

ಬೆಂಗಳೂರು: ಸಮಾಜ ಸುಧಾರಣೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು ಸೇವೆ ಮಾಡಿದ ಮಹಾತ್ಮರನ್ನು ನೆನೆಯುವುದು ಸಮಾಜದ ಆದ್ಯ ಕರ್ತವ್ಯ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಡಾ.ಶ್ರೀ ಶಿವಕುಮಾರಸ್ವಾಮಿ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಶ್ರೀ ಶಿವಕುಮಾರಸ್ವಾಮಿಗಳ 6ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ರಾಜಾಜಿನಗರದ ಪ್ರವೇಶದ್ವಾರದಲ್ಲಿರುವ ಶ್ರೀಗಳ ಕಂಚಿನ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ತಮ್ಮ ಜೀವಿತಾವಧಿಯ ಕೊನೆಯವರೆಗೂ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ಇತರೆ ಎಲ್ಲ ಧಾರ್ಮಿಕ ಮುಖಂಡರಿಗೆ ಮಾದರಿಯಾಗುವಂತೆ ಸೇವೆ ಮಾಡಿದ ಮಹಾತ್ಮರು. ಅವರ ದಾಸೋಹದಿಂದಾಗಿ ಕೋಟ್ಯಾಂತರ ಜನರ ಹಸಿವು ನೀಗಿದೆ. ಅಪಾರ ಮಕ್ಕಳಿಗೆ ಅಕ್ಷರವನ್ನು ನೀಡಿ ಮಾನವೀಯತೆಯ ಹಾದಿಯಲ್ಲಿ ಬೆಳೆಸಿದ್ದು, ಮಠದಲ್ಲಿ ಕಲಿತ ಲಕ್ಷಾಂತರ ಜನ ಸಮಾಜದ ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಗಳು ಹಾಕಿಕೊಟ್ಟಿರುವ ಪರಂಪರೆಯನ್ನು ಶ್ರೀಮಠ ಇಂದಿಗೂ ಮುಂದುವರೆಸುತ್ತಿರುವುದು ಜಗತ್ತಿಗೆ ಮಾದರಿ ಎಂದು ನಾರಾಯಣಸ್ವಾಮಿ ತಿಳಿಸಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಅಥಣಿ ಮೋಟಗಿ ಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಕಾಯಕವೇ ಕೈಲಾಸ ಎಂಬ ಮಾತಿಗೆ ಅರ್ಥವನ್ನು ತಂದುಕೊಟ್ಟ ಶ್ರೀಶಿವಕುಮಾರ ಸ್ವಾಮೀಜಿ ವಿದ್ಯಾರ್ಥಿಗಳೇ ದೇವರು, ಸೇವೆಯೇ ಧರ್ಮ ಎಂದು ಭಾವಿಸಿದ್ದರು. ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ ಎಂಬ ಬಸವಣ್ಣನವರ ಮಾತನ್ನು ಸಾಧಿಸಿ ತೋರಿಸಿದ ಶತಮಾನದ ಸಂತಶ್ರೇಷ್ಠ ಎಂದರು.
ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನವೀನ್ ಕುಮಾರ್, ಹಿರಿಯ ಸಲಹೆಗಾರ ಪಾಲನೇತ್ರ, ಸಂಚಾಲಕ ಬಿ.ದೇವರಾಜು ಮತ್ತಿತರರಿದ್ದರು. ಸಮಾರಂಭಕ್ಕೂ ಮುನ್ನ ಚೈತ್ರಾಂಜಲಿ ಸವಿಗಾನಸುಧೆ ಸಂಗೀತ ಶಾಲೆಯ ಪಾಲಾಕ್ಷ ಶಾಸಿಗಳಿಂದ ಶ್ರೀಗಳ ಕುರಿತು ಭಕ್ತಿಗಾಯನ ನಡೆಯಿತು. ನಂತರ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು.
ಶ್ರೀಶಿವಕುಮಾರ ಸ್ವಾಮೀಜಿಯ ತತ್ವಾದರ್ಶಗಳು ಕೇವಲ ರಾಜ್ಯ, ದೇಶ, ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಇಡೀ ಜಗತ್ತಿನ ಮಾನವ ಜನಾಂಗಕ್ಕೆ ಸ್ಪೂರ್ತಿದಾಯಕವಾಗಿವೆ. ಸೌಹಾರ್ಧತೆ, ಶಾಂತಿ, ಸಮೃದ್ಧಿಗಾಗಿ ಅವರು ಅವಿರತ ಶ್ರಮಿಸಿದ್ದರು. -ಡಾ.ಶಂಕರ ಬಿದರಿ, ವೀರಶೈವ ಮಹಾಸಭೆ ರಾಜ್ಯಾಧ್ಯಕ್ಷ