

ಸಾಗರ: ಸರ್ಕಾರಿ ಜಾಗದಲ್ಲಿ ಮನೆ ಕಟ್ಟುವುದು, ಒತ್ತುವರಿ ಮಾಡಿದ್ದಲ್ಲಿ ಕಾನೂನು ಪ್ರಕಾರ ತೆರವುಗೊಳಿಸಿ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಸಾಗರದ ತಹಸೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಪದೇಪದೆ ಒತ್ತುವರಿ ಮಾಡುವುದು ಕಣ್ತಪ್ಪಿನಿಂದ ಆಗಿದ್ದಲ್ಲ. ಉದ್ದೇಶಪೂರ್ವಕವಾಗಿ ಕೆಲವರು ಒತ್ತುವರಿ ಮಾಡುತ್ತಾರೆ. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಭೂಒತ್ತುವರಿ ತೆರವಿಗೆ ಕಂದಾಯ, ಪೊಲೀಸ್, ಅರಣ್ಯ ಮತ್ತು ಸ್ಥಳೀಯ ಸಂಸ್ಥೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್‌ಫೋರ್ಸ್ ರಚಿಸಲು ಉದ್ದೇಶಿಸಲಾಗಿದೆ. ಸೊರಬ ರಸ್ತೆ ಅಗಲೀಕರಣಕ್ಕೆ ಸ್ಥಳೀಯರು ಸಹಕಾರ ನೀಡಬೇಕು. ಭೂಸ್ವಾಧೀನಕ್ಕೆ ಸಂಬಂಧಿಸಿ ನೋಟಿಸ್ ನೀಡಲಾಗಿದೆ. ಎರಡೂವರೆ ತಿಂಗಳಿನಲ್ಲಿ ಭೂಸ್ವಾಧೀನ ಸೇರಿ ಎಲ್ಲ ಪ್ರಕ್ರಿಯೆ ಮುಗಿಸಲಾಗುತ್ತದೆ. ಸ್ಥಳೀಯರು ಆಡಳಿತಕ್ಕೆ ಸಹಕಾರ ನೀಡಬೇಕು. ಇಲ್ಲದಿದ್ದಲ್ಲಿ ಪೊಲೀಸ್ ರಕ್ಷಣೆಯಲ್ಲಿ ಪ್ರಕ್ರಿಯೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಸರ್ವೇ ಕಾರ್ಯ ನಡೆಯುತ್ತಿದೆ. 2021-22ನೇ ಸಾಲಿನಲ್ಲಿ ನಡೆಸಿದ್ದ ಜಂಟಿ ಸರ್ವೇಯನ್ನು ಪರಿಗಣಿಸಲಾಗುತ್ತಿದೆ. ಜತೆಗೆ ಹೊಸದಾಗಿ ಸರ್ವೇ ನಡೆಯುತ್ತಿದೆ. ಕೆಲವರು ನಮ್ಮ ಹೆಸರು ಬಿಟ್ಟು ಹೋಗಿದೆ ಎಂದು ದೂರಿದ್ದಾರೆ. ಇದನ್ನು ಮರುಪರಿಶೀಲನೆ ಮಾಡಲಾಗುತ್ತದೆ. ಸಂತ್ರಸ್ತರು ಯಾರು, ಒತ್ತುವರಿದಾರರು ಯಾರು ಎಂದು ಗುರುತಿಸುವುದು ಸವಾಲು ಎನ್ನುವಂತಾಗಿದೆ. ಅರ್ಹರಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಹೇಳಿದರು.
ಮಂಕೋಡು ಗ್ರಾಮದಲ್ಲಿ ಅಕ್ರಮ ಒತ್ತುವರಿ ಬಗ್ಗೆ ಸಾಕಷ್ಟು ದೂರುಗಳಿರುವ ಹಿನ್ನೆಲೆಯಲ್ಲಿ ತನಿಖೆ ಮಾಡುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿದೆ. ನಗರವ್ಯಾಪ್ತಿಯಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಅಕ್ರಮ ಯಾರೇ ನಡೆಸಿದರೂ ಅವರ ವಿರುದ್ಧ ಕ್ರಮ ನಿಶ್ಚಿತ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ವಿರೇಶ್‌ಕುಮಾರ್, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇತರರಿದ್ದರು.