

ಸಾಗರ: ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಯುವಜನತೆ ಆದ್ಯತೆ ನೀಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರದ ಶಾಂತವೇರಿ ಗೋಪಾಲ ಗೌಡ ಕ್ರೀಡಾಂಗಣದಲ್ಲಿ ಸಾಗರ ಫ್ರೆಂಡ್ಸ್ ತಂಡದಿಂದ ಆಯೋಜಿಸಿದ್ದ 6 ದಿನಗಳ ರಾಷ್ಟ್ರಮಟ್ಟದ ಹೊನಲು ಬೆಳಕಿನ ಸಾಗರ ಫ್ರೆಂಡ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಐಪಿಎಲ್ ಮಾದರಿ ಪಂದ್ಯಾವಳಿ ಸಾಗರದಲ್ಲಿ ನಡೆಸುತ್ತಿರುವುದು ಸಂತೋಷದ ಸಂಗತಿ. ಸಾಗರದಲ್ಲಿ ಉತ್ತಮ ಕ್ರೀಡಾಪಟುಗಳಿದ್ದು, ಅವರಿಗೆ ಪೂರಕ ಸೌಲಭ್ಯ ಕಲ್ಪಿಸುವುದು ನಮ್ಮ ಹೊಣೆ. ಗೋಪಾಲಗೌಡ ಕ್ರೀಡಾಂಗಣ ಅಭಿವೃದ್ಧಿಗೆ ಮುಖ್ಯಮಂತ್ರಿ ಬಳಿ ಒಂದು ಕೋಟಿ ರೂ. ಅನುದಾನ ಕೇಳಿದ್ದು, ಮಂಜೂರಾಗುವ ನಿರೀಕ್ಷೆ ಇದೆ. ನಗರಸಭೆಯಲ್ಲಿ 20 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಮಾತನಾಡಿ, ಸಾಗರದಲ್ಲಿ ಕಲೆ, ಸಾಹಿತ್ಯ, ಕ್ರೀಡೆಗೆ ಯಾವಗಲೂ ಸಹಕಾರ ನೀಡಲಾಗುತ್ತದೆ. ಹೆಸರಾಂತ ಕ್ರೀಡಾಪಟುಗಳು ಸಾಗರದಲ್ಲಿದ್ದು, ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಇಂತಹ ಪಂದ್ಯಾವಳಿಯಿಂದ ಹೊಸ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯ ಟಿ.ಡಿ.ಮೇಘರಾಜ್, ಗಣೇಶ ಪ್ರಸಾದ್, ಆರ್.ಶ್ರೀನಿವಾಸ್, ಸೈಯದ್ ಜಾಕೀರ್, ಗಣಪತಿ ಮಂಡಗಳಲೆ, ಲಲಿತಮ್ಮ, ಮಧುಮಾಲತಿ, ಸಾಗರ ಫ್ರೆಂಡ್ಸ್ ತಂಡದ ಕಿರಣ್ ಸಾಲಿಯಾನ್, ಪ್ರಮುಖರಾದ ಮಾಲತೇಶ್, ವಿಜಯ್, ಸೋಮಶೇಖರ ಲ್ಯಾವಿಗೆರೆ, ಸುರೇಶಬಾಬು, ಕಲಸೆ ಚಂದ್ರಪ್ಪ ಇತರರಿದ್ದರು.