ಸಿದ್ದರಾಮಯ್ಯರದ್ದು ಸತ್ವಹೀನ ಬಜೆಟ್; ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವ್ಯಂಗ್ಯ | Budget

dk-2025-03-07t221634736-67cb2322cc6ec
Published on

Budget: ವಿಧಾನಸಭೆಯಲ್ಲಿ ಮಂಡಿಸಿದ 2025-26 ನೇ ಸಾಲಿನ ರಾಜ್ಯ ಬಜೆಟ್ ರಾಜ್ಯವನ್ನು ಆರ್ಥಿಕ ಪ್ರಗತಿಪಥದತ್ತ ಕೊಂಡುಹೋಗುವ ಯಾವುದೇ ರಚನಾತ್ಮಕ ಪ್ರಸ್ತಾವನೆಗಳಿಲ್ಲದ ಸತ್ವಹೀನ ಬಜೆಟ್ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಜೋಶಿ, '' ಪ್ರತಿಯೊಂದಕ್ಕು ಎಲ್ಲದಕ್ಕೂ ಕೇಂದ್ರ ಸರ್ಕಾರದಡೆ ಬೊಟ್ಟು ಮಾಡುವುದನ್ನೇ ರೂಢಿ ಮಾಡಿಕೊಂಡಿರುವ ಮುಖ್ಯಮಂತ್ರಿ ಯಾವದೇ ಅರ್ಥಿಕ ಮೂಲತತ್ವಗಳ ಸ್ಪರ್ಶ ನೀಡುವಲ್ಲಿ ವಿಫಲರಾಗಿದ್ದಾರೆ. ರೂ 4.9 ಲಕ್ಷ ಕೋಟಿ ಬೃಹತ್​ ಗಾತ್ರದ ಬಜೆಟ್ ಮಂಡಿಸಿದ್ದರೂ ಸರ್ವವರ್ಗದ ಸಮಭಾವ ಹಾಗೂ ಸರ್ವಪ್ರದೇಶಗಳ ಅಭಿವೃದ್ಧಿಯ ಸಮತೋಲನ ಈ ಬಜೆಟ್ ವಿಫಲವಾಗಿದೆ'' ಎಂದಿದ್ದಾರೆ.

ಇದು ಒಂದು ಅಲ್ಪಸಂಖ್ಯಾತರ ಓಲೈಕೆಯ ಬಜೆಟ್ ಆಗಿದೆ ಎಂದಿರುವ ಕೇಂದ್ರ ಸಚಿವರು, ರಾಜ್ಯದ ಒಟ್ಟು ಸಾಲ ರೂ 8 ಲಕ್ಷ ಕೋಟಿಗೆ ಸಮೀಪಿಸಿದ್ದು ರಾಜ್ಯ ಜಿಡಿಪಿಯ 23% ರಷ್ಟಾಗಿರುವುದು ಕಳವಳಕಾರಿಯಾಗಿದೆ. ರೆವೆನ್ಯು ವೆಚ್ಚ ರೂ 3,11,400 ಲಕ್ಷ ಕೋಟಿ, ಬಂಡವಾಳ ವೆಚ್ಚ ರೂ 76,400 ಕೋಟಿ ಇದ್ದು ವಿತ್ತೀಯ ಕೊರತೆ ನಿಗದಿ ಪಡಿಸುವಲ್ಲಿ ಯಾವುದೇ ತಾತ್ವಿಕ ವ್ಯವಸ್ಥೆ ಪಾಲಿಸಲಾಗಿಲ್ಲ. ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ 14% ರಷ್ಟು ಅನುದಾನ ನೀಡಲಾಗಿದೆ ಹಾಗೂ ಶಿಕ್ಷಣ ಹಾಗೂ ಆರೋಗ್ಯಕ್ಕೆ ಕ್ರಮವಾಗಿ 10% ಹಾಗೂ 5% ರಷ್ಟು ಅನುದಾನ ತೃಪ್ತಿಕರವಾಗಿಲ್ಲ ಎಂದಿದ್ದಾರೆ.

ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಈ ಬಜೆಟ್​ನಲ್ಲಿ ಗಮನಾರ್ಹ ಹಂಚಿಕೆ ಇಲ್ಲದಿರುವುದು ಆರ್ಥಿಕ ಪ್ರಗತಿಗೆ ದೊಡ್ಡ ಹೊಡೆತವಾಗಿದೆ. ರಸ್ತೆಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳು ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತವೆ ಮತ್ತು ಖಾಸಗಿ ಹೂಡಿಕೆಯನ್ನು ಆಕರ್ಷಿಸುತ್ತವೆ. ಆದರೆ, ಈ ಬಜೆಟ್ನಲ್ಲಿ ಇಂತಹ ಯೋಜನೆಗಳಿಗೆ ಆದ್ಯತೆ ನೀಡದಿರುವುದು ರಾಜ್ಯದ ಸ್ಪರ್ದಾತ್ಮಕತೆಯನ್ನು ಕುಗ್ಗಿಸುತ್ತದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net