

ಬೆಂಗಳೂರು:ನಿಗದಿಗಿಂತ ಅಧಿಕ ಪ್ರಮಾಣದಲ್ಲಿ ಜಲ್ಲಿ, ಸೈಜುಗಲ್ಲು, ಮರಳು ಮತ್ತು ಎಂ.ಸ್ಯಾಂಡ್ ಸಾಗಿಸುವ ವಾಹನಗಳಿಗೆ ಸಮಪರ್ಕವಾಗಿ ದಂಡ ವಿಧಿಸದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಮಂಗಳವಾರ ತರಾಟೆಗೆ ತೆಗೆದುಕೊಂಡರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ದಿಶಾ ಸಭೆಯಲ್ಲಿ ಅಧಿಕಾರಿಗಳ ಕರ್ತವ್ಯ ಲೋಪದಿಂದಾಗಿ ಸರ್ಕಾರಕ್ಕೆ ಸಂದಾಯವಾಗಬೇಕಿದ್ದ ರಾಜಸ್ವ ಖೋತಾವಾಗುತ್ತಿದೆ. ನಿಯಮ ಉಲ್ಲಂಘಿಸಿದ ಲಾರಿಗಳಿಗೆ ಜಿಲ್ಲಾಧಿಕಾರಿಯವರೇ ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ. ಆದರೆ, ನೀವು ದಂಡ ಹಾಕಲು ಮೀನಾಮೇಷ ಎಣಿಸುತ್ತಿರುವುದೇಕೆ? ಎಂದು ಕೇಂದ್ರ ಸಚಿವೆ, ಅಧಿಕಾರಿಗಳನ್ನು ಪ್ರಶ್ನಿಸಿದರು. ಇನ್ನೂಮುಂದೆ ಮಿತಿಮೀರಿ ಲೋಡ್ ಸಾಗಿಸುವ ವಾಹನಗಳಿಗೆ ಮುಲಾಜಿಲ್ಲದೆ ದಂಡ ಹಾಕಬೇಕು. ಆದಾಯ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅಕ್ಕಿ ಏಕೆ ನೀಡುತ್ತಿಲ್ಲ?
‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ’ ಯೋಜನೆಯಡಿ ಬಿಪಿಎಲ್ ಫಲಾನುಭವಿಗಳಿಗೆ 5 ಕೆಜಿ ಅಕ್ಕಿ ಮಾತ್ರ ನೀಡಬೇಕು. ಯಾವುದೇ ಕಾರಣಕ್ಕೂ ಪಡಿತರದಾರರಿಗೆ ಅಕ್ಕಿಯೊಂದಿಗೆ ರಾಗಿ ನೀಡಬಾರದು. ಕೇಂದ್ರದಿಂದ ಉಚಿತವಾಗಿ ಅಕ್ಕಿ ನೀಡುತ್ತಿದೆ. ರಾಗಿ ಏಕೆ ವಿತರಣೆ ಮಾಡುತ್ತಿದ್ದೀರಾ ಎಂದು ಆಹಾರ ಇಲಾಖೆ ಅಧಿಕಾರಿಗಳನ್ನು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು. ಇದಕ್ಕೆ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿ, ಫಲಾನುಭವಿಗಳಿಗೆ ಅಕ್ಕಿ ಮಾತ್ರ ನೀಡಬೇಕು ಎಂಬುದರ ಬಗ್ಗೆ ಕೇಂದ್ರದ ನಿಯಮವಿಲ್ಲ. ‘ಆಹಾರ ಧಾನ್ಯ’ ಎಂದು ಹೇಳಿದೆ. ಆದರೆ, ಅಕ್ಕಿಯನ್ನೇ ಮಾತ್ರ ಕೊಡಬೇಕೆಂದು ಹೇಳಿಲ್ಲ. ಅದರಂತೆ, ಬಿಪಿಎಲ್ ಮತ್ತು ಅಂತ್ಯೋದಯ ಫಲಾನುಭವಿಗಳಿಗೆ ಅಕ್ಕಿ,ರಾಗಿ ನೀಡುತ್ತಿದ್ದೇವೆ.ಉತ್ತರ ಕರ್ನಾಟಕದ ವ್ಯಾಪ್ತಿಯಲ್ಲಿ ಅಕ್ಕಿ ಜೊತೆಗೆ ಜೋಳವನ್ನು ನೀಡುತ್ತಿದ್ದೇವೆ. ರಾಜ್ಯದ ಅನ್ನಭಾಗ್ಯ ಯೋಜನೆಯಡಿ ಕಾರ್ಡ್‌ದಾರರಿಗೆ ಬರೀ ಅಕ್ಕಿ ಮಾತ್ರ ನೀಡಲಾಗುತ್ತಿದೆ. ಅಕ್ಕಿ ಮಾತ್ರ ನೀಡುವಂತೆ ರಾಜ್ಯದ ನಿಯಮವಿದೆ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು. ಈ ಉತ್ತರಕ್ಕೆ ತೃಪ್ತಿಯಾಗದ ಸಚಿವೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಗಮನಕ್ಕೆ ತರುವುದಾಗಿ ಹೇಳಿದರು.
ಖೋಲೋ ಇಂಡಿಯಾಕ್ಕೆ ಒತ್ತು ಕೊಡಿ
ರಾಜ್ಯದ ಕ್ರೀಡಾ ಇಲಾಖೆ ಅಧಿಕಾರಿಗಳು ‘ಖೋಲೋ ಇಂಡಿಯಾ’ಕ್ಕೆ ಒತ್ತು ನೀಡುವ ಕೆಲಸ ಮಾಡಬೇಕು. ಸ್ಥಳೀಯ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಅದಕ್ಕೆ ತಕ್ಕಂತೆ ಇಲಾಖೆ ಅಧಿಕಾರಿಗಳು ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ‘ಖೋಲೋ ಇಂಡಿಯಾ’ ಕ್ರೀಡಾಕೂಟಕ್ಕೆ ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯ ಪ್ರತಿನಿಧಿಸಲು ಅನುಕೂಲವಾಗಲಿದೆ ಎಂದು ಸಂಸದ ಪಿ.ಸಿ. ಮೋಹನ್, ಅಧಿಕಾರಿಗಳಿಗೆ ಸಲಹೆ ನೀಡಿದರು. ಹಲಸೂರು ಕೆರೆ ಈಗಾಗಲೇ ಕಲುಷಿತವಾಗಿದೆ. ಇದನ್ನು ತಡೆಯಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ವಿಫಲರಾಗಿದ್ದಾರೆ. ಇದು ನನ್ನ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಕೆರೆ ಪರಿಶೀಲಿಸುವುದಾಗಿ ಅಧಿಕಾರಿಗಳಿಗೆ ಹೇಳಿದರು.
ಕಾಮಗಾರಿ ನಡೆಸದೆ ಬಿಲ್ ಪಾವತಿ ಬಗ್ಗೆ ಗರಂ
ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಕಳಪೆಯಿಂದ ಕೂಡಿವೆ. ಕೆಲವೆಡೆ ಕಾಮಗಾರಿ ನಡೆಸದೆ ಗುತ್ತಿಗೆದಾರರು ಬಿಲ್ ಪಡೆದಿರುವ ಬಗ್ಗೆ ದೂರುಗಳಿವೆ. ಸಾಕಷ್ಟು ಮನೆಗಳಿಗೆ ನಳ ಸಂಪರ್ಕ ಕಲ್ಪಿಸಿಲ್ಲ ಎಂದು ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಬೆಂಗಳೂರು ಕೇಂದ್ರ ಲೋಕಾಸಭೆ ವ್ಯಾಪ್ತಿಯ ಮಹದೇವಪುರ ಕ್ಷೇತ್ರದಲ್ಲಿ ಈ ಯೋಜನೆಯಡಿ ಆರಂಭಿಸಿರುವ ಕಾಮಗಾರಿ ಉದ್ಘಾಟನೆಗೆ ನನ್ನನ್ನೇ ಆಹ್ವಾನಿಸಿಲ್ಲ. ಅಧಿಕಾರಿಗಳು ಶಿಷ್ಟಾಚಾರವನ್ನೇ ಪಾಲಿಸುತ್ತಿಲ್ಲ. ಸಾಕಷ್ಟು ಕಾಮಗಾರಿಗಳು ಕಳಪೆಯಾಗಿವೆ. ಹಲವೆಡೆ ಪೈಪ್‌ಗಳು ಹೊಡೆದಿವೆ. 4 ಅಡಿ ಬದಲು 2 ಅಡಿ ಆಳದಲ್ಲಿ ಪೈಪ್ ಅಳವಡಿಸಲಾಗಿದೆ. ಇದರಿಂದ ಪೈಪ್‌ಗಳು ಹೊಡೆಯುತ್ತಿವೆ. ಈ ಬಗ್ಗೆ ತನಿಖೆ ನಡೆಸಿ ಮುಂದಿನ ಸಭೆಯಲ್ಲಿ ಮಾಹಿತಿ ನೀಡುವಂತೆ ಪಿ.ಸಿ.ಮೋಹನ್,ಅಧಿಕಾರಿಗಳಿಗೆ ಸೂಚಿಸಿದರು.
ದಿಶಾ ಸಭೆಯಲ್ಲಿ ಯೋಜನೆಗಳ ಪ್ರಗತಿ ಪರಿಶೀಲಿಸಿದ್ದೇನೆ. ಗ್ರಾಮೀಣ, ನಗರ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಜಲಜೀವನ ಮಿಷನ್ ಯೋಜನೆ ಅನುಷ್ಠಾನ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಆ ಮೂಲಕ ಪ್ರತಿ ಗ್ರಾಮದಲ್ಲಿ ಜನರ ಬದುಕು ಹಸನಗೊಳಿಸಲು ಕ್ರಮವಾಗುತ್ತಿದೆ.
|ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ.