

ತಮಿಳಿನಲ್ಲಿ ಸಿಲ್ಕ್ ಸ್ಮಿತಾ ಕುರಿತು ಒಂದು ಬಯೋಪಿಕ್ ನಿರ್ಮಾಣವಾಗಲಿದೆ ಮತ್ತು ಸಿಲ್ಕ್ ಆಗಿ ಅನುಸೂಯ ಭಾರದ್ವಾಜ್ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೆಲವು ತಿಂಗಳುಗಳ ಹಿಂದೆ ಕೇಳಿಬಂದಿತ್ತು. ಇದೀಗ ಅದರಲ್ಲೊಂದು ಬದಲಾವಣೆಯಾಗಿದ್ದು, ಅನುಸೂಯ ಬದಲು ವಿವಾದಿತ ನಟಿ ಶ್ರೀರೆಡ್ಡಿ, ಸಿಲ್ಕ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಹಾಗಂತ ಶ್ರೀರೆಡ್ಡಿ ಘೋಷಿಸಿದ್ದು, ಸಿಲ್ಕ್ ಸ್ಮಿತಾ ಮತ್ತು ತಮ್ಮ ಬ್ಲಾಕ್ ಆಂಡ್ ವೈಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಮಧು ಎನ್ನುವವರು ನಿರ್ದೇಶಿಸುತ್ತಿರುವುದಾಗಿ ಹೇಳಿದ್ದಾರೆ. ‘ಈ ಬಯೋಪಿಕ್ನಲ್ಲಿ ಹಲವರು ಜನಪ್ರಿಯ ನಟ-ನಟಿಯರು ಕಾಣಿಸಿಕೊಳ್ಳುತ್ತಿದ್ದು, ಇನ್ನೊಂದು ವಿಡಿಯೋದಲ್ಲಿ ಅವರ ಹೆಸರುಗಳನ್ನು ತಿಳಿಸುತ್ತೇನೆ’ ಎಂದಿದ್ದಾರೆ. ಈ ಚಿತ್ರ ತಮಿಳು-ತೆಲುಗಿನಲ್ಲಿ ಬಿಡುಗಡೆಯಾಗಲಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.