

ಹುಬ್ಬಳ್ಳಿ: ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ತಮ್ಮ ಸರಳ ನಡೆಯ ಮೂಲಕ ಇಡೀ ಮಾನವ ಕುಲಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅವರು ಸರಳತೆಯೊಂದಿಗೆ ಸಮಾಜ ಕಟ್ಟುವ ಕಾರ್ಯವನ್ನು ಮಾಡಿದ್ದಾರೆ ಎಂದು ವಿಜಯಪುರ ಸಿದ್ದಲಿಂಗೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿಯ ನವನಗರ ಸಿದ್ದೇಶ್ವರ ಮಹಾಸ್ವಾಮೀಜಿ ಅವರ ಸತ್ಸಂಗ ಹಾಗೂ ದಾಸೋಹ ಸೇವಾ ಸಮಿತಿ ವತಿಯಿಂದ ಚಿಕೇನಕೊಪ್ಪ ಚನ್ನವಿರ ಶರಣರ ಅಂಧರ ಕಲ್ಯಾಣಾಶ್ರಮದಲ್ಲಿ ಏರ್ಪಡಿಸಿದ್ದ ಗುರು ನಮನ ಪ್ರವಚನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀಗಳು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು. ಆ ಮೂಲಕ ಅವರ ಆದರ್ಶಗಳಿಗೆ ಗೌರವ ಕೊಡಬೇಕು. ಅವರ ಸಂದೇಶಗಳನ್ನು ಜಾರಿಗೆ ತರಬೇಕು ಎಂದರು.
ಶಿರಹಟ್ಟಿ ಭಾವೈಕ್ಯ ಸಂಸ್ಥಾನ ಮಹಾಪೀಠದ ಶ್ರೀ ಫಕೀರ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಜಾತಿ, ಬೇಧ, ಮತ, ಪಂಥ ನೋಡದೆ ಮಾನವೀಯತೆಯನ್ನು ಆಧಾರವಾಗಿಟ್ಟುಕೊಂಡು, ಪ್ರಕೃತಿಯೊಂದಿಗೆ ಮನುಷ್ಯ ಹೇಗೆ ಬದುಕಬೇಕು. ಪ್ರಕೃತಿಯ ಇತರ ಘಟಕಗಳಿಗೂ ಗೌರವ ಕೊಟ್ಟು ಬದುಕುವುದನ್ನು ನಮಗೆ ಕಲಿಸಿಕೊಟ್ಟಿದ್ದಾರೆ. ಅವರ ಜೀವನವೇ ನಮಗೆ ಸಂದೇಶ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಇಂದು ಸರ್ಕಾರ ಶಾಲೆ ಮಕ್ಕಳಿಗೆ ಶೇಂಗಾ ಚಿಕ್ಕಿ ವಿತರಣೆ ಮಾಡಲು ಮೂಲ ಕಾರಣ ಸಿದ್ದೇಶ್ವರ ಸ್ವಾಮೀಜಿ. ಚಿಕ್ಕಿ ಕೊಡುವುದರಿಂದ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚುತ್ತದೆ ಎಂದು ಶ್ರೀಗಳು ಸಲಹೆ ನೀಡಿದ್ದರು. ಒಬ್ಬ ಸಂತನಾಗಿ ಶಿಕ್ಷಣ, ಮಕ್ಕಳ ಹಾಗೂ ಸಮಾಜದ ಬಗ್ಗೆ ಅವರಿಗೆ ಇದ್ದ ಕಾಳಜಿ ತೋರಿಸುತ್ತದೆ ಎಂದು ಹೇಳಿದರು.
ಕೆಎಲ್ಇ ಸೊಸೈಟಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಗಳು ಯಾವುದೇ ಪದವಿಗೆ ಅಂಟಿಕೊಳ್ಳದೇ ನಡೆಸಿದ ಜೀವನ ನಮಗೆ ಮಾದರಿಯಾಗಬೇಕು ಎಂದರು.
ಸಹಕಾರ ರತ್ನ ಪ್ರಶಸ್ತಿ ಪಡೆದ ಶಂಕರಣ್ಣ ಮುನವಳ್ಳಿ ಹಾಗೂ ದಾನಿಗಳಾದ ಎನ್.ಎಚ್. ಶಿವಲಿಂಗಮಠ, ಸಭಾಪತಿ ಹೊರಟ್ಟಿ ಅವರನ್ನು ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಉತ್ಸವ ಸಮಿತಿಯ ಸ್ವಾಮಿ ಮಹಾಜನಶೆಟ್ಟರ್, ಸತೀಶ ಮೂರೂರ, ರಮೇಶ ನಂದ್ಯಾಳ, ಶಿವು ಪೂಜಾರ, ಸಿದ್ದಪ್ಪ ಗೌಡರ, ಭೀಮಪ್ಪ ಜಾವೂರ, ಇತರರು ಇದ್ದರು.