

ವಿಟ್ಲ: ಆನೆಕಲ್ಲು ಪಡ್ಪು ಶ್ರೀ ಜಲದುರ್ಗಾ ಪರಮೇಶ್ವರೀ ಕ್ಷೇತ್ರದಲ್ಲಿ ನಾಡಿ ವಿಧಾನದ ಮೂಲಕ ನಡೆಯುತ್ತಿದ್ದ ಪ್ರಶ್ನಾಚಿಂತನೆ ಸಂದರ್ಭ ದೇವಸ್ಥಾನದ ಮುಂಭಾಗ ಹರಿಯುವ ನದಿಯಲ್ಲಿ ಶಿವಲಿಂಗ ಇರುವ ವಿಚಾರ ತಿಳಿದು ಬಂದಿದ್ದು, ಅದನ್ನು ಶನಿವಾರ ಪತ್ತೆ ಮಾಡಲಾಗಿದೆ.
ಪಡ್ಪು ತೋಟದಲ್ಲಿ ದಶಕದ ಹಿಂದೆ ದೇವಸ್ಥಾನದ ಕುರುಹು ಪತ್ತೆಯಾದ ಸಂದರ್ಭದಲ್ಲಿ ನಡೆದ ಪ್ರಶ್ನಾ ಚಿಂತನೆಯಲ್ಲಿ ಜಲದುರ್ಗೆಯ ಜತೆಗೆ ಶಿವನ ಸಾನ್ನಿಧ್ಯವೂ ಇದೆ ಎಂಬುದು ಕಾಣಿಸಿತ್ತು. ಜಲದುರ್ಗಾಪರಮೇಶ್ವರೀ ನೀರಿನಲ್ಲಿ ನಿಂತು ಶಿವನಿಗೋಸ್ಕರ ತಪಸ್ಸು ಮಾಡಿದ ಸ್ಥಳವಿದು. ಶಿವಲಿಂಗ ಸಿಗುವ ಮೂಲಕ ದೇವಿಯ ತಪಸ್ಸು ಸಾಕಾರಗೊಂಡಿದೆ. ನದಿಯಲ್ಲಿ ಪತ್ತೆಯಾದ ಶಿವಲಿಂಗ ಶಿವ ಯೋಗೇಶ್ವರ ಎಂದು ಕರೆಯಲಾಗುತ್ತಿದೆ.
ಜೋಗಿ ಸಮುದಾಯಕ್ಕೆ ಸೇರಿದವರು ಈ ಭಾಗದಲ್ಲಿ ಹೆಚ್ಚಾಗಿ ವಾಸವಾಗಿದ್ದರು. ನಾಥಪಂಥದ ಮೂಲ ಪುರುಷ ಮಚ್ಚೇಂದ್ರನಾಥ ಆರಾಽಸಿಕೊಂಡು ಬಂದ ಲಿಂಗವಾಗಿದ್ದು, ಸಿದ್ಧರು ಹಾಗೂ ನಾಥಪಂಥದವರು ಅರ್ಚನೆ ಮಾಡುತ್ತಿದ್ದರು. ಕರೋಪಾಡಿ ಆಸುಪಾಸಿನಲ್ಲಿ ಬಹಳಷ್ಟು ಸಾನ್ನಿಧ್ಯಗಳಿದ್ದು, ಇದರ ಹಿಂದೆ ಅಗಸ್ತ್ಯರ ಮಹಾಸಂಕಲ್ಪವಿದೆ. ಅಗಸ್ತ್ಯರ ಜತೆಗೆ ದೊಡ್ಡ ಋಷಿಗಳ ಸಮೂಹ ಇಲ್ಲಿಗೆ ಆಗಮಿಸಿದೆ ಎಂಬುದು ನಾಡಿಶೋಧನೆಯಲ್ಲಿ ಕಂಡು ಬಂದಿದೆ.
ನಾಡಿ ಶೋಧನೆಯನ್ನು ಕರೂರು ಪಂಚಮದೇವಿ ಕಲಿಪಾಳ್ಯಮ್ ಶ್ರೀ ನಂದೀಶ್ವರರ್ ಜ್ಞಾನಪೀಠಂನ ಸ್ವಾಮಿ ಸಿದ್ಧ ಗುರೂಜಿಯವರು ನಡೆಸಿದ್ದಾರೆ. ಆನೆಕಲ್ಲು ಶ್ರೀ ಜಲದುರ್ಗಾ ಪರಮೇಶ್ವರೀ ಟ್ರಸ್ಟ್ ಗೌರವಾಧ್ಯಕ್ಷ ಒ. ಶ್ಯಾಮ್ ಭಟ್, ಜ್ಞಾನಪೀಠಂ ಕಾರ್ಯನಿರ್ವಾಹಕ ಧರ್ಮದರ್ಶಿ ನಂದಿನಿ ಕೃಷ್ಣಕುಮಾರ್, ಟ್ರಸ್ಟಿ ಶಿವರಾಮನ್, ವೆಂಕಟ್, ಮಾತಾ ಅಮೃತಾನಂದಮಯೀ ಆಶ್ರಮದ ಎ. ಪಿ. ಲಲಿತಾ, ಶ್ರೀ ಜಲದುರ್ಗಾ ಪರಮೇಶ್ವರೀ ಕ್ಷೇತ್ರದ ಸಂಚಾಲಕ ಸುರೇಶ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುಷ್ಪರಾಜ್, ನೆಲಜಲ ಹೋರಾಟ ಸಮಿತಿ ಅಧ್ಯಕ್ಷ ರಾಮಣ್ಣ ಪಾಳಿಗೆ ಮತ್ತಿತರರು ಹಾಜರಿದ್ದರು.
ದಕ್ಷಿಣ ಕನ್ನಡ - ಕೇರಳ ಪ್ರಾಂತದಲ್ಲಿ ನಾಥಪಂಥದ ಗುರುಗಳು ಹಾಗೂ ಸಿದ್ಧರು ತಳಮಟ್ಟದಲ್ಲಿ ಸಂಸ್ಕೃತಿಯನ್ನು ಸ್ಥಾಪಿಸಿದ್ದಾರೆ. ಅಗಸ್ತ್ಯರು ಭಾರತದ ಪೂರ್ವ ಚರಿತ್ರೆಯನ್ನು ದಾಖಲಿಸುವ ಕಾರ್ಯವನ್ನು ಮಾಡಿದ್ದಾರೆ. ಪಾಡಿ ಎಂಬ ಪ್ರದೇಶಗಳಲ್ಲಿ ಅಗಸ್ತ್ಯರ ಸಾನ್ನಿಧ್ಯಗಳನ್ನು ಕಾಣಲು ಸಾಧ್ಯವಿದೆ. ನಶಿಸಿ ಹೋದ ದೇವಳಗಳು ಕಾಲ ಕ್ರಮೇಣ ಮತ್ತೆ ಗೋಚರಿಸಿ ಜೀರ್ಣೋದ್ಧಾರಗೊಳ್ಳುತ್ತವೆ ಎಂಬ ಸತ್ಯವನ್ನು ಅರಿತುಕೊಳ್ಳಬಹುದಾಗಿದೆ.
| ಒ.ಶ್ಯಾಮ್ ಭಟ್
ಗೌರವಾಧ್ಯಕ್ಷ, ಆನೆಕಲ್ಲು ಶ್ರೀ ಜಲದುರ್ಗಾ ಪರಮೇಶ್ವರೀ ಟ್ರಸ್ಟ್