

ಬೆಂಗಳೂರು: ನಿನ್ನೆಯಿಂದ ಮಾಧ್ಯಮದಲ್ಲಿ ರೌಡಿ ಸೈಲೆಂಟ್ ಸುನೀಲ (Silent sunila) ನ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಮೊನ್ನೆ (ನ.27) ಸೈಲೆಂಟ್ ಸುನೀಲ್ ನೇತೃತ್ವದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಬಿಜೆಪಿ ನಾಯಕರು ಪಾಲ್ಗೊಂಡ ಬಳಿಕ ಸುನೀಲ ಬಿಜೆಪಿ (BJP) ಸೇರುತ್ತಾನೆ ಮತ್ತು ಚಾಮರಾಜಪೇಟೆ (Chamarajapet) ಕ್ಷೇತ್ರದಿಂದ ಸ್ಪರ್ಧಿಸುತ್ತಾನೆ ಎಂಬ ವಿಚಾರ ಹರಿದಾಡುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಅಲ್ಲದೆ, ಬಿಜೆಪಿ ವಿರುದ್ಧ ಸಾಕಷ್ಟು ಟೀಕೆಗಳು ಸಹ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಪತ್ರಿಕಾ ಪ್ರಕಟಣೆ ಹೊರಡಿಸಿ, ಸ್ಪಷ್ಟನೆ ನೀಡಿದ್ದಾರೆ.
ಸಾಕಷ್ಟು ಟೀಕೆಗಳು ವ್ಯಕ್ತವಾದರೂ ಇಷ್ಟು ದಿನ ಸೈಲೆಂಟ್ ಆಗಿದ್ದ ಬಿಜೆಪಿ ತಡವಾಗಿ ಎಚ್ಚೆತ್ತುಕೊಂಡು, ಡ್ಯಾಮೇಜ್ ಕಂಟ್ರೋಲ್ಗೆ ದೌಡಾಯಿಸಿದೆ. ಅಷ್ಟೇ ಅಲ್ಲ, ಸೈಲೆಂಟ್ ಸುನಿಲ್ ಜತೆಗೆ ವೇದಿಕೆಯಲ್ಲಿದ್ದ ನಾಯಕರಿಗೆ ಶಾಕ್ ನೀಡಿದೆ. ಯಾವುದೇ ಕಾರಣಕ್ಕೂ ಸೈಲೆಂಟ್ ಸುನಿಲ್ ಪಕ್ಷ ಸೇರ್ಪಡೆಗೆ ಅವಕಾಶವಿಲ್ಲ. ಉಗ್ರಗಾಮಿಗಳು, ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲಿಸುವವರು ಹಾಗೂ ಅಪರಾಧ ಹಿನ್ನೆಲೆಯವರಿಗೆ ಪಕ್ಷಕ್ಕೆ ನೋ ಎಂಟ್ರಿ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾರಿದ್ದಾರೆ.
ವಿವರಣೆಗೆ ಫರ್ಮಾನು
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಂದ ವಿವರಣೆ ನೀಡುವಂತೆ ಫರ್ಮಾನು ಹೊರಡಿಸಲು ಪಕ್ಷದ ರಾಜ್ಯಾಧ್ಯಕ್ಷ ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಆಗದಂತೆ ಎಚ್ಚರಿಕೆವಹಿಸಲು ತಾಕೀತು ಮಾಡಿದ್ದಾರೆ. ಏನೇ ಇದ್ದರೂ ಪಕ್ಷದ ಗಮನಕ್ಕೆ ತರಬೇಕೆಂದೂ ಸೂಚಿಸಿದ್ದಾರೆ.
ಈ ಮಧ್ಯೆ ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸುವ ವೇಳೆ ಕಾಂಗ್ರೆಸ್ನಲ್ಲಿ ಎಷ್ಟು ರೌಡಿಶೀಟರ್ಗಳಿದ್ದಾರೆ ಲೆಕ್ಕ ಹಾಕಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಚಾಮರಾಜಪೇಟೆಯಲ್ಲಿ ಮೂರು ದಿನಗಳ ಹಿಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೈಲೆಂಟ್ ಸುನಿಲ್ ಜತೆಗೆ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಬಿಜೆಪಿ ದಕ್ಷಿಣ ಜಿಲ್ಲಾ ಘಟಕದ ಮುಖಂಡರು ಪಾಲ್ಗೊಂಡಿದ್ದರು.