

ಕೋಲಾರ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಇಂದು ಇಡೀ ದಿನ ಕೋಲಾರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಬಹುದೇ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಜನರ ನಾಡಿಮಿಡಿತ ಅರಿಯಲು ಬಂದಿದ್ದ ಸಿದ್ದರಾಮಯ್ಯ ಅವರಿಗೆ ಜನ ಭರ್ಜರಿ ಸ್ವಾಗತವನ್ನೇ ನೀಡಿದರು.
ಭೇಟಿ ನೀಡಿದ ಕಡೆಯಲೆಲ್ಲಾ 'ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ', 'ಕೋಲಾರದ ಮುಂದಿನ ಶಾಸಕ ಸಿದ್ದರಾಮಯ್ಯ' ಎಂದು ಕಾರ್ಯಕರ್ತರು, ಸ್ಥಳೀಯ ಕಾಂಗ್ರೆಸ್ ಮುಖಂಡರು ಘೋಷಣೆ ಕೂಗಿದರು. ಸಿದ್ಧರಾಮಯ್ಯ ಅವರು ನರಸಾಪುರಕ್ಕೆ ತೆರಳಿ ಕೆಸಿ ನೀರು ಹರಿಯುತ್ತಿರುವ ನರಸಾಪುರ ಕೆರೆ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಶಾಸಕ ಕೃಷ್ಣ ಬೈರೇಗೌಡ ಮಾತನಾಡಿ, 'ಎರಡೂವರೆ ಸಾವಿರ ಕೋಟಿ ವೆಚ್ಚದಲ್ಲಿ ಜಿಲ್ಲೆಯ ೪೦೦ ಕೆರೆ ಶಾಶ್ವತವಾಗಿ ತುಂಬಲು ಕಾರಣ ಸಿದ್ದರಾಮಯ್ಯ. ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಯೋಜನೆ ಜಾರಿ ಮಾಡಿದರು. ಬರಗಾಲ ಪೀಡಿತ ಜಿಲ್ಲೆಯು ಈಗ ಮಲೆನಾಡು ಆಗಿದೆ. ರೈತರ ಮೊಗದಲ್ಲಿ ಸಂತಸ ಮೂಡಿದೆ' ಎಂದರು.
'ಎತ್ತಿನ ಹೊಳೆ ಯೋಜನೆ ಜಾರಿಯಲ್ಲಿ ಬಿಜೆಪಿ ವಿಫಲವಾಗಿದೆ. ಹೀಗಾಗಿ, ಈ ಯೋಜನೆ ಜಾರಿಗಾಗಿ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಬೇಕು. ಕೋಲಾರದಲ್ಲಿ ಸ್ಪರ್ಧೆಗೆ ಸಿದ್ದರಾಮಯ್ಯ ಮಾಡಲು ನಾವೆಲ್ಲಾ ಮನವಿ ಮಾಡಿದ್ದೇವೆ' ಎಂದು ಹೇಳಿದರು.
ಶಾಸಕರಾದ ಶರತ್ ಬಚ್ಚೇಗೌಡ, ಕೆ.ಶ್ರೀನಿವಾಸಗೌಡ, ವಿ.ಆರ್.ಸುದರ್ಶನ್, ಡಾ.ಎಂ.ಸಿ.ಸುಧಾಕರ್, ನಾರಾಯಣ ಸ್ವಾಮಿ, ನಸೀರ್ ಅಹ್ಮದ್ ಇದ್ದರು.