

ಪಾಕಿಸ್ತಾನ: ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾರಿಂದ ಬೇರಾಗುತ್ತಿರುವ ವದಂತಿಗಳ ನಡುವೆ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.
ಶೋಯೆಬ್ ಮಲಿಕ್ ತಮ್ಮ ಮದುವೆ ಸಮಾರಂಭದ ಫೋಟೋಗಳನ್ನು ಇಂದು ಸಾಮಾಜಿ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಸಾನಿಯಾ ಮತ್ತು ಶೋಯೆಲ್ ವಿಚ್ಛೇದನದ ವದಂತಿ ಕೆಲವು ಸಮಯದಿಂದ ಸಿನಿ, ಕ್ರೀಡಾ ಕ್ಷೇತ್ರದಲ್ಲಿ ಬಿಸಿ ಬಿಸಿ ಸುದ್ದಿಯಾಗಿತ್ತು.
ಕೆಲ ದಿನಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಬುಧವಾರದಂದು, ಸಾನಿಯಾ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಇದು ಅವರ ಮತ್ತು ಶೋಯೆಬ್ ಮಲಿಕ್ ನಡುವಿನ ವಿಚ್ಚೇದನದ ವದಂತಿಯನ್ನು ದೃಢಪಡಿಸಿತ್ತು. ಆದರೆ, ಶೋಯೆಬ್ ಮತ್ತು ಸಾನಿಯಾ ವಿಚ್ಚೇದನ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ದೃಢಪಟ್ಟಿಲ್ಲ.
ಇನ್ನು ಶೋಯೆಬ್ ಮಲಿಕ್ ಮತ್ತು ಸನಾ ಜಾವೇದ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೆಲವು ಸಮಯದಿಂದ ಹರಿದಾಡುತ್ತಿದ್ದವು. ಕಳೆದ ವರ್ಷ ನಟಿಯ ಹುಟ್ಟುಹಬ್ಬದಂದು ಶೋಯೆಬ್ ಭಾಗವಹಿಸುವ ಮೂಲಕ ಆ ಸುದ್ದಿಗೆ ಪುಷ್ಠಿ ಕೊಟ್ಟಿದ್ದರು. ಸನಾ ಸಹ ತಮ್ಮ ಮದುವೆಯ ಫೋಟೋಗಳನ್ನು ಶನಿವಾರ ನಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇನ್ಸ್ಟಾಗ್ರಾಂ ಖಾತೆಯ ಬಯೋದಲ್ಲಿ ತನ್ನ ಹೆಸರನ್ನು ಸನಾ ಶೋಯೆಬ್ ಮಲಿಕ್ ಎಂದು ಬದಲಾಯಿಸಿಕೊಂಡಿರುವುದು ಗಮನಾರ್ಹ.
ಅಂದಹಾಗೆ ಇದು ಶೋಯೆಬ್ ಮಲಿಕ್ ಅವರ ಮೂರನೇ ಮದುವೆಯಾಗಿದೆ. ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗುವ ಮೊದಲು, ಅವರು 2010 ರಲ್ಲಿ ತಮ್ಮ ಮೊದಲ ಪತ್ನಿ ಅಯೇಶಾ ಸಿದ್ದಿಕಿಗೆ ವಿಚ್ಛೇದನ ನೀಡಿದ್ದರು.