

ಅನ್ಸಾರ್ ಇನೋಳಿ ಉಳ್ಳಾಲ
ಸಮುದ್ರ ಮತ್ತು ನದಿಗಳ ಸಂಗಮ ಸ್ಥಾನ ಉಳ್ಳಾಲದ ಅಳಿವೆಬಾಗಿಲಿನಲ್ಲಿ ಹೂಳು ತುಂಬಿದೆ. ಒಂದೆಡೆ ಸಾಗರ್ ಮಾಲಾ ಯೋಜನೆ ಕನಸಾಗಿ ಉಳಿದರೆ, ಮತ್ತೊಂದೆಡೆ ತಾತ್ಕಾಲಿಕ ನೆಲೆಯಲ್ಲಿ ಡ್ರೆಜ್ಜಿಂಗ್‌ಗೆ ಯಾರೊಬ್ಬರೂ ಟೆಂಡರ್ ಹಾಕಿಲ್ಲ. ಇವೆಲ್ಲದರ ಪರಿಣಾಮ ನಾಡದೋಣಿ ಮೀನುಗಾರರ ಬದುಕೇ ಹೋಳಾಗಿದೆ.
ಮಂಗಳೂರಿನಲ್ಲಿ 1800 ನಾಡದೋಣಿಗಳಿದ್ದು ಮೀನುಗಾರಿಕೆ ನಂಬಿಕೊಂಡು ಕುಟುಂಬಗಳು ಜೀವನ ಸಾಗಿಸುತ್ತಿವೆ. ಮೂರು ವರ್ಷಗಳ ಹಿಂದೆ ಲೈಟ್ ಫಿಶ್ಶಿಂಗ್ ಮತ್ತು ಬುಲ್ ಟ್ರಾಲ್ ಫಿಶ್ಶಿಂಗ್ ಹಾವಳಿಯಿಂದಾಗಿ ನಾಡದೋಣಿ ಮೀನುಗಾರರು ಕಂಗಾಲಾಗಿದ್ದರು. ಇದೊಂದು ಅವೈಜ್ಞಾನಿಕ ಮೀನುಗಾರಿಕೆ ಎಂದು ನ್ಯಾಯಾಲಯ ತೀರ್ಪು ನೀಡಿದ್ದರಿಂದ ಲೈಟ್ ಫಿಶ್ಶಿಂಗ್‌ಗೆ ಕಡಿವಾಣ ಬಿದ್ದಿತ್ತು. ಈ ಹೊಡೆತದಿಂದ ನಾಡದೋಣಿ ಮೀನುಗಾರರು ಚೇತರಿಸಿಕೊಳ್ಳುತ್ತಿದ್ದಾಗಲೇ ಅಳಿವೆ ಬಾಗಿಲಿನಲ್ಲಿ ಸಮಸ್ಯೆ ಎದುರಾಗಿದೆ.
ಪಲ್ಟಿ ಹೊಡೆಯುವ ನಾಡದೋಣಿಗಳು!
ನಸುಕಿನಲ್ಲೇ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸಿ ಸಿಕ್ಕ ಮೀನುಗಳೊಂದಿಗೆ ಏಳರಿಂದ ಎಂಟು ಗಂಟೆ ಹೊತ್ತಿಗೆ ತಟಕ್ಕೆ ಬಂದು ಮಾರಾಟ ಮಾಡುವುದು ನಾಡದೋಣಿ ಮೀನುಗಾರರ ದೈನಂದಿನ ಕಾಯಕ. ಸಮುದ್ರದಲ್ಲಿ ಏರಿಳಿತ ಇದ್ದಾಗ ಹಾಗೂ ಮಳೆಗಾಲದಲ್ಲಿ ಮೀನುಗಾರಿಕೆ ಅತ್ಯಂತ ಅಪಾಯಕಾರಿ ಆಗಿರುವುದರಿಂದ ದೋಣಿಗಳು ನದಿತೀರದಲ್ಲೇ ಲಂಗರು ಹಾಕಲಾಗುತ್ತದೆ. ಪ್ರತಿದಿನ ಮೀನು ಸಿಗುತ್ತದೆ ಎನ್ನುವಂತೆಯೂ ಇಲ್ಲ. ಕಷ್ಟಕರ ಜೀವನ ಸಾಗಿಸುವ ಮೀನುಗಾರರು ಅಳಿವೆ ಬಾಗಿಲಿನಲ್ಲಿ ಹೂಳಿನ ಸಮಸ್ಯೆಯಿಂದ ತತ್ತರಿಸಿ ಹೋಗಿದ್ದಾರೆ.
ನದಿಯಿಂದ ಸಮುದ್ರ ಸೇರಲು ಅಳಿವೆ ಬಾಗಿಲು ರಹದಾರಿ. ಆದರೆ ಇಲ್ಲಿ ಹೂಳು ತುಂಬಿ ನೀರಿಲ್ಲದ ಕಾರಣ ನಾಡದೋಣಿಗಳ ಅಡಿಭಾಗ ತಾಗಿ ಮಗುಚಿ ಬಿದ್ದು ಮೀನುಗಾರರು ಸಮುದ್ರ ಪಾಲಾಗುವ ಅಪಾಯ ಇದೆ. ಕಳೆದ ವಾರವೂ ಎರಡು ನಾಡದೋಣಿಗಳು ಮಗುಚಿಬಿದ್ದಿದ್ದು ಮೀನುಗಾರರು ಪ್ರಾಣಪಾಯದಿಂದ ಪಾರಾಗಿದ್ದರು.
ಟೆಂಡರ್ ಪಡೆಯುವವರೇ ಇಲ್ಲ!
ಹೂಳೆತ್ತುವಂತೆ ಮೀನುಗಾರರು ಅಧಿಕಾರಿಗಳು, ಜನಪ್ರತಿನಿಧಿಗಳ ಕಚೇರಿ ಬಾಗಿಲಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಸಾಗರ್ ಮಾಲಾ ಯೋಜನೆಯಡಿ ಹೂಳೆತ್ತಲು 29 ಕೋಟಿ ರೂ. ಮೀಸಲಿಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾ ಬಂದರೂ ಯೋಜನೆ ಕಾರ್ಯಗತ ಕನಸಾಗಿಯೇ ಉಳಿದಿದೆ. ಇದು ದೊಡ್ಡಮಟ್ಟದ ಯೋಜನೆಯಾಗಿದ್ದು ಬೃಹತ್ ಯಂತ್ರಗಳ ಅಗತ್ಯವಿದ್ದು ಸದ್ಯಕ್ಕೆ ಕಾರ್ಯಗತಗೊಳ್ಳುವುದು ನಿರೀಕ್ಷಿಸುವಂತಿಲ್ಲ.
ಈ ಹಿನ್ನೆಲೆಯಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆ 2 ಕೋಟಿ ರೂ. ಅನುದಾನದಲ್ಲಿ ಹೂಳೆತ್ತಲು ಮುಂದಾಗಿದ್ದರೂ ಟೆಂಡರ್ ಹಾಕಲು ಯಾರೂ ಬಂದಿಲ್ಲ. ಈ ಬಾರಿಯಾದರೂ ಟೆಂಡರ್ ಹಾಕಲು ಗುತ್ತಿಗೆದಾರರು ಮುಂದಾದರೆ ಅಕ್ಟೋಬರ್ ತಿಂಗಳಲ್ಲಿ ಕೆಲಸ ಆರಂಭಿಸಲು ಇಲಾಖೆ ಯೋಚಿಸಿದೆ. ಆದರೆ ಆಗಸ್ಟ್ ಅಂತ್ಯಕ್ಕೆ ಮೀನುಗಾರಿಕೆ ಆರಂಭಗೊಳ್ಳುವುದರಿಂದ ಮೀನುಗಾರರು ನಿರಾಶರಾಗಿದ್ದಾರೆ. ಅಲ್ಲದೆ ಎರಡು ಕೋಟಿ ರೂ.ನ ಕೆಲಸ ಯಾವುದಕ್ಕೂ ಸಾಲದು ಎನ್ನುವುದು ನಾಡದೋಣಿ ಮೀನುಗಾರರ ವಾದ.
ಲಕ್ಷದ್ವೀಪ ಹಡಗುಗಳಿಗೂ ರಹದಾರಿ
ಲಕ್ಷದ್ವೀಪದ ಹಡಗುಗಳಿಗೂ ಅಳಿವೆಬಾಗಿಲು ರಹದಾರಿಯಾಗಿದೆ. ಮಂಗಳೂರು ಹಳೇಬಂದರ್‌ನಿಂದ ಎರಡು ಕಿ.ಮೀ. ಅಂತರದಲ್ಲಿರುವ ಅಳಿವೆಬಾಗಿಲು ದಾಟಿಯೇ ಲಕ್ಷದ್ವೀಪಕ್ಕೆ ಸಾಗಬೇಕು. ಲಕ್ಷದ್ವೀಪಕ್ಕೆ ಮಂಗಳೂರಿನಿಂದಲೇ ಸಿಮೆಂಟ್, ಜಲ್ಲಿ, ಎಂಸೀಲ್, ಕಲ್ಲು, ಕಬ್ಬಿಣ, ದಿನಸಿ, ತರಕಾರಿ ಸಹಿತ ಎಲ್ಲ ವಸ್ತುಗಳು ಸಾಗಾಟ ಮಾಡಲಾಗುತ್ತದೆ. ಲಕ್ಷದ್ವೀಪಕ್ಕೆ ಸಾಗುವ ಮುನ್ನ ಎರ್ನಾಕುಲಂ, ಕೊಚ್ಚಿ, ಬೇಪೂರು, ಕೋಝಿಕ್ಕೋಡ್ ಬಂದರ್ ಸಿಗುತ್ತದೆ. ಈ ನಾಲ್ಕು ಬಂದರ್‌ಗಳು ಸುರಕ್ಷಿತವಾಗಿದ್ದರೂ ಮಂಗಳೂರು ಬಂದರ್ ಮಾತ್ರ ಅತ್ಯಂತ ಅಪಾಯಕಾರಿ ಎನ್ನುವುದು ತಜ್ಞರ ಅಭಿಪ್ರಾಯ.
ಬ್ರೇಕ್ ವಾಟರ್‌ನಿಂದ ಸಾಧ್ಯ ಪರಿಹಾರ
ಅಳಿವೆಬಾಗಿಲಿನಲ್ಲಿ ಹೂಳಿನ ಕಾರಣದಿಂದ ಹಡಗಿನ ಅಡಿಭಾಗ ನೆಲಕ್ಕೆ ತಾಗಿ ಹಾನಿಯಾಗುತ್ತದೆ. ಇದರಿಂದಾಗಿ ಲಕ್ಷದ್ವೀಪದ ಹಡಗುಗಳು ಮಂಗಳೂರಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ಅಳಿವೆಬಾಗಿಲು ಬಳಿಯಿರುವ ಬ್ರೇಕ್ ವಾಟರ್ ಮುಂದಕ್ಕೆ ಕೊಂಡೊಯ್ದರೆ ಸಮುದ್ರದ ರಭಸಕ್ಕೆ ಮಣ್ಣು ಹೋಗಿ ನೀರು ಹೆಚ್ಚಾಗುತ್ತದೆ. ಕೊಚ್ಚಿ ಮತ್ತು ಬೇಪೂರ್‌ನಲ್ಲಿ ಇದೇ ತಂತ್ರ ಅಳವಡಿಸಲಾಗಿದೆ ಎನ್ನುವುದು ಅನುಭವಿಗಳ ವಾದ. ರಸ್ತೆಯಲ್ಲಿ ಹೊಂಡ ಬಿದ್ದರೆ ಸಂಬಂಧಪಟ್ಟ ಇಲಾಖೆಗಳು ದುರಸ್ತಿಪಡಿಸುತ್ತವೆ. ಜನ ಮಾತ್ರವಲ್ಲದೆ ಜನಪ್ರತಿನಿಧಿಗಳೂ ಪ್ರಶ್ನಿಸುತ್ತಾರೆ. ಆದರೆ ನಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲ ಎನ್ನುವ ಬೇಸರ ಮೀನುಗಾರರದ್ದು.
ಸಾಗರ್ ಮಾಲಾ ಯೋಜನೆಯಡಿ ಅಳಿವೆ ಬಾಗಿಲಿನಲ್ಲಿ ಹೂಳೆತ್ತಲು 29 ಕೋಟಿ ರೂ. ಅನುದಾನದ ಪ್ರಸ್ತಾಪ ಇದ್ದರೂ ಕಾರ್ಯಗತಗೊಳ್ಳಲು ಸಮಯ ಬೇಕಾಗಿದೆ. ಅದಕ್ಕಿಂತ ಮೊದಲು ಎರಡು ಕೋಟಿ ರೂ.ನಲ್ಲಿ ಡ್ರೆಜ್ಜಿಂಗ್ ನಡೆಯಲಿದ್ದು ಟೆಂಡರ್ ಆದರೆ ಅಕ್ಟೋಬರ್ ನಲ್ಲಿ ಕೆಲಸ ಆರಂಭಿಸಲಾಗುವುದು. ಮನೋಹರ್ ಆಚಾರ್ಯ ಬಂದರು ಮತ್ತು ಮೀನುಗಾರಿಕಾ ಇಲಾಖೆ ಸಹಾಯಕ ಅಭಿಯಂತ ಮಂಗಳೂರು ಜೆಟ್ಟಿ ಅತ್ಯಂತ ಅಪಾಯಕಾರಿ ಎನಿಸಿದ್ದು ಇದರಿಂದಾಗಿ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೋಗುವ ಹಡಗುಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿವೆ. ಅಳಿವೆಬಾಗಿಲಿನಲ್ಲಿ ಅಳವಡಿಸಿರುವ ಬ್ರೇಕ್ ವಾಟರ್ ಬೇಪೂರು ಮತ್ತು ಕೊಚ್ಚಿ ಮಾದರಿಯಲ್ಲಿ ಮುಂದಕ್ಕೆ ಕೊಂಡೊಯ್ದರೂ ಸಮಸ್ಯೆ ಬಗೆಹರಿಸಬಹುದು. ಯು.ಕೆ.ಇಸ್ಮಾಯಿಲ್ ಉಳ್ಳಾಲ, ಪೈಲಟ್ ಎರಡು ಕೋಟಿ ರೂ.ನಲ್ಲಿ ಡ್ರೆಜ್ಜಿಂಗ್ ನಡೆಸಿದರೆ ಸರ್ಕಾರಕ್ಕೆ ನಷ್ಟವೇ ಹೊರತು ಮೀನುಗಾರರಿಗೆ ಯಾವುದೇ ಪ್ರಯೋಜನವಿಲ್ಲ. ಬೋಟುಗಳಿಗೆ ಸ್ಟೀಲ್ ಬಳಸುವುದರಿಂದ ರಭಸದಿಂದ ಮುಂದಕ್ಕೆ ಹೋದರೆ ತೊಂದರೆಯಿಲ್ಲ. ಆದರೆ ನಾಡದೋಣಿಗಳು ಸಣ್ಣದಿರುವ ಕಾರಣ ಅಡಿಭಾಗ ನೆಲಕ್ಕೆ ತಾಗಿ ಮಗುಚಿ ಬೀಳುತ್ತವೆ. ಈ ಬಾರಿ ಇದರ ಪರಿಣಾಮದಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗದೆ ಹಲವು ಕುಟುಂಬಗಳು ಸಂಕಷ್ಟದಲ್ಲಿವೆ. ಹನೀಫ್ ಸೋಲಾರ್ ಅಧ್ಯಕ್ಷ, ಉಳ್ಳಾಲ ವಲಯ ನಾಡದೋಣಿ ಮೀನುಗಾರರ ಸಂಘ https://www.vijayavani.net/road-problem-44 https://www.vijayavani.net/kesarugadde-kridkoota