

ಬುಡಾಪೆಸ್ಟ್: ರಾಷ್ಟ್ರೀಯ ದಾಖಲೆವೀರ ಅವಿನಾಶ್ ಸಾಬ್ಲೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಪುರುಷರ 3000 ಮೀ. ಸ್ಟೀಪಲ್ಚೇಸ್ ಸ್ಪರ್ಧೆಯಲ್ಲಿ ಫೈನಲ್ಗೇರಲು ವಿಫಲರಾಗಿದ್ದಾರೆ. ಮೊದಲ ದಿನದ ಸ್ಪರ್ಧೆಗಳಲ್ಲಿ ಭಾರತದ ಇತರ ಅಥ್ಲೀಟ್ಗಳೂ ನಿರಾಸೆ ಮೂಡಿಸಿದರು.
ಮಹಾರಾಷ್ಟ್ರದ 28 ವರ್ಷದ ಸೈನಿಕ ಅವಿನಾಶ್ ಸಾಬ್ಳೆ ಕೂಟದ ಮೊದಲ ದಿನವಾದ ಶನಿವಾರ ನಡೆದ ಸ್ಪರ್ಧೆಯ ಹೀಟ್ಸ್ನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಗ್ರ ಐವರು ಮಾತ್ರ ಫೈನಲ್ ಪ್ರವೇಶಿಸಿದರು. ಅವಿನಾಶ್ 8 ನಿಮಿಷ, 22.24 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದರು. 2,300 ಮೀ.ವರೆಗೆ ಮುನ್ನಡೆಯಲ್ಲಿದ್ದ ಅವಿನಾಶ್ ನಂತರ ಲಯ ಕಳೆದುಕೊಂಡರು. ಅದರಲ್ಲೂ ಕೊನೇ ಸುತ್ತಿನಲ್ಲಿ ನಿರಾಸೆ ಮೂಡಿಸಿದ ಅವರು, ತನ್ನ ರಾಷ್ಟ್ರೀಯ ದಾಖಲೆಗಿಂತ (8ನಿ, 11.20 ಸೆ) ಕಳಪೆ ನಿರ್ವಹಣೆ ತೋರಿದರು. ಕಳೆದ ವರ್ಷದ ಕೂಟದಲ್ಲಿ ಫೈನಲ್ಗೇರಿದ್ದ ಅವಿನಾಶ್ ಈ ಬಾರಿಯೂ ಅದನ್ನು ಪುನರಾವರ್ತಿಸುವ ನಿರೀೆ ಇತ್ತು. ಇದಕ್ಕಾಗಿ ವಿದೇಶದಲ್ಲೂ ತರಬೇತಿ ಪಡೆದಿದ್ದರು. ಆದರೆ ಫೈನಲ್ ಸ್ಪರ್ಧೆಗೆ ಹೆಚ್ಚಿನ ಶಕ್ತಿ ಕಾಯ್ದುಕೊಳ್ಳುವ ಕಾರ್ಯತಂತ್ರದೊಂದಿಗೆ ಓಡಿದ ಅವಿನಾಶ್ ಹೀಟ್ಸ್ನಲ್ಲೇ ಎಡವಟ್ಟು ಮಾಡಿಕೊಂಡರು.
ದಿನದ ಮೊದಲ ಸ್ಪರ್ಧೆಯಾದ ಪುರುಷರ 20 ಕಿಲೋಮೀಟರ್ ನಡಿಗೆ ಸ್ಪರ್ಧೆಯಲ್ಲಿ ಭಾರತದ ವಿಕಾಸ್ ಸಿಂಗ್ 1 ಗಂಟೆ, 21ನಿಮಿಷ 58 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ 28ನೇ ಸ್ಥಾನ ಪಡೆದರು. ಪರಂಜೀತ್ ಸಿಂಗ್ (1 ಗಂಟೆ, 24 ನಿಮಿಷ, 02ಸೆಕೆಂಡ್) ಮತ್ತು ಆಕಾಶ್ದೀಪ್ ಸಿಂಗ್ (1 ಗಂಟೆ, 31 ನಿಮಿಷ, 12 ಸೆಕೆಂಡ್) ಕ್ರಮವಾಗಿ 35 ಮತ್ತು 47ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಶೈಲಿ ಸಿಂಗ್ಗೆ 24ನೇ ಸ್ಥಾನ
ಮಾಜಿ ಲಾಂಗ್ ಜಂಪ್ ತಾರೆ ಅಂಜು ಬಾಬಿ ಜಾರ್ಜ್ ಅವರ ಶಿಷ್ಯೆಯಾಗಿರುವ ಶೈಲಿ ಸಿಂಗ್ ಅರ್ಹತಾ ಸುತ್ತಿನಲ್ಲೇ ನಿರಾಸೆ ಅನುಭವಿಸಿ 24ನೇ ಸ್ಥಾನಕ್ಕೆ ತೃಪ್ತಿಪಟ್ಟರು. 19 ವರ್ಷದ ಶೈಲಿ ಸಿಂಗ್ ಗರಿಷ್ಠ 6.40 ಮೀಟರ್ ಹಾರಿ ಅರ್ಹತಾ ಸುತ್ತಿನ ಬಿ ಗುಂಪಿನ 18 ಸ್ಪರ್ಧಿಗಳಲ್ಲಿ 14ನೇ ಸ್ಥಾನ ಪಡೆದರು. 6.76 ಮೀ. ಹಾರಿರುವ ವೈಯಕ್ತಿಕ ಶ್ರೇಷ್ಠ ದಾಖಲೆ ಹೊಂದಿರುವ ಶೈಲಿ ಸಿಂಗ್, ಮೊದಲ ಯತ್ನದಲ್ಲಿ 6.26 ಮೀ. ಹಾರಿದರೆ, ಮುಂದಿನ 2 ಯತ್ನಗಳಲ್ಲಿ 6.40 ಮೀ. ಮತ್ತು 6.30 ಮೀ. ಹಾರಿದರು. 6.80 ಮೀ. ಹಾರಿದವರು ಮತ್ತು ಅಗ್ರ 12ರಲ್ಲಿ ಸ್ಥಾನ ಪಡೆದವರು ಮಾತ್ರ ಫೈನಲ್ಗೆ ಅರ್ಹತೆ ಪಡೆದರು.