ಐಸಿಸಿ ರ‍್ಯಾಂಕಿಂಗ್​ ಪಟ್ಟಿ ಪ್ರಕಟ; ಕುಸಿದ ಶುಭಮನ್​ ಗಿಲ್, ಬಾಬರ್​ಗೆ ಒಲಿದ ಲಕ್

Shubman babar
Published on

ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್​ ಸಮಿತಿ ನೂತನ ರ‍್ಯಾಂಕಿಂಗ್​ ಪಟ್ಟಿಯನ್ನು ಪ್ರಕಟ ಮಾಡಿದ್ದು, ಸಾಕಷ್ಟು ಏರುಪೇರುಗಳಾಗಿವೆ. ಏಕದಿನ ವಿಶ್ವಕಪ್​ ಬಳಿಕ ನಂ. 01 ಸ್ಥಾನವನ್ನು ಅಲಂಕರಿಸಿದ್ದ ಟೀಂ ಇಂಡಿಯಾ ಆರಂಭಿಕ ಆಟಗಾರ ಶುಭಮನ್​ ಗಿಲ್​ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ. ಗಿಲ್​ ಅವರ ಸ್ಥಾನವನ್ನು ಪಾಕ್​ ಮಾಜಿ ನಾಯಕ ಬಾಬರ್​ ಅಜಂ ಪಾಲಾಗಿದೆ.

ಐಸಿಸಿ ಬಿಡುಗಡೆ ಮಾಡಿರುವ ನೂತನ ಏಕದಿನ ರ‍್ಯಾಂಕಿಂಗ್‌ನಲ್ಲಿ 824 ರೇಟಿಂಗ್‌ನೊಂದಿಗೆ ಬಾಬರ್ ಆಜಂ ನಂಬರ್ ಒನ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಶುಭ್​ಮನ್ ಗಿಲ್ ಅವರ ರೇಟಿಂಗ್ ಕುಸಿದಿದೆ. ಗಿಲ್ ಅವರ ರೇಟಿಂಗ್ ಕಳೆದ ವಾರ 826 ರಷ್ಟಿತ್ತು, ಅದು ಈಗ 810 ಕ್ಕೆ ಇಳಿದಿದೆ. ಅಂದರೆ ಬಾಬರ್ ಅಜಂ ನಂಬರ್ ಒನ್ ಸ್ಥಾನಕ್ಕೆ ಏರಿದಲ್ಲದೆ, ಗಿಲ್ ಅವರನ್ನು ಭಾರಿ ಅಂತರದಿಂದ ಹಿಂದೆ ಹಾಕಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ತಂಡವು ಯಾವುದೇ ಏಕದಿನ ಪಂದ್ಯಗಳನ್ನು ಆಡಿಲ್ಲ. ಹಾಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಏಕದಿನ ಸರಣಿ ನಡೆಯುತ್ತಿದ್ದು, ಶುಭಮನ್​ ಗಿಲ್​ ಈ ಸರಣಿಯಲ್ಲಿ ಆಡುತ್ತಿಲ್ಲ. ಒಂದು ವೇಳೆ ತಂಡ ಏಕದಿನ ಸರಣಿಯನ್ನು ಆಡಿ, ಆಟಗಾರ ಆ ತಂಡದಲ್ಲಿ ಆಡದಿದ್ದರೆ, ಅವರ ರೇಟಿಂಗ್ ಸ್ವಯಂಚಾಲಿತವಾಗಿ ಕುಸಿಯುತ್ತದೆ. 

ಈ ಕಾರಣಕ್ಕೆ ಬಾಬರ್​ಗಿಂತ ಎರಡು ರೇಟಿಂಗ್ ಪಾಯಿಂಟ್​ಗಳಿಂದ ಮುಂದಿದ್ದ ಶುಭ್​ಮನ್ ಗಿಲ್ ಇದೀಗ 14 ಅಂಕ ಹಿಂದೆ ಬಿದ್ದಿದ್ದಾರೆ. ಇದೀಗ ಶುಭ್​ಮನ್ ಗಿಲ್ ಮೂರನೇ ಏಕದಿನ ಪಂದ್ಯದಲ್ಲೂ ಆಡುವುದಿಲ್ಲ, ಹೀಗಾಗಿ ಮುಂಬರುವ ವಾರಗಳಲ್ಲಿ ಅವರ ರೇಟಿಂಗ್ ಮತ್ತಷ್ಟು ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಶುಭ್​ಮನ್ ಗಿಲ್ ಜೊತೆಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ರೇಟಿಂಗ್ ಕೂಡ ಕುಸಿದಿದೆ.

ಇದಾದ ಬಳಿಕವೂ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದು, ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರ ರೇಟಿಂಗ್ ಈ ಮೊದಲು 791 ರಷ್ಟಿತ್ತು, ಅದು ಈಗ 775 ಕ್ಕೆ ಇಳಿದಿದೆ. ಆದರೂ ಕೊಹ್ಲಿ ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ರೋಹಿತ್ ಶರ್ಮಾ ಅವರ ರೇಟಿಂಗ್ ಮೊದಲು 769 ಆಗಿತ್ತು, ಅದು ಈಗ 754 ಕ್ಕೆ ಇಳಿದಿದೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರ ರೇಟಿಂಗ್ ಮೊದಲಿನಂತೆಯೇ ಇದ್ದು, ಅವರು 745 ರೇಟಿಂಗ್‌ನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net