

ಸಾಗರ: ಸಹಕಾರ ಕ್ಷೇತ್ರಕ್ಕೆ ನಂಬಿಕೆ ಜೀವಾಳ. ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಜನರು ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.
ನಗರದ ದೈವಜ್ಞ ಬ್ರಾಹ್ಮಣ ಸಮಾಜದ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ವಿವಿಧ ಸಹಕಾರ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಪಕ್ಷದ ಹಾಗೂ ಸಹಕಾರ ಭಾರತಿ ಪ್ರತಿನಿಧಿಗಳನ್ನು ಸನ್ಮಾನಿಸಿ ಮಾತನಾಡಿ, ಗ್ರಾಹಕರಿಗೆ ನಿಮ್ಮ ಮೇಲೆ ನಂಬಿಕೆ ಬರಬೇಕು. ಬರುವ ದುಡ್ಡನ್ನು ಹಂಚಿ ಪುಣ್ಯ ಸಂಪಾದನೆ ಮಾಡುವುದಲ್ಲ. ಬರುವ ಹಣವನ್ನು ಮತ್ತೆ ತೊಡಗಿಸಿ ನೀವು ಪ್ರತಿನಿಧಿಸುವ ಸಂಸ್ಥೆಯನ್ನು ಲಾಭದಾಯಕ ಸ್ಥಿತಿಯತ್ತ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಹಕಾರ ಕ್ಷೇತ್ರವನ್ನು ಸದೃಢಗೊಳಿಸಿ ದೇಶವಾಸಿಗಳು ಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಅನೇಕ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸಹಕಾರ ನೀತಿಯನ್ನು ವಿಪಕ್ಷಗಳು ಸಹ ಒಪ್ಪಿಕೊಂಡಿವೆ. ಇಂತಹ ಉತ್ತಮ ಕಾಲಘಟ್ಟದಲ್ಲಿ ನೀವು ಸಹಕಾರ ಸಂಸ್ಥೆಯ ವಿವಿಧ ಕ್ಷೇತ್ರಕ್ಕೆ ಆಯ್ಕೆಯಾಗಿರುವುದು ಸಂತಸದ ಸಂಗತಿ ಎಂದರು.
ಕೆ.ಸಿ.ದೇವಪ್ಪ, ತಿಮ್ಮಪ್ಪ ಶ್ರೀಧರಪುರ, ಆರ್.ಶ್ರೀನಿವಾಸ್ ಮೇಸ್ತ್ರಿ, ಕೆ.ಸತೀಶ್, ಗಾಯತ್ರಿ ಮಲ್ಲೇಶಪ್ಪ ಸೇರಿ ಸಹಕಾರ ಕ್ಷೇತ್ರಕ್ಕೆ ಆಯ್ಕೆಯಾದವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ಪ್ರಮುಖರಾದ ಟಿ.ಡಿ.ಮೇಘರಾಜ್, ಗಣೇಶಪ್ರಸಾದ್, ಪ್ರಸನ್ನ ಕೆರೆಕೈ ಇತರರಿದ್ದರು.