

ಶಿಕಾರಿಪುರ: ಯುವಶಕ್ತಿಯೇ ರಾಷ್ಟ್ರದ ಶಕ್ತಿ. ಯುವಶಕ್ತಿಯ ಮೇಲೆ ಸಮಾಜ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ ಎಂದು ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಹೇಳಿದರು.
ಕುಮದ್ವತಿ ಪ್ರಥಮದರ್ಜೆ ಕಾಲೇಜು, ಕುಮದ್ವತಿ ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ, ಪದವಿ ಪ್ರದಾನ ಹಾಗೂ ಸಾಂಪ್ರದಾಯಿಕ ಉಡುಗೆ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ರಕ್ಷಣೆ ವಿಚಾರ ಬಂದಾಗ ನಾವೆಲ್ಲರೂ ಒಂದಾಗಿ ಮುನ್ನುಗ್ಗಬೇಕು. ನಾವು ಪಡೆಯುವ ಶಿಕ್ಷಣ ಸಮಾಜಕ್ಕೆ ಸದುಪಯೋಗವಾಗಬೇಕು. ಸಾಮಾಜಿಕ ಕಳಕಳಿ ಕಡೆಗೆ ನಮ್ಮ ಗಮನವಿರಬೇಕು ಎಂದು ತಿಳಿಸಿದರು.
ಸೇವಾ ಕಾರ್ಯಗಳಿಂದ ಜೀವನ ಸಾರ್ಥಕ್ಯ ಪಡೆಯುತ್ತದೆ. ಸೇವೆಯೇ ಶ್ರೇಷ್ಠ ಧರ್ಮ, ಸೇವಾ ಕಾರ್ಯಗಳು ದ್ವೇಷ ಭಾವ ದೂರ ಮಾಡಿ ನೆಮ್ಮದಿ ನೀಡುತ್ತವೆ ಎಂದು ತಿಳಿಸಿದರು. ಪ್ರಾಚಾರ್ಯ ಕೆ.ಎಸ್.ರವೀಂದ್ರ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆ ಪರಿಪೂರ್ಣ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕು. ನಮ್ಮ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಒತ್ತು ನೀಡುತ್ತಿದೆ ಎಂದರು.
ಕುಮದ್ವತಿ ಕೇಂದ್ರೀಯ ವಸತಿ ಶಾಲೆ ಪ್ರಾಚಾರ್ಯ ಎಚ್.ಜಿ.ಸಿದ್ಧೇಶ್ವರ, ಪ್ರಾಧ್ಯಾಪಕ ಆರ್.ಕೋಟೋಜಿ ರಾವ್, ಪ್ರಾಧ್ಯಾಪಕಿ ಹಂಸಾ, ವಿದ್ಯಾರ್ಥಿಗಳು ಇದ್ದರು. ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.