

ಸಿಂಧನೂರು: ಇಲ್ಲಿನ ಬಸವನಗರದ 14ನೇ ವಾರ್ಡ್‌ನಲ್ಲಿ ಸಮರ್ಪಕ ಚರಂಡಿ ತ್ಯಾಜ್ಯ ತೆರವು ಮಾಡದ ಕಾರಣ ದುರ್ನಾತ ಬೀರುತ್ತಿದ್ದು, ಇದರಿಂದ ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಬ್ಲೀಚಿಂಗ್ ಪೌಡರ್ ಸಿಂಪಡಿಸದೆ, ಫಾಗಿಂಗ್ ಮಾಡದಿರುವುದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಮನೆಗಳ ಬಾಗಿಲು ಸದಾ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ವಠಾರದಲ್ಲಿರುವ ಚರಂಡಿಗಳು ಹಲವು ತಿಂಗಳಿಂದ ಸ್ವಚ್ಛತೆ ಭಾಗ್ಯ ಕಂಡಿಲ್ಲ.
ತ್ಯಾಜ್ಯ, ಕಲುಷಿತ ನೀರು ಒಂದೆಡೆ ನಿಂತು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಿದೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ನಿರ್ಲಕ್ಷೃ ಮಾಡಲಾಗುತ್ತಿದೆ. ಕೂಡಲೇ ಚರಂಡಿ ಸ್ವಚ್ಛತೆಗೆ ಮುಂದಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಸ್ತೆ ಮಧ್ಯೆ ಟಿಸಿ: ಬಸವ ನಗರದ ಜನವಸತಿ ಪ್ರದೇಶದಲ್ಲಿರುವ ವಿದ್ಯುತ್ ಪರಿವರ್ತಕ ಅಪಾಯ ತಂದೊಡ್ಡುವಂತಿದೆ. ಸೂಕ್ತ ರಕ್ಷಣೆ ಒದಗಿಸಿಲ್ಲ. ಅಲ್ಲದೆ ರಸ್ತೆ ಮಧ್ಯದಲ್ಲಿಯೇ ಟಿಸಿ ಇದ್ದು, ಸಂಚರಿಸುವ ಜನರಿಗೆ ಅಪಾಯದ ಭಯ ಕಾಡುತ್ತಿದೆ. ಕೂಡಲೇ ವಿದ್ಯುತ್ ಪರಿವರ್ತಕದ ಸುತ್ತಲೂ ರಕ್ಷಾಕವಚ ನಿರ್ಮಾಣ ಮಾಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
=====
ಸಿಂಧನೂರಿನಲ್ಲಿ ಚರಂಡಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದು, ವಾರ್ಡ್‌ಗಳು ದೊಡ್ಡದಾಗಿರುವುದರಿಂದ ಎಲ್ಲ ಕಡೆಗೂ ಪೌರ ಕಾರ್ಮಿಕರು ಹೋಗಬೇಕು. ಇದರಿಂದ ಕೆಲವೆಡೆ ಸ್ವಚ್ಛತೆ ಕಾರ್ಯ ವಿಳಂಬವಾಗುತ್ತಿದ್ದು, ಕ್ರಮಕೈಗೊಳ್ಳಲಾಗುವುದು.
> ಕೆ.ಶ್ರುತಿ, ಪ್ರಭಾರ ಪೌರಾಯುಕ್ತೆ, ನಗರಸಭೆ, ಸಿಂಧನೂರು