

ಶಿರಸಿ: ತಾಲೂಕಿನಲ್ಲಿ 10ಕ್ಕೂ ಅಧಿಕ ಶಾಲೆಗಳಲ್ಲಿ ಮಕ್ಕಳ ಕೊರತೆ ಉಂಟಾಗಿದೆ. ಯಡಳ್ಳಿ ಪ್ರೌಢ ಶಾಲೆ, ದೇವಿಮನೆ ಶಾಲೆ ಹಾಗೂ ಕುಪ್ಪಳ್ಳಿ ಶಾಲೆಗೆ ವಿದ್ಯಾರ್ಥಿಗಳು ಇದುವರೆಗೂ ಬಂದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾಹಿತಿ ನೀಡಿದರು.
ನಗರದಲ್ಲಿ ಮಂಗಳವಾರ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಇನ್ನೂ ಕೆಲ ದಿನ ಮಕ್ಕಳ ನಿರೀಕ್ಷೆ ಮಾಡಿ, ವಿದ್ಯಾರ್ಥಿಗಳ ಕೊರತೆ ಇದ್ದಲ್ಲಿ ಹತ್ತಿರದ ಶಾಲೆಗೆ ಜೋಡಿಸಲಾಗುವುದು. ಕಾನಮುಷ್ಕಿಯಲ್ಲಿ ಈ ವರ್ಷ ಮಕ್ಕಳ ಸಂಖ್ಯೆ 5ಕ್ಕೆ ಏರಿದ್ದರಿಂದ ಮುಚ್ಚಲಾಗಿದ್ದ ಶಾಲೆ ಪುನರಾರಂಭಗೊಂಡಿದೆ. ಮ್ಕಕಳ ಕೊರತೆ ಇರುವ ಶಾಲೆಯ ಸಮೀಪದ ಅಂಗನವಾಡಿಗಳಿಂದ ಅಂಗನವಾಡಿ ವಯಸ್ಸು ದಾಟಿದ ಮಕ್ಕಳ ಮಾಹಿತಿ ಪಡೆದು ಅವರನ್ನು ದಾಖಲಿಸಲಾಗುತ್ತಿದೆ. ತಾಲೂಕಿನಲ್ಲಿ 66 ಶಾಲೆಗಳ ಕೊಠಡಿಗಳ ತುರ್ತು ರಿಪೇರಿ ಆಗಬೇಕಿದೆ. ಈ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 14 ಶಾಲೆಗಳು ನೂರರ ಫಲಿತಾಂಶ ಸಾಧನೆ ಮಾಡಿವೆ. ತಾಲೂಕಿನ 24 ವಿದ್ಯಾರ್ಥಿಗಳು ರಾಜ್ಯದ ಎಸ್ ಎಸ್ ಎಲ್ ಸಿ ಟಾಪ್ 10 ಪಟ್ಟಿಯಲ್ಲಿದ್ದಾರೆ. ಶಾಲೆಗಳಿಗೆ ಶೆ. 72 ರಷ್ಟು ಪುಸ್ತಕ ಪೂರೈಕೆ ಆಗಿದೆ ಎಂದರು.
ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ ಮಾತನಾಡಿ, ಪಶು ಸಂಗೋಪನಾ ಇಲಾಖೆಯಲ್ಲಿ ಸಾಕಷ್ಟು ಜನಪರ ಯೋಜನೆಗಳಿವೆ. ರೈತರಿಗೆ ಯೋಜನೆ ಮಾಹಿತಿ ತಲುಪಿಸಲು ಇನ್ನಷ್ಟು ಪ್ರಚಾರದ ಕಾರ್ಯ ಇಲಾಖೆಯಿಂದ ಆಗಬೇಕಿದೆ ಎಂದರು.
ತಾ ಪಂ ಆಡಳಿತಾಧಿಕಾರಿ ಬಿ.ಪಿ. ಸತೀಶ, ಇತರರಿದ್ದರು.
ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಭಟ್ ಕಣ್ಣಿ ಮಾತನಾಡಿ, ತಾಲೂಕಿನಲ್ಲಿ ಕೆಲ ದಿನಗಳಿಂದ ತೀವ್ರವಾಗಿದ್ದ ಶಂಕಿತ ಡೆಂಘ ಪ್ರಕರಣಗಳ ಸಂಖ್ಯೆ ಕಳೆದ ನಾಲ್ಕು ದಿನಗಳಿಂದ ಇಳಿಮುಖವಾಗಿದೆ. ಈಗಾಗಲೇ ತಾಲೂಕಿನ ಎಲ್ಲೆಡೆ ಸಂಚರಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ. ಖಾಸಗಿ ಬ್ಯಾಂಕ್ ಉದ್ಯೋಗಿಯೊಬ್ಬರು ಡೆಂಘಯಿಂದ ಮೃತಪಟ್ಟ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಡೆಂಘ ಶಂಕಿತ 53 ಜನರ ರಕ್ತ ಮಾದರಿಯನ್ನು ಪರೀಕ್ಷೆಗೆ ಕಾರವಾರಕ್ಕೆ ಕಳಿಸಿದ್ದೇವೆ. ತಲೆನೋವು, ಬೆನ್ನು ನೋವು, ಭೇದಿ ಪ್ರಕರಣಗಳು ತಾಲೂಕಿನಲ್ಲಿ ಜಾಸ್ತಿ ವರದಿ ಆಗುತ್ತಿದೆ. ಅನಾರೋಗ್ಯಕ್ಕೆ ಒಳಗಾದವರು ಜ್ವರ ಕಡಿಮೆ ಆದ ಮೇಲೂ ವಿಶ್ರಾಂತಿ ಮಾಡಬೇಕು ಎಂದರು.