

ವಿಜಯಪುರ: ‘ ಈ ವರ್ಷ ಅಕ್ರಾಳ ವಿಕ್ರಾಳ, ಸಮಕಾಲ ವಿರಳ...ಆಕಳು ಕರುವಿಗೆ ಜನ್ಮ ನೀಡುತ್ತದೆ...ಆಕಳು ಹಾಲು ಹಿಂಡುತೈತಿ...ಮತ್ತೆ ನಿಲ್ಲಿಸುತ್ತೇ, ಮುಂದೆ ಹಾಲು ಹಿಂಡುತೈತಿ...!’
ಹೀಗೆಂದು ಪ್ರಸಕ್ತ ಸಾಲಿನ ಭವಿಷ್ಯವಾಣಿ ನುಡಿದವರು ಕತಕನಹಳ್ಳಿಯ ಶ್ರೀ ಶಿವಯ್ಯ ಮಹಾಸ್ವಾಮೀಜಿ.
ಸುಕ್ಷೇತ್ರ ಕತಕನಹಳ್ಳಿಯ ಶ್ರೀ ಗುರುಚಕ್ರವರ್ತಿ ಸದಾಶಿವ ಮುತ್ಯಾನ ಜಾತ್ರಾ ಮಹೋತ್ಸವದಂಗವಾಗಿ ಮಂಗಳವಾರ ಗ್ರಾಮದ ಲಗಮವ್ವ ದೇವಿ ದೇವಾಲಯದ ಆವರಣದಲ್ಲಿರುವ ಬೃಹತ್ ವೃಕ್ಷದ ಸನ್ನಿಧಿಯಲ್ಲಿ ಕಾಲಜ್ಞಾನದ ಹೇಳಿಕೆ ನೀಡಿದ ಶಿವಯ್ಯ ಸ್ವಾಮೀಜಿ, ‘ಈ ವರ್ಷದ ಭವಿಷ್ಯ ಅಕ್ರಾಳ -ವಿಕ್ರಾಳ, ಸಮತಳನ ಇಲ್ಲ...ಸೇವಾ ಮಾಡಿಕೋಂತ ಇರಬೇಕು. ಸದಾಶಿವನ ಸೇವಾ ಮಾಡಿದರೆ ಮಾತ್ರ ನಿರಾಳ’ ಎಂದರು.
ನಂತರ ಎರಡನೇಯ ಸಾಲಿನಲ್ಲಿ ‘ಆಕಳಾ ಈತೈತಿ (ಜೀವ ನೀಡುತ್ತದೆ) ನಂತರ ಹಿಂಡುತ್ತದೆ....ನಡಬಾರಕ ಬಂದ್ ಮಾಡ್ತದ.....ಮತ್ತ ಹಿಂಡತದ.....’ ಎಂದಷ್ಟೇ ಹೇಳಿ ಕಾಲಜ್ಞಾನ ಹೇಳಿಕೆಗಳನ್ನು ಸಂಪನ್ನಗೊಳಿಸಿದರು. ನಂತರ ಪಂಚ ಭಕ್ತರಿಗೆ ಪ್ರಸಾದ ವಿತರಿಸಿದರು.
ಪಾದಪೂಜೆಯ ಮಾಡಿ ಮುಕ್ತಾದೆ.. ಗುರು ಲಿಂಗ ಜಂಗಮರ ಪಾದ ಪೂಜೆಯ ಮಾಡಿ ಮುಕ್ತಾದೆ ಎಂಬ ಭಕ್ತಿಭಾವದ ಭಕ್ತಿಯ ಗೀತೆ ಎಲ್ಲೆಡೆ ಮಾರ್ದನಿಸಿತು. ಸಹಸ್ರಾರು ಭಕ್ತಾದಿಗಳು ಕಾಲಜ್ಞಾನ ಹೇಳಿಕೆ ಆಲಿಸಲು ನೆರೆದಿದ್ದರು. ಸೂಜಿ ಬಿದ್ದರೂ ಸಪ್ಪಳಾಗುವ ನಿಟ್ಟಿನಲ್ಲಿ ನಿಶ್ಯಬ್ದದ ವಾತಾವರಣ ನಿರ್ಮಾಣಗೊಂಡಿತು.
ಜಾತ್ರೆ ಪ್ರಯುಕ್ತ ದೇವಾಲಯದ ಆವರಣದಲ್ಲಿ ಮಂಗಳವಾರ 54 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತು.
ಬಬಲಾದಿ -ಚಮಕೇರಿ - ಕತಕನಹಳ್ಳಿಯ ಶಿವಯ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪರಮಪೂಜ್ಯನೀಯ ಮಹಾದೇವಿ ತಾಯಿ ಮಾತನಾಡಿ, ಸತಿ-ಪತಿಗಳ ಭಕ್ತಿ ಒಂದಾದಾಗ ಬದುಕು ಸುಂದರವಾಗುತ್ತದೆ. ಶಿವನ ಸ್ಮರಣೆಯೊಂದಿಗೆ ಹಿರಿಯರ ಮಾರ್ಗದರ್ಶನದಲ್ಲಿ ಜೀವನವನ್ನು ನಡಿಸಬೇಕು ಎಂದರು.
ಬಂಥನಾಳದ ವೃಷಭಲಿಂಗ ಮಹಾ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿ ಮತ್ತಿತರರಿದ್ದರು. ಹಿರಿಯ ಕಲಾವಿದ ಯಮನಪ್ಪ ಭಜಂತ್ರಿ ಸಂಗಡಿಗರು ಸಂಗೀತ ಸೇವೆ ಸಲ್ಲಿಸಿದರು. ವೇದಮೂರ್ತಿ ಬಸಯ್ಯ ಗಚ್ಚಿನಮಠ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು.