ಶ್ರದ್ಧಾ ಕೇಂದ್ರಗಳ ರಕ್ಷಣೆ ಜವಾಬ್ದಾರಿ, ಉಡುಪಿಯಲ್ಲಿ ಸಚಿವೆ ಶೋಭಾ ಹೇಳಿಕೆ

Shobha Karadlaze 1
Published on

ಉಡುಪಿ: ದೇವಸ್ಥಾನ, ಮಸೀದಿ, ಚರ್ಚುಗಳು ನಮ್ಮ ಶ್ರದ್ಧಾ ಕೇಂದ್ರಗಳು. ಇವುಗಳ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ರಾಜ್ಯದಲ್ಲಿ ದೇಗುಲ ಧ್ವಂಸ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಸ್ಥಳದಲ್ಲಿ ಶ್ರದ್ಧಾಕೇಂದ್ರಗಳಿದ್ದರೆ ಪೂರ್ವ ಸೂಚನೆ ನೀಡಬೇಕು. ಸ್ಥಳೀಯ ಜನರ ಮನವೊಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಮಾಡುವ ಬಗ್ಗೆ ಸರ್ಕಾರ ಯೋಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶ್ರದ್ಧಾ ಕೇಂದ್ರಗಳ ಬಗ್ಗೆ ಜನರ ನಂಬಿಕೆ, ಭಕ್ತಿ ಭಾವ ಪ್ರೀತಿ ಸಹಜವಾಗಿ ಹೆಚ್ಚಿರುತ್ತದೆ. ಭಾವನೆಗೆ ನೋವುಂಟಾದಲ್ಲಿ ಪ್ರತಿಭಟನೆ ನಡೆಸುತ್ತಾರೆ. ಯಾವುದೇ ಸಮುದಾಯ- ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ, ಅಕ್ರಮ ದೇವಾಲಯ ಕಂಡು ಬಂದರೆ ಊರಿನ ಜನರ ಮನವೊಲಿಸಿ ಮುಂದಿನ ಕ್ರಮ ಕೈಗೊಳ್ಳಿ ಇದು ರಾಜ್ಯ ಸರ್ಕಾರಕ್ಕೆ ನನ್ನ ಮನವಿ ಎಂದರು.

ಕರಾವಳಿ ಜಿಲ್ಲೆಗಳಲ್ಲಿ ಮಿಷನರಿಗಳಿಂದ ಮತಾಂತರ ಪ್ರಕರಣಗಳು ವರದಿಯಾಗುತ್ತಿರುವುದಕ್ಕೆ ಸಂಬಂಧಿಸಿ ಉತ್ತರಿಸಿದ ಸಚಿವೆ, ಕರಾವಳಿ ಮಾತ್ರವಲ್ಲದೆ, ದೇಶದಾದ್ಯಂತ ಕ್ರಿಶ್ಚಿಯನ್ ಮಿಷನರಿಗಳಿಂದ ಮತಾಂತರ ನಡೆಯುತ್ತಿದೆ. ಮತಾಂತರ ಕುರಿತ ಕಾನೂನು ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಬೇರೆ-ಬೇರೆ ರೀತಿಯ ಸೇವಾ ಚಟುವಟಿಕೆಯಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ. ದೇಶದ ರಕ್ಷಣೆ ಮತ್ತು ಗೌರವ ಹೆಚ್ಚಿಸಲು ದೇವರು ಅವರಿಗೆ ಶಕ್ತಿ ನೀಡಲಿ. ಕೃಷ್ಣ ಚಾಮುಂಡೇಶ್ವರಿ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಶೋಭಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net