

ತುಮಕೂರು: ಸಿದ್ಧಗಂಗಾ ಮಠದ ನೂತನ ಉತ್ತರಾಧಿಕಾರಿಗಳ ಅದ್ಧೂರಿ ಪಟ್ಟಾಭಿಷೇಕಕ್ಕೂ ಚುನಾವಣಾ ನೀತಿಸಂಹಿತೆ ತೊಡಕಾಗಿದ್ದು, ಮೂವರೂ ಉತ್ತರಾಧಿಕಾರಿಗಳ ಪೀಠಾರೋಹಣ ಸರಳವಾಗಿಯೇ ನೆರವೇರಲಿದೆ ಎಂದು ಮಠದ ಮೂಲಗಳು ತಿಳಿಸಿವೆ.
ವಿಧಾನಸಭಾ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿ ಇರುವುದರಿಂದ ತುಮಕೂರಿನ ಸಿದ್ದಗಂಗಾ ಮಠದ ಮೂವರು ನೂತನ ಉತ್ತರಾಧಿಕಾರಿಗಳ ಪಟ್ಟಾಭಿಷೇಕ ಕಾರ್ಯಕ್ರಮ ಸರಳವಾಗಿ ಆಚರಿಸಲು ಮುಂದಾದ ಸಿದ್ಧಗಂಗಾ ಮಠದ ಆಡಳಿತ ಮಂಡಳಿ ನಿರ್ಧರಿಸಿದೆ.
ತುಮಕೂರಿನ ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಮನೋಜ್ ಕುಮಾರ್, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠದ ಉತ್ತರಾಧಿಕಾರಿಯಾಗಿ ಹರ್ಷಾ, ವಿಜಯಪುರ ಬಸವಕಲ್ಯಾಣ ಮಠದ ಉತ್ತರಾಧಿಕಾರಿ ಗೌರಿಶಂಕರ್ ನೇಮಕಗೊಂಡಿದ್ದು, ಬಸವ ಜಯಂತಿಯಂದು ಇವರ ಪಟ್ಟಾಭಿಷೇಕ ನಡೆಯಲಿದೆ.
ಇದೇ 23ರ ಭಾನುವಾರ ಬೆಳಗ್ಗೆ 5ರಿಂದ ಸಿದ್ಧಗಂಗೆಯ ಹಳೇ ಮಠದ ಆವರಣದಲ್ಲಿ ಶ್ರೀಮಠದ ಭಕ್ತಾದಿಗಳು, ಸಾರ್ವಜನಿಕರು ಮತ್ತು ಹಿತೈಷಿಗಳ ಸಮ್ಮುಖದಲ್ಲಿ ಸರಳವಾಗಿ ಪಟ್ಟಾಭಿಷೇಕ ನೆರವೇರಲಿದೆ ಎಂದು ಮಠದ ಮೂಲಗಳು ತಿಳಿಸಿವೆ.