150 ಬೆಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಶ್ರೀನಿವಾಸ ಹೆಲ್ತ್‌ಕೇರ್ ಪೋರ್ಟ್ ಹಾಸ್ಪಿಟಲ್‌ ಪ್ರೈವೇಟ್ ಲಿಮಿಟೆಡ್ - ಎನ್‌ಎಂಪಿಎ ಒಪ್ಪಂದಕ್ಕೆ ಸಹಿ

mng-june7-shrinivas3
Published on

ಮಂಗಳೂರು: ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್ ಮತ್ತು ನವಮಂಗಳೂರು ಬಂದರು ಪ್ರಾಧಿಕಾರ ನಡುವೆ 150 ಬೆಡ್‌ಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಹಾಗೂ ನಿರ್ವಹಣೆ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಲಾಯಿತು.


ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ.ಎ.ಶ್ರೀನಿವಾಸ್ ರಾವ್ ಮತ್ತು ಎನ್‌ಎಂಪಿಎ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸುರೇಖಾ ಎನ್.ಹೊಸ್ಕೇರಿ ಒಪ್ಪಂದಕ್ಕೆ ಸಹಿ ಹಾಕಿದರು.


ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ.ವೆಂಕಟ ರಮಣ ಅಕ್ಕರಾಜು ಮುಖ್ಯ ಅತಿಥಿಯಾಗಿದ್ದರು. ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್‌ಗೆ ಕೇಂದ್ರ ಸರ್ಕಾರದ ಸ್ವಾಮ್ಯದ ನವ ಮಂಗಳೂರು ಬಂದರು ಅಥಾರಿಟಿ ನಡೆಸುತ್ತಿರುವ ಅಸ್ತಿತ್ವದಲ್ಲಿರುವ 32 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ವಹಿಸಲು ಮತ್ತು ಬಂದರಿನ ಭೂಮಿಯಲ್ಲಿ 150 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಟೆಂಡರ್ ನೀಡಲಾಗಿದೆ. ಈ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಲಿದೆ ಎಂದರು.


ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸಿಎ. ಎ. ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಶೀಘ್ರದಲ್ಲೇ ಆಸ್ಪತ್ರೆ ನಿರ್ಮಾಣವಾಗಿ ಗುಣಮಟ್ಟದ ಚಿಕಿತ್ಸೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಉದ್ದೇಶ. ಗುಣಮಟ್ಟಕ್ಕೆ ಧಕ್ಕೆಯಾಗದಂತೆ 24/7 ಸೇವೆಯನ್ನು ನೀಡಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಅತಿಥಿಯಾಗಿದ್ದರು. ಎನ್‌ಎಂಪಿಎ ಆವರಣದಲ್ಲಿ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ನೀಡುವ ಆಸ್ಪತ್ರೆ ಶೀಘ್ರ ನಿರ್ಮಾಣವಾಗಲಿ ಎಂದು ಹಾರೈಸಿದರು.


ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ.ಎ.ಶ್ರೀನಿವಾಸ್ ರಾವ್ ಮಾತನಾಡಿ, ಎನ್‌ಎಂಪಿಎ ಜೊತೆ ಒಡಂಬಡಿಕೆ ನಮಗೆ ಸಂತೋಷವಾಗಿದೆ. ಕೋವಿಡ್ ಪ್ರಭಾವದ ನಂತರ, ಪ್ರತಿಯೊಬ್ಬರೂ ಆರೋಗ್ಯದ ಮಹತ್ವವನ್ನು ಅರಿತಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿನ ಸೌಲಭ್ಯಗಳನ್ನು ಹೆಚ್ಚಿಸುವ ಮೂಲಕ ಸಮಾಜ ಸೇವೆ ಮುಂದುವರಿಸುತ್ತೇವೆ ಎಂದರು.


ಎನ್‌ಎಂಪಿಎ ಹಣಕಾಸು ಸಲಹೆಗಾರ ಮತ್ತು ಮುಖ್ಯ ಖಾತೆ ಅಧಿಕಾರಿ ವಿನಾಯಕ್ ರಾವ್ ಬಿ.ಎಸ್. ಶುಭ ಹಾರೈಸಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರಾದ ಎ.ವಿಜಯಲಕ್ಷ್ಮೀ ಆರ್.ರಾವ್ ಮತ್ತು ಪ್ರೊ.ಎ.ಮಿತ್ರಾ ಎಸ್.ರಾವ್, ಮೇಘನಾ ಎಸ್.ರಾವ್, ಸಮನಾ ಎಸ್.ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ಶ್ರೀನಿವಾಸ್ ಮಯ್ಯ ಡಿ. ಹಾಗೂ ಎಲ್ಲಾ ಡೀನ್‌ಗಳು ಉಪಸ್ಥಿತರಿದ್ದರು.


ಶ್ರೀನಿವಾಸ ವಿಶ್ವವಿದ್ಯಾಲಯದ ಅಭಿವೃದ್ಧಿ ಕುಲಸಚಿವ ಡಾ.ಅಜಯ್ ಕುಮಾರ್ ಸ್ವಾಗತಿಸಿ, ಶ್ರೀನಿವಾಸ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಡೇವಿಡ್ ರೊಸಾರಿಯೊ ವಂದಿಸಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

60 ವರ್ಷಗಳ ಕಾಲ ಗುತ್ತಿಗೆ

ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಸೆಂಟರ್ ಅಸ್ತಿತ್ವದಲ್ಲಿರುವ 32 ಹಾಸಿಗೆಗಳ ಆಸ್ಪತ್ರೆಯನ್ನು ಎರಡು ವರ್ಷಗಳವರೆಗೆ ನಿರ್ವಹಿಸಲು ಮತ್ತು ಮೂರು ಎಕರೆ ಬಂದರಿನ ಭೂಮಿಯಲ್ಲಿ 150 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಮತ್ತು ನಿರ್ವಹಿಸಲು ವಿಶೇಷ ಹಕ್ಕು ಮತ್ತು ಪರವಾನಗಿಯನ್ನು ಹೊಂದಿರುತ್ತದೆ. 60 ವರ್ಷಗಳ ಕಾಲ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಗುತ್ತಿಗೆ ನೀಡಲಾಗಿದೆ. ಬಂದರು ನೌಕರರು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ನಿವೃತ್ತ ಸಿಬ್ಬಂದಿ ಮತ್ತು ಅವರ ಅವಲಂಬಿತರು ಹಾಗೂ ಬಂದರಿನ ಹತ್ತಿರದ ಪ್ರದೇಶಗಳಲ್ಲಿ ವಾಸಿಸುವ ನವ ಮಂಗಳೂರು ಬಂದರು ಪ್ರಾಧಿಕಾರದ ಫಲಾನುಭವಿಗಳಿಗೆ ಆಸ್ಪತ್ರೆಯು ಆರೋಗ್ಯ ಸೇವೆಗಳನ್ನು ಒದಗಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net