

Shubman Gill: ನಿನ್ನೆ (ಜು.03) ಎಡ್ಜ್ಬಾಸ್ಟನ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಚೊಚ್ಚಲ ದ್ವಿಶತಕ ಬಾರಿಸಿದರು. ಈ ಮೂಲಕ ಹಲವು ಐತಿಹಾಸಿಕ ದಾಖಲೆಗಳಿಗೆ ಸಾಕ್ಷಿಯಾದರು. ಭಾರತ ತಂಡದ ನಾಯಕನಾಗಿಯೂ, ಅತ್ಯುತ್ತಮ ಬ್ಯಾಟರ್ ಆಗಿಯೂ ಕಾಣಿಸಿಕೊಂಡ ಗಿಲ್, ಅದ್ಭುತ ಇನ್ನಿಂಗ್ಸ್ ತೋರಿದ್ದು ಅಪಾರ ಸಂಖ್ಯೆಯ ಕ್ರಿಕೆಟ್ ಪ್ರೇಮಿಗಳ ಸಂತಸಕ್ಕೆ ಕಾರಣವಾಯಿತು.
ಟೆಸ್ಟ್ ಫಾರ್ಮೆಟ್ನಲ್ಲಿ ಗಿಲ್ ದಾಖಲಿಸಿದ ಮೊದಲ ದ್ವಿಶತಕ ಇದಾಗಿದ್ದು, ಕೇವಲ 311 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಯುವ ನಾಯಕನಿಗೆ ಮೆಚ್ಚುಗೆ, ಪ್ರಶಂಸೆಗಳ ಮಹಾಪೂರವೇ ಹರಿದುಬಂದಿತು. ಎರಡನೇ ಟೆಸ್ಟ್ನ ಎರಡನೇ ದಿನದಾಟದ ಬಳಿಕ ಮಾತನಾಡಿದ ಶುಭಮನ್ ಗಿಲ್, "ಟೆಸ್ಟ್ ಫಾರ್ಮೆಟ್ನಲ್ಲಿ ದೀರ್ಘ ಕಾಲ ಬ್ಯಾಟ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಟೆಸ್ಟ್ ಶುರುವಿಗೂ ಮುನ್ನವೇ ಆಟದ ಬಗ್ಗೆ ನಾನು ಹೆಚ್ಚು ಗಮನಹರಿಸಿದ್ದೆ. ಐಪಿಎಲ್ ಮುಗಿಯುವ ಹಂತಕ್ಕೆ ಬಂದಾಗಲೇ ಟೆಸ್ಟ್ ಇನ್ನಿಂಗ್ಸ್ ಕುರಿತು ಕೆಲಸ ಮಾಡಿದ್ದೆ. ಕಡೆಗೂ ಅದು ಫಲಿಸಿತು" ಎಂದರು.
"ಈ ಹಿಂದೆ, ನಾನು ಟೆಸ್ಟ್ ಪಂದ್ಯಗಳಲ್ಲಿ 30-34-40 ರನ್ ಬಾರಿಸಲಷ್ಟೇ ಸೀಮಿತವಾಗಿದ್ದೆ. ಒಂದು ಹಂತದಲ್ಲಿ, ನಾನು ಏಕಾಗ್ರತೆಯನ್ನು ಕಳೆದುಕೊಳ್ಳುತ್ತಿದ್ದೆ. ಹೀಗಾಗಿಯೇ, ನಾನು ಇನ್ನಿಂಗ್ಸ್ನಲ್ಲಿ ನಿಂತು ಆಡುವ ಬಗ್ಗೆ ಹೆಚ್ಚು ಫೋಕಸ್ ಮಾಡಿದೆ. ಕೆಲವೊಮ್ಮೆ, ನೀವು ಸುಲಭವಾಗಿ ರನ್ ಗಳಿಸದಿದ್ದಾಗ, ನಿಮ್ಮ ಬ್ಯಾಟಿಂಗ್ ಅನ್ನು ಆನಂದಿಸುವುದನ್ನೇ ನಿಲ್ಲಿಸುತ್ತೀರಿ. ಕೇವಲ ರನ್ ಗಳಿಸುವ ಅಗತ್ಯತೆ ಮೇಲೆ ಮಾತ್ರ ಗಮನಹರಿಸುತ್ತೀರಿ. ನಾನು ಹಾಗೆಯೇ ಮಾಡಿದ್ದೆ. ಆದರೆ, ಈಗ ಅದು ಬದಲಾಗಿದೆ" ಎಂದು ಹೇಳಿದರು.
"ಕಳೆದ ಪಂದ್ಯದಲ್ಲಿ ನಾವು ಫೀಲ್ಡಿಂಗ್ನಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದೆವು. ಹಲವು ಕ್ಯಾಚ್ಗಳನ್ನು ಕೈಬಿಟ್ಟಿದ್ದರಿಂದ ನಮಗೆ ತುಂಬಾ ತೊಂದರೆ ಎದುರಾಯಿತು. ಇಲ್ಲದಿದ್ದರೆ, ಪರಿಸ್ಥಿತಿ ಬೇರೆಯೇ ಇರುತ್ತಿತ್ತು" ಎಂದು ಕ್ಯಾಪ್ಟನ್ ಗಿಲ್ ಹೇಳಿದ್ದಾರೆ,(ಏಜೆನ್ಸೀಸ್).