

ಬಂಟ್ವಾಳ: ಶ್ರೀಕೃಷ್ಣನದು ಜಗತ್ತೇ ವಂದಿಸುವ ವ್ಯಕ್ತಿತ್ವ. ಮಗುವಾಗಿ, ಸ್ನೇಹಿತನಾಗಿ, ಭಗವದ್ಗೀತೆಯ ಬೋಧಕನಾಗಿ ನಮ್ಮೆಲ್ಲರಿಗೂ ಮಾರ್ಗದರ್ಶಕನಾಗಿದ್ದಾನೆ ಎಂದು ಬಂಟ್ವಾಳ ತಾಲೂಕು ಕಚೇರಿಯ ಕೇಂದ್ರ ಸ್ಥಾನೀಯ ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು ಹೇಳಿದರು.
ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಶ್ರೀಕೃಷ್ಣ ಅಷ್ಟಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಂಟ್ವಾಳ ತಾಲೂಕು ಯಾದವ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಮಾತನಾಡಿ, ಅವತಾರ ಪುರುಷರು ಜನಿಸಿದಾಗ ಮನುಕುಲವನ್ನು ರಕ್ಷಣೆ ಮಾಡುತ್ತಾರೆ. ನಾವು ಧರ್ಮ ಮಾರ್ಗದಲ್ಲಿ ನಡೆಯಬೇಕು. ದೈವತ್ವಕ್ಕೆ ಸಂಪೂರ್ಣ ಶರಣಾಗುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಉಪತಹಸೀಲ್ದಾರ್ಗಳಾದ ರಾಜೇಶ್ ನಾಯ್ಕ ಎನ್.ಎಂ, ದಿವಾಕರ ಮುಗುಳ್ಯ, ಕಂದಾಯ ನಿರೀಕ್ಷಕ ವಿಜಯ್ ಆರ್, ದ.ಕ. ಜಿಲ್ಲಾ ಯಾದವ ಸಂಘದ ಉಪಾಧ್ಯಕ್ಷ ಎಸ್.ಗೋಪಾಲ್, ದ.ಕ. ಜಿಲ್ಲಾ ಯಾದವ ಸಂಘದ ಕೋಶಾಧಿಕಾರಿ ಚಂದ್ರಶೇಖರ್ ಅಳಿಕೆ, ತಾಲೂಕು ಯಾದವ ಸಂಘದ ಪ್ರತಿನಿಧಿಗಳು, ಕಂದಾಯ ಇಲಾಖೆಯ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು.
ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಕಲಾ ಕಾರಂತ್ ಅಳಿಕೆ ಸ್ವಾಗತಿಸಿದರು. ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಜನಾರ್ದನ್ ವಂದಿಸಿದರು.