ಸಿಜೆಐ ಮೇಲೆ ಬೂಟು ಎಸೆದ ಪ್ರಕರಣ, ಮುಸ್ಲಿಂ ನಾಯಕರಿಂದ ತೀವ್ರ ಖಂಡನೆ, ಬಂದ್ ಆಚರಣೆಗೆ ಎಂಎಂಡಿಸಿ ಸಂಪೂರ್ಣ ಬೆಂಬಲ

MMDC PRESSMEET
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಮೈನಾರಿಟಿ ಮುಸ್ಲಿಂ ಡೆವಲೆಪ್‌ಮೆಂಟ್ ಕಮೀಟಿ (ಎಂಎಂಡಿಸಿ ) ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಜೈನುಲ್ಲಾದಿದೀನ್ ಹಾಸ್ಮಿ, ಬಿ.ಎಸ್. ಮಹಾಬರಿ, ಎಲ್.ಎಲ್. ಉಸ್ತಾದ್ ಮತ್ತಿತರರಿದ್ದಾರೆ.
Published on

ವಿಜಯಪುರ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಬೂಟು ಎಸೆದ ಪ್ರಕರಣ ಖಂಡಿಸಿ ಅ. 16 ರಂದು ಕರೆ ನೀಡಲಾಗಿರುವ ಬಂದ್‌ಗೆ ಮೈನಾರಿಟಿ ಮುಸ್ಲಿಂ ಡೆವಲೆಪ್‌ಮೆಂಟ್ ಕಮೀಟಿ (ಎಂಎಂಡಿಸಿ ) ಸಂಪೂಣ ಬೆಂಬಲ ನೀಡಲಿದೆ ಎಂದು ಕಮೀಟಿಐ ಪ್ರಮುಖರು ಒಕ್ಕೋರಲಿನಿಂದ ತಿಳಿಸಿದರು.

ಪ್ರಕರಣದ ವಿಚಾರಣೆಯೊಂದರ ವೇಳೆ ವಕೀಲ ಕಿಶೋರ್ ರಾಕೇಶ ಎಂಬಾತ ಸಿಜೆಐ ಬಿ.ಆರ್. ಗವಾಯಿ ಅವರ ಮೇಲೆ ಬೂಟು ಎಸೆಯುವ ಮೂಲಕ ವಿಕೃತ ಮನಃಸ್ಥಿತಿಯನ್ನು ಪ್ರದರ್ಶಿಸಿದ್ದಾನೆ. ಅಲ್ಲದೇ ಈ ದೇಶದ ಸರ್ವೋಚ್ಛ ನಾಯಾಂಗ ವ್ಯವಸ್ಥೆಗೆ ಅವಮಾನಿಸಿದ್ದಾರೆ. ಸಂವಿಧಾನ ವಿರೋಧಿ ಮನಃಸ್ಥಿತಿ ಹೊರಹಾಕಿದ್ದಾನೆ. ಕೂಡಲೇ ತಪ್ಪಿತಸ್ಥ ವಕೀಲನ ಮೇಲೆ ಕ್ರಮ ಕೈಗೊಳ್ಳುವ ಮೂಲಕ ಅಂಥ ಮನಃಸ್ಥಿತಿಗಳನ್ನು ಮಟ್ಟ ಹಾಕಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

ಹಾಸಿಂಪೀರ್ ದರ್ಗಾದ ಪ್ರಮುಖರೂ ಆಗಿರುವ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಜೈನುಲ್ಲಾದಿದೀನ್ ಹಾಸ್ಮಿ ಮಾತನಾಡಿ, ಸುಪ್ರೀಂ ಕೋರ್ಟ್ ಎಂಬುದು ಈ ದೇಶದ ಪವಿತ್ರ ದೇವಾಲಯ. ಸಂವಿಧಾನದ ಪ್ರಮುಖ ಅಂಗ. ಅಂಥ ಪವಿತ್ರವಾದ ಪೀಠದ ಮೇಲೆ ಬೂಟು ಎಸೆದಿರುವುದು ಅಕ್ಷಮ್ಯ ಅಪರಾಧ. ಇದು ಕೇವಲ ಒಂದು ಕೃತವಲ್ಲ; ದೇಶದ್ರೋಹಿ ಮತ್ತು ಸಂವಿಧಾನ ವಿರೋಧಿ ಮನಃಸ್ಥಿತಿಯ ಪ್ರತೀಕ ಎಂದರು.

ಮುಖಂಡ ಎಲ್.ಎಲ್. ಉಸ್ತಾದ್ ಮಾತನಾಡಿ, ಈ ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರು ಬದುಕುವುದೇ ದುಸ್ತರವಾಗಿದೆ. ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ದಲಿತರೆಂಬ ಕಾರಣಕ್ಕಾಗಿಯೇ ಅವರತ್ತ ಬೂಟು ಎಸೆಯಲಾಗಿದೆ. ಏಕೆಂದರೆ ಈ ದೇಶದಲ್ಲಿ ದಲಿತರು ಉನ್ನತ ಸ್ಥಾನಗಳಲ್ಲಿರುವುದನ್ನು ರಾಕೇಶ ಕಿಶೋರ್ ಅವರಂಥ ಮನಃಸ್ಥಿತಿಯುಳ್ಳವರು ಸಹಿಸುವುದಿಲ್ಲ. ಇಂಥ ಮನಃಸ್ಥಿತಿಗಳ ವಿರುದ್ಧ ಅಹಿಂದ ವರ್ಗ ಒಗ್ಗಟ್ಟಾಗಿ ಹೋರಾಡದಿದ್ದರೆ ಭವಿಷ್ಯದಲ್ಲಿ ಉಳಿಗಾಲವಿಲ್ಲ ಎಂದರು.

ಕೇವಲ ಐ ಲವ್ ಮಹ್ಮದ್ ಎಂದು ಪೋಸ್ಟ್ ಹಾಕಿದವರ ಮೇಲೆ ಕೇಸ್ ಹಾಕಿ ಜೈಲಿಗಟ್ಟು ಬಿಜೆಪಿಗರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ ಮೇಲೆಯೇ ಬೂಟು ಎಸೆದರೂ ಕ್ರಮ ಕೈಗೊಳ್ಳದಿರುವುದು ಏಕೆ? ಆ ನ್ಯಾಯ ಮೂರ್ತಿ ದಲಿತನೆಂಬ ಕಾರಣಕ್ಕಾಗಿಯೇ? ಭಾರತದಲ್ಲಿಯೂ ನೇಪಾಳ ಮಾದರಿಯಲ್ಲಿ ಜನ ದಂಗೆ ಎದ್ದು ಹೋರಾಡಬೇಕು ಎಂದು ಹರಿಹಾಯ್ದರಲ್ಲದೇ ಕೂಡಲೇ ತಪ್ಪಿತಸ್ಥ ವಕೀಲನನ್ನು ಜೈಲಿಗೇರಿಸಬೇಕೆಂದು ಒತ್ತಾಯಿಸಿದರು.

ಮುಖಂಡ ಬಿ.ಎಸ್. ಮಹಾಬರಿ ಹಾಗೂ ವಕೀಲ ಮಹ್ಮದ್‌ಪಟೇಲ್ ಬಗಲಿ ಮಾತನಾಡಿ, ಅ. 16 ರಂದು ನಡೆಯಲಿರುವ ಬಂದ್‌ನಲ್ಲಿ ಎಲ್ಲ ದೇಶ ಪ್ರೇಮಿಗಳು ಪಾಲ್ಗೊಳ್ಳಬೇಕು. ಸಂವಿಧಾನದ ಪರ ಇರುವ, ಸಂವಿಧಾನವನ್ನು ಗೌರವಿಸುವ, ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವ ಇರುವವರು ಈ ಬಂದ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮುಖಂಡ ರಫೀಕ್ ಖಾಣೆ ಮಾತನಾಡಿ, ದಲಿತರು, ಮುಸ್ಲಿಂರು ಬದುಕುವ ಸ್ಥಿತಿ ದೇಶದಲ್ಲಿಲ್ಲ. ಈ ಸರ್ಕಾರ ಶೋಷಿತ ವರ್ಗಕ್ಕೆ ಏನು ಬೇಕಾದರೂ ಮಾಡಬಹುದು. ಯಾವುದಕ್ಕೂ ಹೇಸಲ್ಲ. ದೇಶದಲ್ಲಿ ಹಿಂಸಾಚಾರ, ಅರಾಜಕತೆ ಸೃಷ್ಠಿಯಾಗುತ್ತಿದೆ. ಸಹೋದರತೆಯ ಭಾವ ಅಳಿಸುವ ಹುನ್ನಾರ ನಡೆದಿದೆ. ನ್ಯಾಯಾಧೀಶರಿಗೆ ಚಪ್ಪಲಿ ಎಸೆಯುವ ಮಟ್ಟಕ್ಕೆ ಸ್ಥಿತಿ ನಿರ್ಮಾಣವಾಗಿದೆ ಎಂದರೆ ದೇಶದ ಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಮುಖಂಡರಾದ ಎ.ಎಂ. ತಾಂಬೋಳಿ, ಹಾಫೀಸ್ ಸಿದ್ದಕಿ, ಹಿದಾಯತ್ ಮಾಶ್ಯಾಳಕರ, ಮುಸ್ತಫಾ ಆಲಮೇಲ್, ಇರ್ಫಾನ್ ಶೇಖ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net