

ಬಾಗಲಕೋಟೆ : ಕೋಮುವಾದಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರಬಾರದೆಂದು ಎಚ್.ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ವಿ. ಆದರೆ ಆ ಪುಣ್ಯಾತ್ಮ ಮಾತ್ರ ವೆಸ್ಟೆಂಡ್ ಹೋಟೆಲ್ನಲ್ಲೇ ಕಾಲ ಕಳೆದ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.
ಜಮಖಂಡಿ ನಗರದಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ವೆಸ್ಟೆಂಡ್ ಹೋಟೆಲ್ ಕುಳಿತು ಕಾಲ ಕಳೆದರು. ಜನರನ್ನು ಭೇಟಿ ಮಾಡಲಿಲ್ಲ. ಹೀಗಾಗಿ ಸರ್ಕಾರ ಕಳ್ಕೊಂಡೆವು. ಕೊಟ್ಟ ಕುದುರೆ ಏರದವ ಧೀರನೂ ಅಲ್ಲ, ಶೂರನೂ ಅಲ್ಲ ಎಂದು ಕಿಡಿಕಾರಿದ್ದಾರೆ.
ಎಂಎಲ್ಎಗಳು ಬೇಸರ ಆಗಿದ್ದರು. ಯಡಿಯೂರಪ್ಪ ದುಡ್ಡು ಹಿಡ್ಕೊಂಡು ಕಾಯುತ್ತಾ ಕುಳಿತ್ತಿದ್ದರು. 17 ಜನ ಶಾಸಕರನ್ನ ವ್ಯಾಪಾರ ಮಾಡಿ ಖರೀದಿ ಮಾಡಿದರು. ಅನ್ನ ಹಳಸಿತ್ತು, ನಾಯಿ ಕಾದಿತ್ತು ಅನ್ನೋ ಗಾದೆಯಂತಾಗಿದೆ. ಇದನ್ನ ಆಪರೇಶನ್ ಕಮಲ ಅಂತ ಕರೆದಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಶಾಸಕರ ರಾಜೀನಾಮೆ ಕೊಡಿಸಿ, ಉಪ ಚುನಾವಣೆ ಮಾಡಿ, ಅಲ್ಲಿ 20 ಕೋಟಿ ಖರ್ಚು ಮಾಡಿದ್ದಾರೆ. ಒಟ್ಟು 40 ಕೋಟಿ ಖರ್ಚು ಮಾಡಿ ಗೆದ್ದು ಅನೈತಿಕ ಸರ್ಕಾರವನ್ನು ತಂದರು. ಇಷ್ಟೆಲ್ಲ ಮಾಡಿದವರು ಒಳ್ಳೆ ಸರ್ಕಾರ ಕೊಡಲು ಆಗುತ್ತಾ ? ಎಂದು ಆಡಳಿತ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಬಸವರಾಜ ಬೊಮ್ಮಾಯಿ ಏನ್ ಬೇಕಾದ್ರೂ ಹೇಳಿಕೊಳ್ಳಲಿ. ನಾಲ್ಕು ವರ್ಷದಲ್ಲಿ ಒಂದು ಮನೆ ಕೊಡದ ಈ ಸರ್ಕಾರ ಲಾಯಕ್ಕಾ, ನಾಲಾಯಕ್ಕಾ ಎಂದು ವಾಗ್ದಾಳಿ ಮಾಡಿದ್ದಾರೆ.