

ವಿಜಯವಾಣಿ ಸುದ್ದಿಜಾಲ ಉಡುಪಿ
ಪುತ್ತಿಗೆ ಸುಗುಣೇಂದ್ರ ಶ್ರೀಗಳು ನಮ್ಮ ಹಿರಿಯ ಅಣ್ಣ. ಅವರ ಚತುರ್ಥ ಪರ್ಯಾಯಕ್ಕೆ ತಮ್ಮನ ಸಣ್ಣ ಭೇಟಿ ಇದು. ಇಷ್ಟು ಸಾಲದು. ಶೀಘ್ರದಲ್ಲೇ ಸಂಸ್ಥಾನದೊಂದಿಗೆ ಮತ್ತೆ ಬಂದು ಮುಖ್ಯಪ್ರಾಣನ ಸನ್ನಿಧಾನದಲ್ಲಿ ಮೂಲ ರಾಮದೇವರ ಪೂಜೆ, ಜ್ಞಾನ ಕಾರ್ಯಕ್ರಮ, ರಾಯರು ಗೀತೆಯ ಕುರಿತು ಬರೆದ ಗೀತಾರ್ಥ ಸಂಗ್ರಹದ ಕಾರ್ಯಾಗಾರ, ಶ್ರೀಗಳ ಕೊಡುಗೆಗಳ ಚಿಂತನೆ, ಚರ್ಚಾಗೋಷ್ಠಿ, ಪ್ರವಚನಗಳನ್ನು ಪುತ್ತಿಗೆ ಶ್ರೀಗಳ ಪ್ರಸ್ತುತ ವಿಶ್ವಗೀತಾ ಪರ್ಯಾಯದ ಸಂದರ್ಭದಲ್ಲಿಯೇ ಆಚರಿಸಲಿದ್ದೇವೆ ಎಂದು ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.
ಉಡುಪಿ ಪುತ್ತಿಗೆ ಮಠದ ಪರ್ಯಾಯ ಸಂದರ್ಭದಲ್ಲಿ ಶ್ರೀಕೃಷ್ಣ ಮಠಕ್ಕೆ ಶುಕ್ರವಾರ ಪ್ರಥಮ ಬಾರಿಗೆ ಆಗಮಿಸಿದ್ದ ಶ್ರೀಗಳು, ಶ್ರೀಕೃಷ್ಣ- ಮುಖ್ಯಪ್ರಾಣ ದೇವರ ದರ್ಶನ ಪಡೆದು ದೇವಳದಲ್ಲಿ ಆಶೀರ್ವಚನ ನೀಡಿದರು.
ಉಡುಪಿಯು ರಜತಪೀಠಪುರವೆಂಬ ಪುರಾಣ ಪ್ರಸಿದ್ಧ ತಾಣ. ಇಲ್ಲಿನ ಕ್ಷೇತ್ರಾಧಿದೇವತೆಗಳಾದ ಚಂದ್ರಮೌಳೇಶ್ವರ, ಅನಂತೇಶ್ವರನ ದಿವ್ಯ ಸನ್ನಿಧಿಯಲ್ಲಿ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪೊಡವಿಗೊಡೆಯ ಶ್ರೀಕೃಷ್ಣನು ಈ ಕ್ಷೇತ್ರದ ಇತಿಹಾಸ, ಕಳೆಯನ್ನು ಇನ್ನಷ್ಟು ಹೆಚ್ಚಿಸಿದ್ದಾನೆ. ಈ ದಿವ್ಯ ಕ್ಷೇತ್ರವು ನಮ್ಮ ಮತಸ್ಥಾಪನಾಚಾರ್ಯರಾದ ಶ್ರೀಮದಾಚಾರ್ಯರ ಮುಖ್ಯ ಕಾರ್ಯಕ್ಷೇತ್ರವಾಗಿದೆ. ಶ್ರೀಮದಾಚಾರ್ಯರು, ಹೃಷಿಕೇಷ ತೀರ್ಥರು, ಪದ್ಮನಾಭ ತೀರ್ಥರು ಮೊದಲಾದ ಎಂಟು ಯತಿಗಳಿಗೆ ಸನ್ಯಾಸಾಶ್ರಮ ನೀಡಿದ ಪವಿತ್ರ ನೆಲವಿದು ಎಂದು ಮಂತ್ರಾಲಯ ಶ್ರೀ ಹೇಳಿದರು.
ಸನಾತನ ಧರ್ಮ, ವೈದಿಕ ಪರಂಪರೆಯ ಸದೃಢತೆಗಾಗಿ ಎಲ್ಲ ಮಠಾಧಿಪತಿಗಳು ಚಿಂತನೆ ಮಾಡಿ, ಸಮಾಜ ಒಗ್ಗೂಡಿಸಲೇಬೇಕಾದ ಅತ್ಯಾವಶ್ಯಕತೆ, ಅನಿವಾರ್ಯತೆ ಇದೆ. ನಮ್ಮ ಎಲ್ಲ ಕಾರ್ಯಗಳಿಗೂ ಧರ್ಮಸ್ಥಳದ ಮಂಜುನಾಥನನ್ನು ಸಾಕ್ಷ್ಯವಾಗಿಸಿಕೊಂಡು ವ್ಯವಹಾರ ಮಾಡುವುದುಂಟು. ಎಲ್ಲ ಸಮುದಾಯ ಒಗ್ಗೂಡಿಸುವ ನಮ್ಮ ಚಿಂತನೆಯ ಸಂದರ್ಭದಲ್ಲಿ ಮಂಜುನಾಥ ದೇವರ ಸೇವಕರಾದ, ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರೂ ಇಲ್ಲಿರುವುದು ವಿಶೇಷವಾಗಿದೆ ಎಂದು ಮಂತ್ರಾಲಯ ಶ್ರೀ ತಿಳಿಸಿದರು.
ಕೃಷ್ಣನ ನೆನಪು ಸದಾ ಇರುವಂತಾಗಲು ರಾಯರು ಉಡುಪಿ ಕೃಷ್ಣನ ಉತ್ಸವ ಮೂರ್ತಿಯ ಮಾದರಿಯಲ್ಲಿ ಸಣ್ಣದಾದ ಸ್ವರ್ಣ ಮೂರ್ತಿಯನ್ನು ಇಲ್ಲಿಂದಲೇ ಮಾಡಿಸಿ ಮಂತ್ರಾಲಯಕ್ಕೆ ಒಯ್ದಿದ್ದರು. ಅದು ಇಂದಿಗೂ ನಿತ್ಯ ಪೂಜೆಗೊಳ್ಳುತ್ತಿದೆ. ಹೀಗಾಗಿ ಉಡುಪಿಗೂ ಮಂತ್ರಾಲಯಕ್ಕೂ ವಿಶೇಷ ಸಂಬಂಧವಿದ್ದು, ಅದು ಕಾಲಕಾಲಕ್ಕೂ ಬೆಳೆದುಬರುತ್ತಿದೆ. | ಸುಬುಧೇಂದ್ರ ತೀರ್ಥ ಶ್ರೀಪಾದರು. ಮಂತ್ರಾಲಯ