

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ 12 ಕಡೆ ಲೋಕಾಯುಕ್ತ ಅಧಿಕಾರಿಗಳು(Lokayukta Raids) ದಾಳಿ ನಡೆಸಿದ್ದಾರೆ.
ಬೆಂಗಳೂರು, ಹಾಸನ, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಅಕ್ರಮ ಆಸ್ತಿಗಳಿಸಿದ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ದಾವಗೆರೆ ಜಿಲ್ಲೆಯ ರಾಣೆಬೆನ್ನೂರ ಪಟ್ಟಣದ ಚೋಳಮರಡೇಶ್ವರ ನಗರದ ನಿವಾಸಿ ಸವಣೂರ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿಡೇನೂರ ಹಾಗೂ ಸಿದ್ದೇಶ್ವರ ನಗರದ ನಿವಾಸಿ ರಾಣೆಬೆನ್ನೂರ ಕಂದಾಯ ನಿರೀಕ್ಷಕ ಅಶೋಕ ಅರಳೇಶ್ವರ ಮನೆ ಮೇಲೆ ದಾಳಿಯಾಗಿದೆ.ದಾವಣಗೆರೆ ಹಾಗೂ ಹಾವೇರಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಮನೆಯಲ್ಲಿರುವ ದಾಖಲಾತಿ, ಚಿನ್ನಾಭರಣ ಹಾಗೂ ನಗದು ಪರಿಶೀಲನೆ ನಡೆಸುತ್ತಿದ್ದಾರೆ.
ಇಬ್ಬರ ಮನೆಯಲ್ಲೂ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ಸೈಟು, ಜಮೀನು ಸೇರಿದಂತೆ ಅಕ್ರಮವಾಗಿ ಖರೀದಿಸಿದ ದಾಖಲಾತಿ ದೊರೆತಿದ್ದು, ಅಧಿಕಾರಿಗಳು ಪರೀಶಿಲನೆ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ, ಪಿಐ ಮಂಜುನಾಥ್ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.