

ಸೊರಬ: ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಪ್ರಸ್ತುತ ಅನೇಕ ಉದ್ಯೋಗ ಅವಕಾಶಗಳಿವೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಜಗಲಿ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ ಹೇಳಿದರು.
ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಜಗಲಿ, ವಿವಿಧ ಸಂಘ ಸಂಸ್ಥೆಗಳಿಂದ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಹಾಗೂ ಬ್ರೈಡಲ್ ಮೇಕಪ್ ಕಾರ್ಯಕ್ರಮದಲ್ಲಿ ಮಾತನಾಡಿ, ಮದುವೆ, ಶುಭ ಸಮಾರಂಭಗಳಲ್ಲಿ ಅಲಂಕಾರ ಮಾಡುವುದು ಸಹ ವೃತ್ತಿಯಾಗಿ ರೂಪುಗೊಂಡಿದೆ. ಕಾರ್ಯಕ್ರಮದ ಸ್ಥಳಕ್ಕೆ ತೆರಳಿ ಅಲಂಕಾರ ಮಾಡುವವರಿದ್ದಾರೆ ಎಂದು ತಿಳಿಸಿದರು.
ಮಹಿಳೆಯರು ಮನೆ ಕೆಲಸಕ್ಕೆ ಮಾತ್ರ ಸೀಮಿತ ಎನ್ನುವ ಕಾಲ ಮರೆಯಾಗಿದೆ. ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ತೊಡಗಿರುವುದು ಉತ್ತಮ ಬೆಳವಣಿಗೆ. ಮಹಿಳೆಯರು ಸಹ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿ ಉತ್ತಮ ಸ್ಥಾನ ಗಳಿಸುತ್ತಿದ್ದಾರೆ ಎಂದರು.
ನೆಮ್ಮದಿ ಗ್ರೂಪ್ ಆಫ್ ಸರ್ವಿಸ್ ಮುಖ್ಯಸ್ಥೆ ಅನಿತಾ ಸುಬ್ಬು ಮಾತನಾಡಿ, ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವ ಮೊದಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಲ್ಲವನ್ನೂ ಮೆಟ್ಟಿನಿಂತು ಉದ್ಯಮ ಸ್ಥಾಪಿಸಿದಾಗ ಕುಟುಂಬಕ್ಕೆ ನೆರವಾಗಲು ಸಾಧ್ಯ ಎಂದು ತಿಳಿಸಿದರು.
ಭಾರತಿ ಭಂಡಾರಿ, ಕಸ್ತೂರಿ ರಾಜು, ಕನ್ನಡ ಸಾಹಿತ್ಯ ಸಾಂಸ್ಕೃತಿಕ ಜಗಲಿಯ ಸದಸ್ಯರಾದ ವಿನಯಾ ಪ್ರಶಾಂತ್ ಬಾಪಟ್, ಮಾನಸಾ ರಂಗನಾಥ್, ಅನುಕೃತಾ, ಶ್ಯಾಮಲಾ, ರತ್ನಮ್ಮ, ಸಾಹಿತಿ ರೇವಣಪ್ಪ ಬಿದರಗೇರಿ, ಸಿಂಧುಆದರ್ಶ, ನಳಿನಾ, ವಿನುತಾ, ರೂಪಾ ಮಧುಕೇಶ್ವರ್ ಇತರಿದ್ದರು.