತಿ ಸೌಂದರ್ಯದ ಪ್ರತೀಕ. ಅಲ್ಲಿನ ಶಿಸ್ತು ಜೀವನಶೈಲಿಯ ಮಾದರಿಯೂ ಹೌದು. ಸಿಂಗಾಪುರಕ್ಕೆ ಭೇಟಿ ನೀಡುವುದು ಒಂದು ಜೀವನಾನುಭವ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net