ಸಿದ್ದರಾಮಯ್ಯ ಬಜೆಟ್ ನಲ್ಲಿ ಪ್ರಸ್ತಾಪಿಸಿದ Trickle Down Theory ಏನು? ಏನದರ ವಿಶೇಷ?

trickle down theory
Published on

ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ, ರಾಜ್ಯ ಬಜೆಟ್​ ಮಂಡಿಸಿದ್ದು Trickle Down Theory ಎನ್ನುವ ಪರಿಕಲ್ಪನೆಯ ಬಗ್ಗೆ ಉಲ್ಲೇಖ ಮಾಡಿದ್ದರು. ಇದರಿಂದಾಗಿ ಪ್ರಸ್ತುತ ಸಮಯದಲ್ಲಿ ಜನರಿಗೆ ಅನಾನುಕೂಲವೇ ಆಗುತ್ತಿದೆ ಎಂದು ಹೇಳಿದ್ದರು. ಈಗ ಯಾಕೆ ಈ ಪರಿಕಲ್ಪನೆ ಸೋಲುತ್ತಿರುವುದು? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ:

ಏನಿದು ಟ್ರಿಕಲ್ ಡೌನ್ ಥಿಯರಿ?

ಈ ಟ್ರಿಕಲ್​ ಡೌನ್​ ಥಿಯರಿನಲ್ಲಿ ಹೆಚ್ಚು ಉತ್ಪತ್ತಿ ಇರುವ ಉದ್ಯಮಿಗಳು, ಕೈಗಾರಿಕೋದ್ಯಮಿಗಳಿಗೆ ತೆರಿಗೆಯಲ್ಲಿ ರಿಯಾಯಿತಿ ನೀಡುವುದಾಗಿದೆ. ಹಾಗೆ ಮಾಡಿದಾಗ ಉದ್ಯಮಿಗಳಿಗೆ ಹೆಚ್ಚಿನ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟ ಹಾಗಾಗುತ್ತದೆ. ಈ ಮೂಲಕ ಉದ್ಯೋಗ ಸೃಷ್ಟಿಯಾಗಿ ಹಣ ಸಿರಿವಂತರಿಂದ ಬಡವರ ಕಡೆಗೆ ಹರಿಯುತ್ತದೆ ಎನ್ನುವುದು ಥಿಯರಿ. ಆದರೆ, ಈ ಸಿದ್ಧಾಂತ ಈಗಾಗಲೇ ಇಂಗ್ಲೆಂಡ್​ನಲ್ಲಿ ಸೋತಿದೆ.

ಈ ವಿಚಾರ ಈ ಹಿಂದೆ ಇಂಗ್ಲೆಂಡ್​ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಮುನ್ನೆಲೆಗೆ ಬಂದಿತ್ತು. ಆಗ ಈ ಥಿಯರಿಯನ್ನು ಲಿಝ್ ಟ್ರಸ್​ ಬೆಂಬಲಿಸಿ ಸೋತಿದ್ದರು. ಸಿರಿವಂತರು ತೆರಿಗೆ ವಿನಾಯಿತಿ ಪಡೆದ ಕೂಡಲೇ ಆ ಹಣವನ್ನು ಮತ್ತೊಮ್ಮೆ ಹೂಡುವ ಬದಲು ಬೇರೆಡೆ ಸಾಗಿಸಿ ಜೇಬು ತುಂಬಿಸುತ್ತಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳನ್ನು ಆರ್ಥಿಕ ಸಮಾನತೆಯನ್ನು ತರುವಲ್ಲಿ ಬಳಸುತ್ತಿದ್ದಾರೆ ಎಂದಿದ್ದಾರೆ. ಇದಕ್ಕೆ ಟ್ರಿಕಲ್ ಡೌನ್ ಥಿಯರಿಯ ಸಹಾಯವನ್ನು ಪಡೆದಿದ್ದಾರೆ.

ಟ್ರಿಕಲ್ ಡೌನ್​ ಥಿಯರಿಗೂ ಗ್ಯಾರಂಟಿ ಯೋಜನೆಗೂ ಸಂಬಂಧವೇನು?

ಟ್ರಿಕಲ್​ ಡೌನ್​ ಥಿಯರಿ ಬಗ್ಗೆ ಪ್ರಸ್ತಾಪ ಮಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಳ್ಳುವುದರ ಮೂಲಕ ಮಾಡಿದರು. "ನಾವು ಗ್ಯಾರಂಟಿ ಯೋಜನೆಗಳನ್ನು ಯಾಕೆ ಘೋಷಿಸಿದ್ದೇವೆ? ಹಾಗೂ ಯಾಕೆ ಜಾರಿಗೊಳಿಸುತ್ತಿದ್ದೇವೆ? ಅವು ಬಿಟ್ಟಿ ಕೊಡುಗೆಗಳಲ್ಲ.

ಮುಕ್ತ ಮಾರುಕಟ್ಟೆಯ ಈ ಯುಗದಲ್ಲಿ ಬಂಡವಾಳ ಹೂಡಿಕೆಯನ್ನು ವ್ಯಾಪಕವಾಗಿ ಆಕರ್ಷಿಸುವುದು, ಉದ್ಯೋಗಸಹಿತ ಬೆಳವಣಿಗೆಯನ್ನು ಸಾಕಾರಗೊಳಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಸಂಪತ್ತಿನ ವ್ಯಾಪಕ ಅಸಮಾನ ಹಂಚಿಕೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳುವುದು.

ಅಭಿವೃದ್ಧಿಯ ಸಾಹಿತ್ಯದಲ್ಲಿ ಆರ್ಥಿಕ ಪ್ರಗತಿಯ ಫಲಗಳು ಬಡವರಿಗೆ ಸಹಜವಾಗಿ ಹರಿದುಬರುತ್ತದೆ Trickle Down Theory ಎಂಬ ನಂಬಿಕೆ ಹುಸಿಯಾದ ಸಂದರ್ಭದಲ್ಲಿ ಬಡವರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಬೇಷರತ್ತಾಗಿ ನಗದು ವರ್ಗಾವಣೆ ಮಾಡುವುದು ಮಹಿಳಾ ಸಬಲೀಕರಣ ಹಾಗೂ ಅವರ ಖರೀದಿಸುವ ಸಾಮರ್ಥ್ಯ ಹೆಚ್ಚಿಸುವ ಪರಿಣಾಮಕಾರಿ ಮಾರ್ಗವೆಂಬುದು ಸಾಬೀತಾಗಿದೆ.

ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳು ಕೇಂದ್ರ ಸರ್ಕಾರದ ವೈಫಲ್ಯದಿಂದ ಅನಿಯಂತ್ರಿತ ಬೆಲೆ ಏರಿಕೆಯಿಂದ ತತ್ತರಿಸುವ ಕುಟುಂಬಗಳಿಗೆ ತುಸು ನಿರಾಳತೆ ತಂದುಕೊಡುತ್ತವೆ. ಮಹಿಳೆಯರ ಓಡಾಟಕ್ಕೆ ಬೆಂಬಲ ನೀಡುವ ಶಕ್ತಿ ಯೋಜನೆಯು ಅವರಿಗೆ ಹಣ ಉಳಿತಾಯ ಮಾಡುವುದರೊಂದಿಗೆ ಮನೆಯಿಂದ ದೂರದ ಸ್ಥಳಗಳಲ್ಲಿಯೂ ಉದ್ಯೋಗ ಕಂಡುಕೊಳ್ಳಲು ನೆರವಾಗುತ್ತದೆ. ಅನ್ನಭಾಗ್ಯವು ಯಾರೂ ಹಸಿದುಕೊಂಡಿರಬಾರದೆಂಬುದನ್ನು ಖಾತರಿ ಪಡಿಸಿದರೆ, ಯುವನಿಧಿ, ಉದ್ಯೋಗಾಕಾಂಕ್ಷಿ ಯುವ ಜನರಿಗೆ ಮಾನಸಿಕ ಸ್ಥೈರ್ಯ ನೀಡುತ್ತದೆ.

ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಒಂದು ವರ್ಷದಲ್ಲಿ ಸುಮಾರು 52,000 ಕೋಟಿ ರೂ.ಗಳನ್ನು ಅಂದಾಜು 1.30 ಕೋಟಿ ಕುಟುಂಬಗಳಿಗೆ ತಲುಪಿಸುವುದರಿಂದ ಪ್ರತೀ ಕುಟುಂಬಕ್ಕೆ ಮಾಸಿಕ 4,000 ರಿಂದ 5,000 ರೂ.ಗಳಷ್ಟು, ಅಂದರೆ, ವಾರ್ಷಿಕವಾಗಿ ಸರಾಸರಿ 48,000 ದಿಂದ 60,000 ರೂ.ಗಳಷ್ಟು ಹೆಚ್ಚುವರಿ ಆರ್ಥಿಕ ನೆರವು ನೀಡಿದಂತಾಗುತ್ತದೆ. ಇದು ಸಾರ್ವತ್ರಿಕ ಮೂಲ ಆದಾಯ (Universal basic income) ಎಂಬ ಪರಿಕಲ್ಪನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿ ಅಭಿವೃದ್ಧಿಯ ಹೊಸ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಿದೆ.

ಜಿಎಸ್‌ಟಿಯ ಬಹುಪಾಲು ಮೊತ್ತವು ಸಮಾಜದ ತಳಹಂತದ ಶೇ.60 ರಷ್ಟು ಜನರಿಂದ ಸಂಗ್ರಹವಾಗುತ್ತಿದ್ದರೂ ಆರ್ಥಿಕ ವ್ಯವಸ್ಥೆಯ ಹೆಚ್ಚಿನ ಲಾಭವು ಸಮಾಜದ ಮೇಲ್ಮಟ್ಟದ ಶೇ.10 ರಷ್ಟು ಜನರಿಗೆ ತಲುಪುತ್ತಿದೆ. ಆದ್ದರಿಂದ ಬಡವರಿಗೆ ಸಂಪತ್ತನ್ನು ಮರುಹಂಚಿಕೆ ಮಾಡುವ ನೀತಿಗಳನ್ನು ಜನಪರ ಸರ್ಕಾರಗಳು ಅನುಸರಿಸಬೇಕು. ನಮ್ಮ ಗ್ಯಾರಂಟಿ ಯೋಜನೆಗಳು ಈ ಕೆಲಸವನ್ನು ಮಾಡುತ್ತವೆ" ಎಂದಿದ್ದಾರೆ.

ಈ ಮೂಲಕ ಅವರು ತಮ್ಮ ಗ್ಯಾರಂಟಿ ಯೋಜನೆಗಳ ಮೂಲಕ ಬಡ ವರ್ಗದ ಜನರಲ್ಲಿ ಹಣವನ್ನು ಹೇಗೆ ತಲುಪಿಸುತ್ತಿದ್ದಾರೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net