

ಲಖನೌ: ಶಾಲೆಗೆ ಮಾಂಸಹಾರ ತಂದಿದ್ಯಾ ಎಂದು ಆರೋಪಿಸಿ ಪ್ರಾಂಶುಪಾಲನೋರ್ವ ಮುಸ್ಲಿಂ ವಿದ್ಯಾರ್ಥಿಯನ್ನು ಸ್ಕೂಲ್ನಿಂದ ಅಮಾನತು ಮಾಡಿರುವ ಘಟನೆ ಉತ್ತರಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಅಮ್ರೋಹಾದ ಹಿಲ್ಟನ್ ಪಬ್ಲಿಕ್ ಸ್ಕೂಲ್ನಲ್ಲಿ ಈ ಘಟನೆ ನಡೆದಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಪ್ರಾಂಶುಪಾಲರು ಮತ್ತು ಮಗುವಿನ ತಾಯಿ ನಡುವೆ ತೀವ್ರ ವಾಗ್ವಾದ ನಡೆದಿರುವುದನ್ನು ನೋಡಬಹುದಾಗಿದೆ. ಎಲ್ಲರಿಗೂ ನಾನ್ ವೆಜ್ ತಿನ್ನಿಸಿ ಅವರನ್ನು ಇಸ್ಲಾಂಗೆ ಪರಿವರ್ತಿಸುವ ಬಗ್ಗೆ ಬಾಲಕ ಮಾತನಾಡಿದ್ದಾನೆ ಎಂದು ಪ್ರಾಂಶುಪಾಲರು ಆರೋಪಿಸಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಯ ತಾಯಿ ತನ್ನ ಮಗನು ಶಾಲೆಗೆ ಮಾಂಸಹಾರ ತಂದಿಲ್ಲ. ಆತ ತಂದಿರುವುದು ಶುದ್ಧ ಸಸ್ಯಾಹಾರಿ ಎಂದು ಹೇಳುತ್ತಿರುವುದು ನೋಡಬಹುದಾಗಿದೆ. ಇದಕ್ಕೆ ಉತ್ತರಿಸಿದ ಪ್ರಾಂಶುಪಾಲ ನಿಮ್ಮ ಮಗ ಶಾಲೆಗೆ ತಂದಿರುವುದು ನಾನ್ವೆಜ್ ಊಟ. ಆತ ಎಲ್ಲರಿಗೂ ನಾನ್ವೆಜ್ ತಿನ್ನಿಸಿ ಇಸ್ಲಾಂಗೆ ಮತಾಂತರಿಸಲು ಮುಂದಾಗಿದ್ದಾನೆ. ಆತನ ಮಾತನ್ನು ಕೇಳಿಕೊಂಡು ಹಿಂದೂ ದೇವಾಲಯಗಳನ್ನು ಕೆಡವಲು ವಿದ್ಯಾರ್ಥಿಗಳು ಬಯಸುತ್ತಿದ್ದಾರೆ.
ನಮ್ಮ ದೇವಾಲಯಗಳನ್ನು ಒಡೆಯುವ, ಶಾಲೆಗೆ ಮಾಂಸಾಹಾರಿ ಆಹಾರವನ್ನು ತರುವ, ಹಿಂದೂಗಳಿಗೆ ಹಾನಿ ಮಾಡುವ ಮತ್ತು ಎಲ್ಲಾ ಹಿಂದೂಗಳನ್ನು ಮತಾಂತರಿಸುವ ಮತ್ತು ರಾಮಮಂದಿರವನ್ನು ಕೆಡವಲು ಬಯಸುವ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯಲ್ಲಿ ನಾವು ಪಾಠ ಕಲಿಸುವುದಿಲ್ಲ. ಹೀಗಾಗಿ ನಿಮ್ಮ ಮಗನನ್ನು ಶಾಲೆಯಿಂದ ಅಮಾನತು ಮಾಡಿದ್ದೇವೆ ಎಂದು ಹೇಳುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಮ್ರೋಹಾ ಜಿಲ್ಲಾ ಶಿಕ್ಷಣಾಧಿಕಾರಿ ಮೂರು ಜನರ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶಿಸಿದ್ದು, ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.