ಅಭಿವೃದ್ಧಿ ಪಥದಲ್ಲಿ ಮುಂಚೂಣಿಯಲ್ಲಿರುವ ತಾಲೂಕು ಶಿಕಾರಿಪುರ

24 skp 1
ಶಿಕಾರಿಪುರ ಪುರಸಭೆ ಅಭಿವೃದ್ಧಿ ಕಾಮಗಾರಿಗಳಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. ಬಿ.ವೈ.ವಿಜಯೇಂದ್ರ, ಸುನಂದಾ ಮಂಜುನಾಥ್, ರೂಪಾ ಮಂಜುನಾಥ್, ರಮೇಶ್ ಇತರರಿದ್ದರು.
Published on

ಶಿಕಾರಿಪುರ: ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ತಾಲೂಕುಗಳಲ್ಲಿ ಶಿಕಾರಿಪುರ ಮುಂಚೂಣಿಯಲ್ಲಿದ್ದು, ತಾಲೂಕಿನ ಸಮಗ್ರ ಅಭಿವೃದ್ಧಿ ನಮ್ಮ ಸಂಕಲ್ಪ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದಲ್ಲಿ ಪುರಸಭೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ಉತ್ಪಾದನೆ ಆಗುವ ಕಸವನ್ನು ಪೌರ ಕಾರ್ಮಿಕರು ಸುಸಜ್ಜಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ 15ನೇ ಹಣಕಾಸು ಹಾಗೂ ಎನ್‌ಎಂಪಿಸಿ ಮತ್ತು ಎಂಪಿಐಸಿ ಯೋಜನೆಯಡಿ ಖರೀದಿಸಿದ ಆಟೋ ಟಿಪ್ಪರ್, ಮಿನಿ ಹಿಟಾಚಿ, ಹಸಿ ಕಸ, ಒಣ ಕಸ ವಿಂಗಡಿಸಲು 20 ಸಾವಿರ ಡಸ್ಟ್ ಬಿನ್ ಸೇರಿದಂತೆ ಇತರ ಪ್ರಮುಖ ವಾಹನ ಹಾಗೂ ಸಲಕರಣೆಗಳನ್ನು ಪುರಸಭೆಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪಟ್ಟಣದ ಸೌಂದರ್ಯ ಹೆಚ್ಚಿಸಲು ಪ್ರಮುಖ ವೃತ್ತಗಳಲ್ಲಿ ಬಸವೇಶ್ವರ ಪುತ್ಥಳಿ, ಸಂಗೊಳ್ಳಿ ರಾಯಣ್ಣ ಪುತ್ಥಳಿ, ಅಂಬೇಡ್ಕರ್ ಪುತ್ಥಳಿ ಅಭಿವೃದ್ಧಿ ಸೇರಿದಂತೆ ಉದ್ಯಾನವನ, ರಸ್ತೆ, ಕಾರ್ಮಿಕರ ವಿಶ್ರಾಂತಿ ಕೊಠಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಸಂತಸವಾಗುತ್ತಿದೆ. ಪಟ್ಟಣದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕವಾಗಿ ಪುರಸಭೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಬೆಳೆನಷ್ಟಕ್ಕೆ ಹೆಚ್ಚಿನ ಪರಿಹಾರ ನೀಡಿ ಶಿಕಾರಿಪುರ ಸುಂದರವಾಗಿರಲು ಪುರಸಭೆ ಜತೆಗೆ ಸಾರ್ವಜನಿಕರ ಹೊಣೆಗಾರಿಕೆಯೂ ಇದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ತಾಲೂಕಿನ ಜನರು ಸ್ವಚ್ಛತೆ ವಿಚಾರದಲ್ಲಿ ಕೈಜೋಡಿಸಬೇಕು. ಮಹಿಳೆಯರ ಅನುಕೂಲಕ್ಕಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ. ನಿರಂತರ ಸುರಿದ ಮಳೆಯಿಂದ ರೈತರ ಬೆಳೆ ನಷ್ಟವಾಗಿದ್ದು, ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ಬೀದಿಬದಿ ವ್ಯಾಪಾರಸ್ಥರು, ಕ್ಯಾಂಟೀನ್ ನಡೆಸುತ್ತಿರುವವರಿಗೆ ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಕ್ಯೂಆರ್ ಕೋಡ್ ಹಾಗೂ ನಾಮಫಲಕ ವಿತರಣೆ ಮಾಡುತ್ತಿರುವುದರಿಂದ ಅವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ನೀರಾವರಿ ಯೋಜನೆಯಡಿ ಹೊನ್ನಾಳಿ ಹತ್ತಿರದ ಪುರದಕೆರೆ, ತುಂಗಭದ್ರಾ ನದಿಯಿಂದ ನೀರು ತಂದು ಉಡುಗಣಿ, ಹೊಸೂರು, ತಾಳಗುಂದ ಹೋಬಳಿಗಳ ಕೆರೆ ತುಂಬಿಸಲಾಗಿದೆ. ಹೊಸಳ್ಳಿ ಹತ್ತಿರ ತುಂಗಾ ನದಿಯಿಂದ ನೀರು ತಂದು ಅಂಜನಾಪುರ ಜಲಾಶಯಗಳ ಮೂಲಕ ಕೆರೆ ತುಂಬಿಸುವ ಕಾರ್ಯ ಆಗಿದೆ. ಕಾಳೇನಹಳ್ಳಿ ಭಾಗದ ರೈತರಿಗೆ ಅನುಕೂಲವಾಗಲು ಬ್ಯಾರೇಜ್ ನಿರ್ಮಿಸಲಾಗಿದೆ. ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ. ರೈತರ ಬೋರ್‌ವೆಲ್‌ಗಳು ರಿಚಾರ್ಜ್ ಆಗಿ ಕೃಷಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸ್ಥಾಯಿಸಮಿತಿ ಅಧ್ಯಕ್ಷ ರಮೇಶ್, ಸದಸ್ಯರಾದ ಪ್ರಶಾಂತ್ ಜೀನಳ್ಳಿ, ಶೈಲಾ ಮಡ್ಡಿ, ರೂಪಕಲಾ ಹೆಗಡೆ, ಪಾಲಾಕ್ಷಪ್ಪ, ಪುರಸಭೆ ಮುಖ್ಯಾಧಿಕಾರಿ ಭರತ್, ಕೆ.ಹಾಲಪ್ಪ, ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net