ಮನುಷ್ಯರನ್ನು ಸನ್ಮಾರ್ಗದಲ್ಲಿ ಒಯ್ಯುವುದೇ ಧರ್ಮದ ಸಾರ

31sgr4
ಸಾಗರದಲ್ಲಿ ಏರ್ಪಡಿಸಿದ್ದ ಶ್ರಾವಣ ಮಾಸದ ಸಾಮೂಹಿಕ ರುದ್ರಾಭಿಷೇಕ ಮತ್ತು ಧರ್ಮಸಭೆಯನ್ನು ಬಳಸಗೋಡು ಭೃಂಗೀಶ್ವರ ಮಠದ ಶ್ರೀ ಗುರು ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಮಹಾಂತ ಸ್ವಾಮೀಜಿ, ಸಚಿನ್ ಗೌಡ, ಮೈತ್ರಿ ಪಾಟೀಲ್ ಇತರರಿದ್ದರು.
Published on

ಸಾಗರ: ಸಾಂಪ್ರದಾಯಿಕ ಆಚರಣೆ ಮತ್ತು ಆರಾಧನೆಗಳನ್ನು ವ್ಯವಸ್ಥಿತವಾಗಿ ಮುನ್ನಡೆಸಬೇಕು. ಶ್ರಾವಣ ಮಾಸದಲ್ಲಿ ಧಾರ್ಮಿಕ ವಿಧಿವಿಧಾನ ನಡೆಸುವುದರಿಂದ ಸನ್ಮಂಗಳ ಉಂಟಾಗುತ್ತದೆ ಎಂದು ಬಳಸಗೋಡು ಭೃಂಗೀಶ್ವರ ಮಠದ ಶ್ರೀ ಗುರು ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಯುವ ವೇದಿಕೆಯಿಂದ ಆಯೋಜಿಸಿದ್ದ ಶ್ರಾವಣ ಮಾಸದ 18ನೇ ವರ್ಷದ ಸಾಮೂಹಿಕ ರುದ್ರಾಭಿಷೇಕ ಮತ್ತು ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.

ವೀರಶೈವ ಲಿಂಗಾಯತ ಸಮಾಜ ಸದಾ ಧರ್ಮ ಸಂರಕ್ಷಣೆಗಾಗಿ ಶ್ರಮಿಸುತ್ತಿದೆ. ಮನುಕುಲದಲ್ಲಿ ಇರುವುದು ಒಂದೇ ಧರ್ಮ. ಆದರೆ ಆಚಾರ ವಿಚಾರ ಬೇರೆಯಾಗಿರುತ್ತದೆ. ಎಲ್ಲ ಧರ್ಮದ ಆಚರಣೆ ಮನುಷ್ಯನನ್ನು ಸನ್ಮಾರ್ಗದಲ್ಲಿ ಒಯ್ಯುವುದೇ ಆಗಿದೆ. ಇಂತಹ ಧರ್ಮ ಕಾರ್ಯಗಳು ಸಮಾಜ ಸಂಘಟನೆಗೆ ಹೆಚ್ಚಿನ ಶಕ್ತಿ ಕೊಡುತ್ತವೆ ಎಂದು ತಿಳಿಸಿದರು.

ಶ್ರಾವಣ ಮಾಸದಲ್ಲಿ ಒಳ್ಳೆಯ ವಿಷಯ ತಿಳಿಯಲು, ಇನ್ನೊಬ್ಬರಿಗೆ ತಿಳಿಸಲು ಸುಸಂದರ್ಭ. ಧಾರ್ಮಿಕ ಚಿಂತನೆಗಳು ನಮಗೆ ಹೊಸ ಶಕ್ತಿ ಕೊಡುತ್ತದೆ. ಯುವ ವೇದಿಕೆ ಇಂತಹ ಧಾರ್ಮಿಕ ಚಿಂತನ-ಮಂಥನ ಕಾರ್ಯಕ್ರಮ ಏರ್ಪಡಿಸುವ ಮೂಲಕ ಸನ್ಮಾರ್ಗಯುತ ಸಮಾಜ ನಿರ್ಮಿಸಲು ಮುಂದಾಗಿದೆ.

ಶ್ರೀ ಮಹಾಂತ ಸ್ವಾಮೀಜಿ

ಜಡೆ ಸಂಸ್ಥಾನ ಮಠ

ಯುವ ವೇದಿಕೆ ಅಧ್ಯಕ್ಷ ಸಚಿನ್ ಗೌಡ ಮಾತನಾಡಿ, ಸಮಾಜ ಒಗ್ಗೂಡಿ ಹೋಗಬೇಕು ಎನ್ನುವುದು ನಮ್ಮ ಉದ್ದೇಶ. ಆದರೆ ಆರೇಳು ವರ್ಷಗಳಿಂದ ಕೆಲವರು ಅಧಿಕಾರಕ್ಕಾಗಿ ಅಂಟಿ ಕುಳಿತು ಸಮಾಜದ ಕಾರ್ಯ ನಡೆಸುತ್ತಿಲ್ಲ. ಕ್ಯಾಲೆಂಡರ್ ಬಿಡುಗಡೆ, ರುದ್ರಾಭಿಷೇಕಕ್ಕೆ ಸೀಮಿತ ಆಗಬಾರದು ಎನ್ನುವುದು ವೇದಿಕೆ ಆಶಯ. ಎರಡು ಯುವ ವೇದಿಕೆಯಾಗಿರುವುದು ಸರಿಯಲ್ಲ. ಸಮಾಜದ ಗುರುಗಳ ಮೂಲಕ ಸರಿಪಡಿಸಲಾಗುವುದು ಎಂದರು.

ಮಲ್ಲವ ಸಮಾಜದ ಅಧ್ಯಕ್ಷ ಕೆ.ಜಿ.ಜಗದೀಶ್ ಒಡೆಯರ್, ನಿವೃತ್ತ ಪ್ರಾಚಾರ್ಯೆ ಎಂ.ಸಿ.ಕೋಮಲಾ, ಬಸವರಾಜ ಪುಟ್ಟಳ್ಳಿ, ಮಲ್ಲವ ಸಮಾಜದ ತಾಲೂಕು ಅಧ್ಯಕ್ಷ ರಾಜೇಂದ್ರ ಆವಿನಹಳ್ಳಿ, ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಕೆ.ವಿ.ಪ್ರವೀಣ್, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಗುಂಡಾಲಿ ಬಸವರಾಜ್, ಸಂಜಯ್ ಎಸ್. ಗೌಡ, ಪ್ರಜ್ವಲ್ ಎಸ್.ಸಾಗರ್, ಕಾಂತರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net